Thursday, 12th December 2024

Devendra Fadnavis: ʼಮಹಾʼ ಸಚಿವರ ಅಂತಿಮ ಪಟ್ಟಿ ಫೈನಲ್?‌ ಇಂದು ಅಮಿತ್‌ ಶಾ ಭೇಟಿಯಾಗಲಿರುವ ಸಿಎಂ ಫಡ್ನವೀಸ್‌

Devendra Fadnavis

ಮುಂಬೈ: ಮಹಾರಾಷ್ಟ್ರದಲ್ಲಿ ಸಿಎಂ (Maharashtra Chief Minister) ಆಯ್ಕೆಯ ಕಗ್ಗಂಟು ಸುಖಾಂತ್ಯ ಕಂಡಿದ್ದರೂ, ಸಚಿವ ಸ್ಥಾನ ಹಂಚಿಕೆ ಇನ್ನೂ ಬಾಕಿ ಇದೆ. ಮಹಾಯುತಿಯ ಮೂರು ಮಿತ್ರಪಕ್ಷಗಳಾದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ನಡುವೆ ಸಚಿವ ಸ್ಥಾನವನ್ನು ಸಮನಾಗಿ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್‌ ಜೊತೆ ಮಾತನಾಡಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ದೆಹಲಿಗೆ ತೆರಳಿದ್ದಾರೆ.  ಎನ್‌ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ರಾಷ್ಟ್ರ ರಾಜಧಾನಿಯಲ್ಲಿದ್ದು , ಮತ್ತೊಬ್ಬ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಮಾತ್ರ ಗೈರಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 20 ಕ್ಯಾಬಿನೆಟ್ ಮಂತ್ರಿ, ಏಕನಾಥ್ ಶಿಂಧೆ ಪಕ್ಷ ಶಿವಸೇನೆಗೆ 12 ಹಾಗೂ ಅಜಿತ್ ಪವಾರ್ ಅವರ ಎನ್‌ಸಿಪಿಗೆ 10 ಸಚಿವ ಸ್ಥಾನ ಪಡೆಯುವ ಸಾಧ್ಯತೆ ಇರಲಿದೆ ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ ಫಡ್ನವೀಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದ್ದಾರೆ. ನಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು 288 ಕ್ಷೇತ್ರಗಳಲ್ಲಿ 230 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡಿದೆ. ಬಿಜೆಪಿ 132 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗಳಿಸಿತ್ತು ಡಿಸೆಂಬರ್ 5 ರಂದು ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮಂಗಳವಾರ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಉದ್ಯಮಿ ಗೌತಮ್‌ ಅಧಾನಿ ಭೇಟಿಯಾಗಿದ್ದಾರೆ. ಮುಂಬೈನಲ್ಲಿರುವ ಫಡ್ನವಿಸ್ ಅವರ ‘ಸಾಗರ್’ ಬಂಗಲೆಯಲ್ಲಿ ಅದಾನಿ, ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಫಡ್ನವಿಸ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮಂಗಳವಾರ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ : Devendra Fadnavis: ಅಭಿವೃದ್ಧಿಯ ರಾಜಕೀಯವೇ ನಮ್ಮ ಗುರಿ: ʼಮಹಾʼ ಸಿಎಂ ದೇವೇಂದ್ರ ಫಡ್ನವಿಸ್