Wednesday, 11th December 2024

Loan App Torture: ಲೋನ್ ಆ್ಯಪ್‌ನಲ್ಲಿ ಕೇವಲ 2 ಸಾವಿರ ರೂ. ಸಾಲ ಮಾಡಿ ಆತ್ಮಹತ್ಯೆಗೆ ಶರಣಾದ ನವ ವಿವಾಹಿತ

Loan App Torture

ಹೈದರಾಬಾದ್: ಆನ್‌ಲೈನ್ ಲೋನ್ ಆ್ಯಪ್‌ಗಳ (instant loan app) ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಳ್ಳುವವರ ಸುದ್ದಿ ಅಲ್ಲೊಂದು ಇಲ್ಲೊಂದು ವರದಿಯಾಗುತ್ತಲೇ ಇರುತ್ತದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ, ಲೋನ್ ಆ್ಯಪ್‌ನ ಕಿರುಕುಳಕ್ಕೆ (Loan App Torture) ಬೇಸತ್ತು ನವ ವಿವಾಹಿತನೊಬ್ಬ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಆಂಧ್ರ ಪ್ರದೇಶದ (Andhra Pradesh) ವಿಶಾಖಪಟ್ಟಣಂ (Visakhapatnam)ನಿಂದ ವರದಿಯಾಗಿದೆ.

ದುರಂತವೆಂದರೆ ಆನ್‌ಲೈನ್ ಲೋನ್ ಆ್ಯಪ್‌ನವರು ಕೇವಲ 2 ಸಾವಿರ ರೂ. ಬಾಕಿ ಮೊತ್ತಕ್ಕೆ 22 ವರ್ಷದ ನರೇಂದ್ರ ಎಂಬ ಈ ವ್ಯಕ್ತಿಗೆ ನಿರಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಈ ನವವಿವಾಹಿತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯಂತೆ, ವೃತ್ತಿಯಲ್ಲಿ ಮೀನುಗಾರನಾಗಿರುವ ನರೇಂದ್ರ ಪ್ರತಿಕೂಲ ಹವಾಮಾನದ ಕಾರಣದಿಂದ ಕಳೆದ ಕೆಲವು ತಿಂಗಳುಗಳಿಂದ ಮೀನುಗಾರಿಕೆಗೆ ಹೋಗಲಾಗದೆ ಮನೆಯಲ್ಲೇ ಇದ್ದರು. ಈ ಸಂದರ್ಭದಲ್ಲಿ ಅವರು ಇನ್‌ಸ್ಟಂಟ್‌ ಲೋನ್ ಆ್ಯಪ್‌ ಮೂಲಕ 2 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರು. ನರೇಂದ್ರ ಅವರು ತಾವು ಪಡೆದುಕೊಂಡಿದ್ದ ಎರಡು ಸಾವಿರ ರೂಪಾಯಿಗಳನ್ನು ಹಿಂಪಾವತಿ ಮಾಡಿದ್ದರೂ, ಸಾಲ ನೀಡಿದ ಸಂಸ್ಥೆಯ ಕೆಲ ವ್ಯಕ್ತಿಗಳು ಬಡ್ಡಿಯ ರೂಪದಲ್ಲಿ ದೊಡ್ಡ ಮೊತ್ತವನ್ನು ನೀಡುವಂತೆ ಅವರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ತನಗೆ ಪಾವತಿಸಲು ಸಾಧ್ಯವಿಲ್ಲ ಎಂದು ನರೇಂದ್ರ ಹೇಳಿದಾಗ ಸಾಲ ನೀಡಿದವರು ಆತನನ್ನು ಕೆಟ್ಟದಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಇನ್ನು ನರೇಂದ್ರ ಅವರು ಅ. 20ರಂದು ವಿವಾಹವಾಗಿದ್ದರು. ಲೋನ್ ಆ್ಯಪ್‌ನವರು ನರೇಂದ್ರ ಮತ್ತು ಅವರ ಪತ್ನಿಯ ಮಾರ್ಫ್ ಮಾಡಲಾದ ನಗ್ನ ಫೋಟೊವನ್ನು ವ್ಯಾಟ್ಸ್‌ ಆ್ಯಪ್‌ನಲ್ಲಿ ಅವರ ಗೆಳೆಯರ ಬಳಗಕ್ಕೆ ಕಳುಹಿಸುವ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಪಾರಂಭಿಸಿದ್ದರು.

ಕಿರುಕುಳದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೆ ಒಳಗಾಗಿದ್ದ ನರೇಂದ್ರ ಕೊನೆಗೆ ಡಿ. 7ರಂದು ನೇಣಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಲೋನ್ ಆ್ಯಪ್‌ನ ಎಕ್ಸಿಕ್ಯೂಟಿವ್ ನರೇಂದ್ರ ಅವರ ಫೋನನ್ನು ಹ್ಯಾಕ್ ಮಾಡಿ ಅಲ್ಲಿಂದ ನರೇಂದ್ರ ಮತ್ತು ಅವರ ಪತ್ನಿಯ ಫೋಟೊ ಪಡೆದುಕೊಂಡು ಅದನ್ನು ಮಾರ್ಫ್ ಮಾಡಿ ಈ ನಗ್ನ ಸ್ವರೂಪದ ಫೋಟೊ ವ್ಯಾಟ್ಸ್‌ ಆ್ಯಪ್‌ ಮೂಲಕ ಇವರ ಬಳಗದಲ್ಲೆಲ್ಲಾ ಹರಿಬಿಟ್ಟಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: Udayasthamana Pooja: ಗುರುವಾಯೂರ್‌ನಲ್ಲಿ ಉದಯಾಸ್ತಮಾನ ಪೂಜೆ ಸ್ಥಗಿತ-ಸುಪ್ರೀಂ ಕೋರ್ಟ್‌ ನೊಟೀಸ್‌

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಅವರ ಕುಟುಂಬದವರು ಪೊಲಿಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಭಾರತಿಯ ನ್ಯಾಯ ಸಂಹಿತೆಯ ಸೆಕ್ಷನ್ 108 ಹಾಗೂ ಸಂಬಂಧಿತ ಐಟಿ ಕಾಯ್ದೆಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಮುಂದಿನ ತನಿಖೆಗಾಗಿ, ಸಂತ್ರಸ್ತ ನರೇಂದ್ರನ ಮೊಬೈಲ್ ಫೋನನ್ನು ಸೈಬರ್ ಫಾರೆನ್ಸಿಕ್ ಪರಿಶೀಲನೆಗಾಗಿ ಪಡೆದುಕೊಳ್ಳಲಾಗಿದೆ ಮತ್ತು ನಗರ ಪೊಲೀಸ್‌ನ ಸೈಬರ್ ಕ್ರೈಂ ವಿಭಾಗದವರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಅಸಿಸ್ಟೆಂಟ್ ಪೊಲೀಸ್ ಕಮಿಷನರ್ (ಪೂರ್ವ ವಿಭಾಗ) ಕೆ.ಲಕ್ಷ್ಮಣ ಮೂರ್ತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.