Thursday, 12th December 2024

NIA Raid: 5 ರಾಜ್ಯ, 19 ಸ್ಥಳಗಳಲ್ಲಿ NIA ಭರ್ಜರಿ ರೇಡ್‌-ಬೆಳ್ಳಂ ಬೆಳಗ್ಗೆ ಶಂಕಿತ ಉಗ್ರರಿಗೆ ಶಾಕ್‌!

NIA Raid

ನವದೆಹಲಿ: ದೇಶಾದ್ಯಂತ ಐದು ರಾಜ್ಯಗಳಲ್ಲಿ ಬೆಳ್ಳಂ ಬೆಳಗ್ಗೆ ರಾಷ್ಟ್ರೀಯ ತನಿಖಾ ಸಂ‍ಸ್ಥೆ(NIA Raid) ರೇಡ್‌ ನಡೆಸಿ ಭಾರೀ ತನಿಖೆ ನಡೆಸಿದೆ. ನಿಷೇಧಿತ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ ಜತೆ ನಂಟು ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ಎನ್‌ಐಎ ಈ ರೇಡ್‌ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಒಟ್ಟು 19 ಶಂಕಿತರ ಅಡಗುತಾಣಗಳ ಮೇಲೆ ಮುಂಜಾನೆಯಿಂದಲೇ ದಾಳಿ ನಡೆದಿದೆ.

ಭಯೋತ್ಪಾದಕರ ಅಡುಗುತಾಣಗಳನ್ನು ಗುರಿಯಾಗಿಸಿ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಾದ ರಿಯಾಸಿ, ಮಟ್ಟಾನ್ (ಅನಂತನಾಗ್), ಬಾರಾಮುಲ್ಲಾ ಮತ್ತು ಬುದ್ಗಾಮ್‌ಗಳಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯಾಗಿರುವ ಎನ್‌ಐಎ ಐದು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿ ಶೇಖ್ ಸುಲ್ತಾನ್ ಸಲಾಹ್ ಉದ್ದೀನ್ ಅಯೂಬಿ ಅಲಿಯಾಸ್ ಅಯೂಬಿ ಎಂಬ ವ್ಯಕ್ತಿಯನ್ನು ಬಂಧಿಸಿದ ಎರಡು ತಿಂಗಳ ಇದೀಗ ಮತ್ತೆ ದಾಳಿ ನಡೆಸಿದೆ. ಇನ್ನು ಶಂಕಿತರು ಯುವಕರನ್ನು ಉಗ್ರ ಸಂಘಟನೆಯತ್ತ ಸೆಳೆಯುವ ಮತ್ತು ಭಯೋತ್ಪಾದಕ-ಸಂಬಂಧಿತ ಪ್ರಚಾರದಲ್ಲಿ ತೊಡಗಿದ್ದರು. ಅಲ್ಲದೇ ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುವಲ್ಲೂ ಪ್ರಮುಖ ಪಾತ್ರವಹಿಸಿರುವುದು ಬಯಲಾಗಿದೆ. ಇವರು ದೇಶಾದ್ಯಂತ ಯುವಕರನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಎನ್‌ಐಎ ರೇಡ್‌ ನಡೆಸಿದೆ

ಅಸ್ಸಾಂ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ 26 ಸ್ಥಳಗಳಲ್ಲಿ ಶೋಧ ನಡೆಸಿದ ನಂತರ ಅಯೂಬಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ದೇಶದಲ್ಲಿ ವಿವಿಧ ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆತನನ್ನು ಅರೆಸ್ಟ್‌ ಮಾಡಲಾಗಿತ್ತು.ಕಾರ್ಯಾಚರಣೆಯ ನಂತರ, ಹಲವಾರು ಇತರ ಶಂಕಿತರನ್ನು ವಿಚಾರಣೆಗಾಗಿ ಎನ್‌ಐಎ ಕರೆಸಿಕೊಂಡಿತ್ತು. ಇದೇ ವೇಳೆ ಹಲವಾರು ಮಹತ್ವದ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು, ಕರಪತ್ರಗಳು ಮತ್ತು ನಿಯತಕಾಲಿಕೆಗಳನ್ನು ವಶಪಡಿಸಿಕೊಂಡಿತ್ತು.

ಈ ಸುದ್ದಿಯನ್ನೂ ಓದಿ: Lokayukta Raid: ರಾಜ್ಯಾದ್ಯಂತ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ