Thursday, 12th December 2024

Harish Kera Column: ಐತಿಹಾಸಿಕ ಕಾದಂಬರಿ ಎಂಬ ಥ್ಯಾಂಕ್‌ ಲೆಸ್‌ ಜಾಬ್‌

ಕಾಡುದಾರಿ

ಹರೀಶ್‌ ಕೇರ

ಇತಿಹಾಸವೇ ಅಸಾಧಾರಣ ಕಥೆಗಳಿಂದ ತುಂಬಿ ಹೋಗಿದೆ. ನನ್ನ ಹೊಸ ಪುಸ್ತಕದಲ್ಲಿ ಅಹ್ಮದ್ ಶಾ ಗಲಿ ಎಂಬ ಒಬ್ಬ ಮುಸ್ಲಿಂ ರಾಜನ ಕಥೆಯಿದೆ. ಅವನು ಆಹಾರ ಸೇವಿಸುವಾಗ ಅವನ ಮೂಗಿನಿಂದ ಹುಳಗಳು ಕೆಳಗೆ ಬೀಳುತ್ತಿದ್ದವು. ಯಾಕೆಂದರೆ ಅವನ ಮುಖದ ತುಂಬೆ ಟ್ಯೂಮರ್ ಗಡ್ಡೆಗಳಿದ್ದವು, ವ್ರಣವಾಗಿತ್ತು. ಇದು ಇತರರಿಗೆ ಗೊತ್ತಾಗದಿರಲಿ ಎಂದು ಅವನು ಬೆಳ್ಳಿಯ ಮುಖವಾಡ ಧರಿಸುತ್ತಿದ್ದ. ಇಂಥದು ಎದರೂ ಕೇಳಿದ್ದೀರಾ? ಇಂಥ ಅಸಾಮಾನ್ಯ ನಿಜ ಸಂಗತಿಗಳೇ ಇರುವಾಗ ಊಹಿಸಿಕೊಂಡು ಕಥೆ ಬರೆಯಬೇಕಾದರೂ ಯಾಕೆ?”- ಹಾಗಂತ ಒಂದು ಕಡೆ ವಿಲಿಯಂ ಡಾಲ್ರಿಂಪಲ್ ಹೇಳಿದ್ದ.

ಇವನು ಇತಿಹಾಸದ ಸಂಗತಿಗಳನ್ನು ಎತ್ತಿಕೊಂಡು ಬರೆಯುವ ನಾನ್ ಫಿಕ್ಷನ್ ಬರಹಗಾರ. ಮುಖ್ಯವಾಗಿ ಭಾರತ ದಲ್ಲಿನ ಮೊಘಲ್ ಅಳ್ವಿಕೆಯ ಕುರಿತು ಗಣನೀಯ ಸಾಹಿತ್ಯ ನೀಡಿದ್ದಾನೆ. ಈ ಮಾತು ಏಕಕಾಲದಲ್ಲಿ ನಮ್ಮ ಐತಿಹಾಸಿಕ ಕಾದಂಬರಿಕಾರರಿಗೆ ನೆಮ್ಮದಿಯನ್ನೂ ಸಿಟ್ಟನ್ನೂ ತರುವಂತಿದೆ. ನೆಮ್ಮದಿ ಯಾಕೆಂದರೆ, ಇತಿಹಾಸದಲ್ಲಿ ಕಲ್ಪನೆಗಿಂತಲೂ ಸೋಜಿಗಕಾರಿ ವಾಸ್ತವಗಳು ತುಂಬಿವೆ ಎಂಬ ಸಮಾಧಾನ. ಸಿಟ್ಟು ಯಾಕೆಂದರೆ ನಮ್ಮ ಕಲ್ಪನೆ-ಬರಹದ ಪ್ರತಿಭೆಯನ್ನು ನಿಜದ ಮುಂದೆ ಏನೂ ಅಲ್ಲ ಎನ್ನುತ್ತಿದ್ದಾನಲ್ಲ ಎಂಬ ಕಾರಣಕ್ಕೆ.

ಅದಿರಲಿ, ಕನ್ನಡದಲ್ಲಿ ಈಗ ಐತಿಹಾಸಿಕ ಕಾದಂಬರಿಗಳ ಸುಗ್ಗಿಯ ಕಾಲ ಎಂದು ತುಂಬಾ ಮಂದಿ ಹೇಳುತ್ತಿದ್ದಾರೆ. ಇದು ಅರ್ಧಸತ್ಯ. ಐತಿಹಾಸಿಕ ಕಾದಂಬರಿಗಳು ಎಂದಿನಿಂದಲೂ ಕನ್ನಡದಲ್ಲಿ ಬೇಡಿಕೆಯಲ್ಲಿದ್ದವು. ಮಾಸ್ತಿ, ಬೆಟಗೇರಿ ಕೃಷ್ಣಶರ್ಮ, ಕೆ.ವಿ. ಅಯ್ಯರ್, ತರಾಸು ಅವರು ಬರೆಯುತ್ತಿದ್ದ ಕಾಲದಿಂದಲೂ ಅವು ನಾನಾ ರೂಪ, ಅವತಾರ ಗಳಲ್ಲಿ ಇವೆ. ತರಾಸು ಅವರ ‘ದುರ್ಗಾಸ್ತಮಾನ’ವನ್ನೇ ನೋಡುವುದಾದರೆ, ಭರ್ತಿ ಒಂದು ಸಾವಿರ ಪುಟಗಳಷ್ಟಿದ್ದ ಅದು ಸಾಕಷ್ಟು ರೋಚಕವಾಗಿಯೂ ಇತ್ತು.

ಮದಕರಿ ನಾಯಕನ ಉತ್ಥಾನ ಮತ್ತು ಪತನದ ಕಥೆಯನ್ನು ಹೊಂದಿದ್ದ ಅದು ಇಂದು ಕೂಡ ಜನಪ್ರಿಯ. ಹಾಗೆಯೇ ಮಾಸ್ತಿಯವರ ‘ಚಿಕವೀರ ರಾಜೇಂದ್ರ’ ಕೂಡ. ಇಂದು ಈ ಕಾದಂಬರಿಗಳ ಸಂಖ್ಯೆ ಸ್ವಲ್ಪ ಹೆಚ್ಚಾಗಿರಬಹುದು. ಹಾಗಂತ ಇದು ಐತಿಹಾಸಿಕ ಕಾದಂಬರಿಗಳ ಸುವರ್ಣಯುಗ ಎಂಬ ತೀರ್ಮಾನಕ್ಕೆ ಬರಬೇಕಿಲ್ಲ. ಕನ್ನಡದಲ್ಲಿ ಇವುಗಳ ಇತಿಹಾಸ ನೋಡಿದರೆ ಗಮನಿಸಬಹುದಾದ ಒಂದು ಅಂಶ- ಹೆಚ್ಚಿನ ಕಾದಂಬರಿಕಾರರು ಇತಿಹಾಸದ ಮಹಾಪುರುಷರನ್ನು ಕೇಂದ್ರೀಕರಿಸಿ ಬರೆದಿದ್ದಾರೆ. ಈ ಲೇಖಕರು ಮೊದಲಿಗೆ ಒಬ್ಬ ಕಥಾನಾಯಕನನ್ನು ಆರಿಸಿ ಕೊಳ್ಳುತ್ತಾರೆ. ನಂತರ ಅವನ ಜೀವನದ ಸುತ್ತ ಕಥೆಯನ್ನು ಹೆಣೆಯುತ್ತಾರೆ- ಚಿಕವೀರ ರಾಜೇಂದ್ರ, ದುರ್ಗಾಸ್ತಮಾನ, ಅಯ್ಯರ್ ಅವರ ‘ಶಾಂತಲಾ’ ಮೊದಲಾದವು. ಈ ರೂಢಿಯನ್ನು ಮುರಿದ ಕಾದಂಬರಿಗಳೂ ಇದ್ದವು. ವಿಜಯನಗರ ಸಾಮ್ರಾಜ್ಯದ ಇತಿಹಾಸ ಹೊಂದಿರುವ ಗಳಗನಾಥರ ‘ಮಾಧವ ಕರುಣಾವಿಲಾಸ’, ‘ಕನ್ನಡಿಗರ ಕರ್ಮಕಥೆ’ ಇದಕ್ಕೆ ಉದಾಹರಣೆ. ಹನೂರು ಕೃಷ್ಣಮೂರ್ತಿಯವರ ‘ಅಜ್ಞಾತನೊಬ್ಬನ ಆತ್ಮಚರಿತ್ರೆ’, ಇತ್ತೀಚಿನ ವಸುಧೇಂದ್ರರ ‘ರೇಷ್ಮೆ ಬಟ್ಟೆ’ಗಳನ್ನು ಇಲ್ಲಿ ನೆನೆಯಬಹುದು.

ಇವು ಒಂದು ಕಾಲಘಟ್ಟವನ್ನು ಮುಂದಿಟ್ಟುಕೊಂಡು, ಅಂದಿನ ಜನಜೀವನದ ಸುತ್ತ ಹಬ್ಬಿಸಲ್ಪಟ್ಟಿವೆ. ಇಲ್ಲಿ ಯಾವುದೇ ಒಬ್ಬ ಮಹಾಪುರುಷನಿಗೆ ಕೆಲಸವಿಲ್ಲ. ಆಯಾ ಕಾಲಮಾನದ ಪಲ್ಲಟಗಳು ಮತ್ತು ಶ್ರೀಸಾಮಾನ್ಯನೇ ಇಲ್ಲಿ ಕಥಾವಸ್ತು. ಮೊದಲ ಬಗೆಯಲ್ಲಿ ಲೇಖಕನಿಗೆ ಸ್ವಾತಂತ್ರ ಕಡಿಮೆ. ಆತ ಇತಿಹಾಸಕ್ಕೆ ಹೆಚ್ಚು ಹತ್ತಿರವಾಗಿರಬೇಕಾಗಿರು ತ್ತದೆ. ಆ ಮಹಾನ್ ವ್ಯಕ್ತಿಯ ಜೀವನ ಸುಮಾರು ಮಟ್ಟಿಗೆ ದಾಖಲಾಗಿರುತ್ತದೆ. ಅದನ್ನು ಮೀರಲು ಆಗುವುದಿಲ್ಲ. ಎರಡನೇ ಬಗೆಯದರಲ್ಲಿ ಸ್ವಾತಂತ್ರ ಹೆಚ್ಚು, ಕಲ್ಪನೆಗೆ ಅಸೀಮಿತ ಅವಕಾಶ. ಓದುಗರು ಎರಡೂ ಥರದವು ಗಳನ್ನೂ ಸಮಾನವಾಗಿ ಮೆಚ್ಚಿದ್ದಾರೆ.

ಎರಡೂ ಬಗೆಯ ಕಾದಂಬರಿಗಳಲ್ಲೂ ಕಥೆಗಾರನಿಗೆ ಬಹಳಷ್ಟು ಹೊಣೆಗಾರಿಕೆ ಇರಬೇಕಾಗುತ್ತದೆ. ಜವಾಬ್ದಾರಿಯುತ ಲೇಖಕ ಇದನ್ನು ಹೊರುತ್ತಾನೆ. ಅವನು ತಾನು ಚಿತ್ರಿಸುತ್ತಿರುವ ಕಾಲದ ಸಾಮಾಜಿಕ-ಸಾಂಸಾರಿಕ-ವಾಣಿಜ್ಯ ವ್ಯವಹಾರ ಇತ್ಯಾದಿಗಳ ವಿವರಗಳಿಗೆ ಬದ್ಧನಾಗಿರಬೇಕಾಗುತ್ತದೆ. ಆ ವಿವರಗಳನ್ನು ಓದಿಯೋ ಇತರ ಮೂಲ ಗಳಿಂದಲೋ ಸಂಪಾದಿಸಬೇಕಾಗುತ್ತದೆ. ಮಹಾಪುರುಷರ ಕಥೆಗಳೇನೋ ಸಿಗುತ್ತವೆ; ಆದರೆ ಸಾಮಾನ್ಯರ ಜೀವನದ ವಿವರಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ನೂರು ವರ್ಷಗಳ ಈಚಿನವುಗಳಾದರೆ ಗೆಜೆಟಿಯರ್‌ಗಳಲ್ಲಿರುತ್ತವೆ. ಅದಕ್ಕಿಂತ ಹಿಂದಿನವುಗಳು ಕೆಲವು ಶಾಸನಗಳಲ್ಲಿ, ವಿದೇಶಿ ಪ್ರವಾಸಿಗರ ಕಥನಗಳಲ್ಲಿ ಸಿಗುತ್ತವೆ. ಅದಕ್ಕೂ ಹಿಂದಿನವುಗಳಿಗೆ ಧಾರ್ಮಿಕ-ಶಾಸ್ತ್ರ ಗ್ರಂಥಗಳನ್ನು ತಡಕ ಬೇಕು.

ಹೀಗೆ ಸಂಗ್ರಹಿಸಿದ ವಿವರಗಳೂ ನೂರಕ್ಕೆ ನೂರು ನಿಜ ಎನ್ನಲು ಬರುವುದಿಲ್ಲ. ಉದಾಹರಣೆಗೆ ಗೌತಮ ಬುದ್ಧರ ಕಾಲದ ವಿವರಗಳೆಲ್ಲ ಆತನಿಂದ 3-4 ತಲೆಮಾರು ನಂತರದವರು ಬರೆದು ಸಂಗ್ರಹಿಸಿದಂಥವು. ಇಂದು ನಾವು ನಮಿಸುವ ಬುದ್ಧನ ಮೂರ್ತಿಗಳು ಅವರ ಎಷ್ಟೋ ಕಾಲದ ನಂತರ ಬಂದ ಗ್ರೀಕ್ ಶಿಲ್ಪಿಗಳು ಚಿತ್ರಿಸಿದ ಪರಿಕಲ್ಪನೆ. ಜೈನ ತೀರ್ಥಂಕರರ ಮೂರ್ತಿಗಳೂ ಅಷ್ಟೆ. ಹೀಗಿರುತ್ತ, ನಾವು ಆ ಕಾಲದ ಭಾಷೆ- ಸಾಹಿತ್ಯದಲ್ಲಿ ದಾಖಲಾದ ವಿವರ ಗಳನ್ನು ನೆಚ್ಚಬೇಕು. ಇವು ಕೂಡ ಕುರುಡರು ಆನೆಯನ್ನು ಮುಟ್ಟಿದಂತೆಯೇ.

ಇಷ್ಟನ್ನಿಟ್ಟುಕೊಂಡು ಕಥೆಗಾರ ಇತಿಹಾಸದ ಕಾದಂಬರಿ ಬರೆಯಲು ಹೊರಡಬೇಕಾಗುತ್ತದೆ. ಆಗ ಅವನ ಮುಂದೆ ಅಗಾಧವಾಗಿ ನಿಲ್ಲುವ ಸವಾಲು ಎಂದರೆ- ತಾನು ಸಂಗ್ರಹಿಸಿದ ಇಷ್ಟೊಂದು ವಿವರಗಳನ್ನು ಎಲ್ಲಿ ಹೇಗೆ ಬಳಸಬೇಕು ಎಂಬುದು. ವಿವರಗಳು ಇದ್ದಾಗ ಕಾದಂಬರಿ ಅಥೆಂಟಿಕ್ ಆಗುತ್ತದೆ, ನಿಜ. ಆದರೆ ವಿವರಗಳು ಹೆಚ್ಚಾಗಬಾರದು. ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ನಿರ್ಧರಿಸುವುದು ಹೇಗೆ? ಅದಕ್ಕೆ ಅಳತೆಗೋಲು ಇಲ್ಲ. ‘ವಿವರಗಳು ಹೆಚ್ಚು, ಕಥೆ ಕಡಿಮೆ, ಬೋರಿಂಗ್’ ಎಂದು ವಿಮರ್ಶಕರು ಕಾದಂಬರಿಯನ್ನು ತಳ್ಳಿಹಾಕುವ ಸಾಧ್ಯತೆ ಹೆಚ್ಚು. ವಿವರಗಳನ್ನೇ ಕೊಡದಿದ್ದರೆ ಇದೇ ವಿಮರ್ಶಕರು ‘ಕಾಗಕ್ಕ ಗುಬ್ಬಕ್ಕನ ಕಥೆ’ ಎಂದು ಹೇಳುವ ಸಾಧ್ಯತೆಯೂ ಇಲ್ಲದಿಲ್ಲ. ವೀರರ ಕಥೆಗಳನ್ನು ಬರೆಯುವವನು ತನ್ನ ಕಥೆಗಾರಿಕೆಯ ಕುದುರೆಗೆ ಸ್ವಲ್ಪ ಕಡಿವಾಣ ಹಾಕ ಬೇಕಾಗು ತ್ತದೆ. ಈಗಾಗಲೇ ದಾಖಲಾಗಿರುವ ಕಥೆಯನ್ನು ತಳ್ಳಿ ಹಾಕುವ ಸತ್ಯಗಳನ್ನು ದಾಖಲಿಸಲು ಮುಂದಾದರೆ, ಅದಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸಬೇಕಾಗುತ್ತದೆ.

ಆಗಲೂ ಆ ದಾಖಲೆಗಳು ಅಧಿಕೃತವೇ, ಏಕಪಕ್ಷೀಯ ಅಲ್ಲವೇ ಎಂಬ ಪ್ರಶ್ನೆ ಬಂದೇ ಬರುತ್ತದೆ. ಉದಾಹರಣೆಗೆ, ಭೈರಪ್ಪನವರು ಬರೆದ ‘ಆವರಣ’ ಎಂಬ ಕಾದಂಬರಿಯ ಬಿಬ್ಲಿಯೋಗ್ರಫಿಯಲ್ಲಿ ನೀಡಲಾಗಿರುವ ಆಧಾರಕೃತಿಗಳೆಲ್ಲ ಏಕಪಕ್ಷೀಯ ಎಂಬ ಆರೋಪ ಬಂತು. ಹೀಗೆ ಐತಿಹಾಸಿಕ ಕಾದಂಬರಿ ಬರೆಯುವವನದು ಯಾವಾಗಲೂ ಥ್ಯಾಂಕ್‌ ಲೆಸ್ ಜಾಬ್. ಬಹಳ ಮಂದಿ ಆತನ ಕಷ್ಟ, ಪರಿಶ್ರಮವನ್ನು ಗುರುತಿಸುವುದಿಲ್ಲ. ಹೇಗೆ ಬರೆದರೂ ಒಂದಲ್ಲ ಒಂದು ಕೊಂಕನ್ನು ಎದುರಿಸಬೇಕಾಗುತ್ತದೆ. ಒಂದೆರಡು ನೂರು ವರ್ಷಗಳ ಹಿಂದಿನ ಕಥೆ ಬರೆದರೆ, ಆ ಕಥೆಯ ನಿಜಪುರುಷರ ಉತ್ತರಾಧಿಕಾರಿಗಳೋ, ಜಾತ್ಯಸ್ಥರೋ, ಅದೇ ಧರ್ಮೀಯರೋ ತಗಾದೆ ತೆಗೆಯುವ ಸಾಧ್ಯತೆಗಳೇ ಅಧಿಕ.

ಆಗ ಬರಹಗಾರನ ಹಿನ್ನೆಲೆ ಮುನ್ನೆಲೆಗಳೂ ಚರ್ಚೆಗೆ ಬರುತ್ತವೆ. ಆತನ ಪಂಥೀಯತೆ, ನಿಲುವುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಹೀಗೆ ಕಟಕಟೆಯಲ್ಲಿ ನಿಲ್ಲದ ಇತಿಹಾಸ ಕಾದಂಬರಿಕಾರರೇ ಇಲ್ಲವೇನೋ. ಇಷ್ಟೆಲ್ಲ ಅಪಾಯ ಮೈಮೇಲೆ ಎಳೆದುಕೊಂಡು ಒಬ್ಬ ಕೃತಿಕಾರ ಯಾಕೆ ಇತಿಹಾಸ ಕಾದಂಬರಿ ರಚಿಸುತ್ತಾನೆ? ಇದೀಗ ಒಳ್ಳೆಯ ಪ್ರಶ್ನೆ. ಅಪಾಯ ಇದೆ ಎಂದು ಗೊತ್ತಿದ್ದರೂ ಬಂಗೀ ಜಂಪಿಂಗ್ ಮಾಡುವವರಿಲ್ಲವೆ? ಇದೂ ಅಂಥದೇ ಒಂದು ಥ್ರಿಲ್ ಎಂದು ಹೇಳಿ ಕೈತೊಳೆದುಕೊಂಡುಬಿಡಬಹುದು. ಆದರೆ ಇದಕ್ಕಿಂತಲೂ ಗಾಢವಾದುದು ಇನ್ನೇನೋ ಇದೆ. ಮನುಷ್ಯನ ಜೀನ್‌ನಲ್ಲೇ ಮೂಲ ಹುಡುಕುವ ಹುಕಿ ಯೊಂದಿದೆ. ಒಂದು ಪ್ರಾಯದ ನಂತರ ತಮ್ಮ ವಂಶವೃಕ್ಷವನ್ನು ರಚಿಸಲು ಮುಂದಾಗುವ ಹಿರಿಯರನ್ನು ನಾವು ನೀವೆಲ್ಲ ನಮ್ಮ ಕುಟುಂಬಗಳಲ್ಲಿ ನೋಡಿಯೇ ಇರುತ್ತೇವಲ್ಲವೆ? ಇದೆಲ್ಲ ಹೀಗೇ ನಡೆಯಿತು, ಹೀಗೂ ನಡೆದಿರ ಬಹುದು ಎಂದು ಭಾವಿಸುವುದೆಲ್ಲ ಮನುಷ್ಯ ಸ್ವಭಾವ. ಅದನ್ನು ಜತೆಗಾರರಿಗೆ ಹೇಳದಿರುವುದು ಕಥೆಗಾರರಿಗೆ ಕಷ್ಟ.

ಮಹಾಭಾರತವನ್ನು ಇತಿಹಾಸ ಎನ್ನುತ್ತಾರೆ. ಮಹಾಭಾರತದ ಘಟನೆಗಳು, ವಿವರಗಳನ್ನು ಆಧರಿಸಿ ಅದರ ಕಾಲವನ್ನು ಲೆಕ್ಕ ಹಾಕಲಾಗಿದೆ. ಕಥೆಗಳ ಒಳಗೆ ಕಥೆ, ಇತಿಹಾಸದ ಒಳಗೆ ಇತಿಹಾಸ ಹೆಣೆದುಕೊಂಡಿರುವುದು ಇದರ ವಿಶಿಷ್ಟತೆ. ಈ ದೇಶದ ಮೊದಲ ಐತಿಹಾಸಿಕ ಕಾದಂಬರಿಕಾರ ಹಾಗೂ ಓದುಗ ಇಬ್ಬರೂ ಈ ಮಹಾಭಾರತದ ಒಳಗೇ ಇದ್ದಾರೆ. ಅರಸ ಜನಮೇಜಯ ತನ್ನ ತಂದೆ ಪರೀಕ್ಷಿತನನ್ನು ಕೊಂದ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಲು ಸರ್ಪಯಜ್ಞ ನಡೆಸುತ್ತಾನೆ. ಅಲ್ಲಿಗೆ ಬಂದ ಆಸ್ತಿಕ, ಜನಮೇಜಯನ ಮನವೊಲಿಸಿ ಅದನ್ನು ನಿಲ್ಲಿಸುತ್ತಾನೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಮುನಿ ವೈಶಂಪಾಯನನಿಗೆ ನನ್ನ ಪೂರ್ವಜರ ಕಥೆಯನ್ನು ಹೇಳು ಎಂದು ಜನಮೇಜಯನು ವಿನಂತಿಸುತ್ತಾನೆ. ಹೀಗೆ ವೇದವ್ಯಾಸರಿಂದ ರಚಿತವಾಗಿ ತಮಗೆ ಹೇಳಲ್ಪಟ್ಟ ಪಾಂಡವ-ಕೌರವರ ಕಥೆಯನ್ನು ವೈಶಂಪಾಯನ ಮುನಿಯು ಜನಮೇಜಯನಿಗೆ ಹೇಳುತ್ತಾನೆ. ಇದನ್ನು ಆ ಯಜ್ಞದಲ್ಲಿ ಕೇಳಿಸಿಕೊಂಡ ಸೂತ ಪುರಾಣಿಕರು, ನೈಮಿಷಾರಣ್ಯದಲ್ಲಿ ಋಷಿಗಳಿಗೆ ಬಂದು ಹೇಳುತ್ತಾರೆ.

ಹೀಗೆ ಕೇಳಿಸಿಕೊಳ್ಳುವವರು, ಓದುವವರು ಇಲ್ಲದಿದ್ದರೆ ಕಥೆಗಾರ ಕಥೆ ಬರೆಯಲು ಮುಂದಾಗುವುದು ಕಷ್ಟ. ಇದು ಎಲ್ಲ ಬಗೆಯ ಕಥೆಗಳಿಗೂ ಅನ್ವಯವಾಗುತ್ತದಾದರೂ, ನನ್ನ ಕಥೆಯನ್ನು ಹೇಳಿ, ನಮ್ಮ ಪೂರ್ವಜರ ಕಥೆಯನ್ನು ಹೇಳಿ ಎಂದು ಕೇಳುವವರನ್ನು ಎದುರಿಸಿ ಗೆಲ್ಲುವುದು ಕಡುಕಷ್ಟ. ಇಂಥ ಸುಖವಾದ ಕಷ್ಟವನ್ನು ಎದುರಿಸಿ ಗೆಲ್ಲಲು ಪ್ರತಿ ಲೇಖಕನೂ ಒಳಗೊಳಗೇ ಬಯಸುತ್ತಿರುತ್ತಾನೆ ಅನಿಸುತ್ತದೆ. ಕೆಲವರು ಆ ಕಷ್ಟವನ್ನು ಕೈಗೆತ್ತಿಕೊಳ್ಳುತ್ತಾರೆ, ಉಳಿದವರು ಇಲ್ಲ ಅಷ್ಟೇ. ಐತಿಹಾಸಿಕ ಕಾದಂಬರಿಯಲ್ಲಿ ಓದುಗ ಏನು ಬಯಸುತ್ತಾನೆ ಎಂಬುದಕ್ಕೂ ಇಲ್ಲಿಯೇ ಉತ್ತರವಿದೆ.

ಲೇಖಕ, ಓದುಗ ಇಬ್ಬರೂ ಸೇರಿ ತಮ್ಮದೊಂದು ಚರಿತ್ರೆಯನ್ನು ಕಟ್ಟಿಕೊಳ್ಳಲು ಏಕಕಾಲಕ್ಕೆ ಬಯಸುತ್ತಿರುತ್ತಾರೆ. ಇಲ್ಲಿ ಓದುಗನೊಳಗಿರುವ ಕಥೆಗಾರ ಹಾಗೂ ಕಥೆಗಾರನೊಳಗಿರುವ ಓದುಗ ಪರಸ್ಪರ ಮುಖಾಮುಖಿಯಾಗಿ ತಮ್ಮ ಜೀವ ವಾಹಿನಿಯನ್ನು ತೊಟ್ಟಿಲಲ್ಲಿರಿಸಿ ತೂಗುತ್ತಿರುತ್ತಾರೆ. ಹಾಗೆ ನೋಡಲಾಗಿ, ಐತಿಹಾಸಿಕ ಕಾದಂಬರಿ ಎಂಬುದು ಕಾಲದ ಕೈಗೂಸು. ಅದು ಬರೆದವನಿಗೂ, ಓದುಗನಿಗೂ, ಕಥೆಗಾರನಿಗೆ ಕಥೆಯನ್ನು ಕೊಟ್ಟ ಅದಕ್ಕೂ ಹಿಂದಿನ ಎಲ್ಲ ಚರಿತ್ರಕಾರರಿಗೂ ಸೇರಿದ್ದು. ಆದ್ದರಿಂದ, ‘ನಾನು ಈ ಕಾದಂಬರಿ ಬರೆದೆ’ ಎಂದು ಐತಿಹಾಸಿಕ ಕಾದಂಬರಿಕಾರ ಎದೆಯುಬ್ಬಿಸಿ ಹೇಳಿ ಕೊಳ್ಳುವಂತಿಲ್ಲ. ಅವನು ಈ ಕಥೆಯನ್ನು ತನ್ನಲ್ಲಿ ಮೂಡಿಸಿದ ಈ ಜಗತ್ತಿನ ಭವ್ಯ ವಿನ್ಯಾಸಕ್ಕೆ ಋಣಿಯಾಗಿರ ಬೇಕಾಗುತ್ತದೆ. ಐತಿಹಾಸಿಕ ಕಾದಂಬರಿಕಾರನ ಕಷ್ಟವೇ!

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ