Thursday, 12th December 2024

Pak Intruder: ಭಾರತದ ಗಡಿಯಾಚೆಗೆ ನುಸುಳುತ್ತಿದ್ದ ಪಾಕ್‌ ನುಸುಳುಕೋರ ಅರೆಸ್ಟ್‌

ಶ್ರೀನಗರ: ಜಮ್ಮುಮತ್ತು ಕಾಶ್ಮೀರದ(Jammu-Kashmir) ಪೂಂಚ್(Poonch) ಜಿಲ್ಲೆಯ ಎಲ್‌ಒಸಿ(Line Of Control) ಬಳಿ ಪಾಕಿಸ್ತಾನಿ ಒಳ ನುಸುಳುಕೋರನನ್ನು(Pak Intruder) ಭಾರತೀಯ ಸೇನೆಯು ಬಂಧಿಸಿದೆ ಎಂದು ಭದ್ರತಾ ಅಧಿಕಾರಿಗಳು ಗುರುವಾರ(ಡಿ.12) ತಿಳಿಸಿದ್ದಾರೆ.

ಮೊಹಮ್ಮದ್ ಸಾದಿಕ್(Mohd Sadiq) ಎಂಬ 18 ವರ್ಷದ ಯುವಕ ಗಡಿಯಾಚೆಯಿಂದ ಭಾರತದ ಕಡೆಗೆ ನುಸುಳಲು ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗಿದ್ದು, ಬುಧವಾರ(ಡಿ.11) ಸಂಜೆ ಗಡಿ ಬೇಲಿಯ ಸಮೀಪವಿರುವ ಗ್ರಾಮವಾದ ನೂರ್ಕೋಟೆ(Noorkote) ಎಂಬಲ್ಲಿ ಗಡಿ ಭದ್ರತಾ ಪಡೆಗಳು ಅವನನ್ನು ಕೂಡಲೇ ತಡೆದು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ವ್ಯಕ್ತಿಯು ಯಾವುದೇ ಅಪಾಯಕಾರಿ ವಸ್ತುಗಳನ್ನು ಹೊಂದಿರಲಿಲ್ಲ ಎಂದು ತಿಳಿದು ಬಂದಿದ್ದು, ಗಡಿಯಾಚೆಗೆ ನುಸುಳಲು ಯತ್ನಿಸಿದ ಅವನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿಯಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆತ ಅಚಾತುರ್ಯದಿಂದ ಲೈನ್‌ ಆಫ್‌ ಕಂಟ್ರೋಲ್‌ ದಾಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಚ್ಚಿನ ತನಿಖೆಯಾಗಲಿದೆ ಎಂದು ತಿಳಿದು ಬಂದಿದೆ.

ಭಾರತದ ವಿರುದ್ಧ ಪಾಕ್‌ ಹೊಸ ಅಸ್ತ್ರ

ಭಾರತದ ಜೈಲುಗಳಲ್ಲಿರುವ ಉಗ್ರರಿಗೆ ಸಂದೇಶ ರವಾನಿಸಲು ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹೊಸ ತಂತ್ರವೊಂದನ್ನು ಹೆಣೆದಿರುವ ಆತಂಕಕಾರಿ ವಿಚಾರ ಸದ್ಯ ಬೆಳಕಿಗೆ ಬಂದಿದೆ. ಮಾದಕ ವ್ಯಸನಿಗಳನ್ನು ಮತ್ತು ಮಾನಸಿಕ ಅಸ್ವಸ್ಥ ಸೋಗಿನಲ್ಲಿರುವವರನ್ನು ಭಾರತದ ಗಡಿಯೊಳಗೆ ಕಳುಹಿಸಿ, ಬಳಿಕ ಅವರನ್ನು ಭಾರತದ ಜೈಲು ಸೇರುವಂತೆ ಮಾಡುತ್ತಾರೆ. ಅವರ ಮೂಲಕ ಜೈಲಿನಲ್ಲಿರುವ ಉಗ್ರರಿಗೆ ತಮ್ಮ ಸಂದೇಶವನ್ನು ರವಾನಿಸುವುದೇ ಐಎಸ್‌ಐ ಹೊಸ ತಂತ್ರವಾಗಿದೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವರ್ಷದ ಜುಲೈಯಿಂದ ಈವರೆಗೆ ಇಂತಹ ಸುಮಾರು 10ಕ್ಕೂ ಹೆಚ್ಚು ಪ್ರಕರಣ ವರದಿಯಾಗಿರುವುದಾಗಿ ತಿಳಿದು ಬಂದಿದೆ. ಮೊಬೈಲ್‌ ಫೋನ್‌, ಇಂಟರ್ನೆಟ್‌ ಮೂಲಕ ಜೈಲಿನಲ್ಲಿರುವ ಉಗ್ರರೊಂದಿಗೆ ಸಂಪರ್ಕ ಸಾಧಿಸಿದರೆ ಅದು ಭಾರತದ ಭದ್ರತಾ ಪಡೆಗಳಿಗೆ ಸುಲಭವಾಗಿ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಐಎಸ್‌ಐ ಈ ಹೊಸ ಕುತಂತ್ರ ಆರಂಭಿಸಿದೆ ಎನ್ನಲಾಗಿದೆ.

ಡ್ರಗ್ಸ್‌ ವ್ಯಸನಿಗಳು ಅಥವಾ ಮಾನಸಿಕ ಅಸ್ವಸ್ಥರಂತೆ ವರ್ತಿಸುವವರು ಭಾರತದ ಗಡಿಯೊಳಗೆ ನುಸುಳುತ್ತಾರೆ. ಅವರನ್ನು ಭಾರತದ ಭದ್ರತಾ ಪಡೆಗಳು ಬಂಧಿಸಿ, ಜಮ್ಮು, ಪಂಜಾಬ್‌ ಮತ್ತು ರಾಜಸ್ಥಾನದ ಜೈಲುಗಳಿಗೆ ಕಳುಹಿಸಲಾಗುತ್ತದೆ. ವಾಸ್ತವದಲ್ಲಿ ಇವರು ಮಾನಸಿಕ ಅಸ್ವಸ್ಥರಾಗಿರುವುದಿಲ್ಲ. ಉದ್ದೇಶಪೂರ್ವಕವಾಗಿಯೇ ಜೈಲು ಸೇರುವ ಅವರು, ಈಗಾಗಲೇ ಜೈಲಲ್ಲಿರುವ ಭಯೋತ್ಪಾದಕರಿಗೆ ಐಎಸ್‌ಐ ಕಳುಹಿಸಿರುವ ಸಂದೇಶವನ್ನು ರವಾನಿಸುತ್ತಾರೆ.

ತಮ್ಮ ಕೊರಿಯರ್‌ಗಳಾಗಿ ಸೇವೆ ಸಲ್ಲಿಸಲು ಐಎಸ್‌ಐ ಪಾಕ್‌ನ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳುತ್ತಿದೆ. ಜುಲೈಯಲ್ಲಿ ಪಾಕ್‌ನ ಬಾಲಕನೊಬ್ಬ ಪಂಜಾಬ್‌ನಲ್ಲಿ ಸಿಕ್ಕಿಬಿದ್ದಿದ್ದ. ಆತನ ಕೈಯಲ್ಲಿ ಅರೇಬಿಕ್‌ ಭಾಷೆಯ ಪತ್ರವೊಂದು ಸಿಕ್ಕಿತ್ತು. ಮತ್ತೊಂದು ಪ್ರಕರಣದಲ್ಲಿ ಪಾಕ್‌ ಯುವಕ ತಾನು ಸ್ನೇಹಿತೆಗಾಗಿ ಬಂದಿದ್ದಾಗಿಯೂ, ಕಾಳಿ ದೇವಸ್ಥಾನದಲ್ಲಿ ವಿವಾಹವಾಗಲು ಇಚ್ಛಿಸಿರುವುದಾಗಿಯೂ ಹೇಳಿದ್ದ.

ಹೀಗೆ ದೇಶಕ್ಕೆ ನುಗ್ಗುವವರ ವಿರುದ್ಧ ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್‌ ಕಾಯ್ದೆ ಅಡಿ ಕೇಸು ದಾಖಲಿಸಲಾಗುತ್ತದೆ. ಅದರಂತೆ ಆರೋಪಿಗಳು 2ರಿಂದ ಗರಿಷ್ಠ 8 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಾರೆ. ಬಳಿಕ ಅವರನ್ನು ಗಡಿಪಾರು ಮಾಡಲಾಗುತ್ತದೆ

ಈ ಸುದ್ದಿಯನ್ನೂ ಓದಿ:Champions Trophy:’ಪಾಕಿಸ್ತಾನಕ್ಕೆ ಹೋಗಲು ಭಾರತ ನಿರಾಕರಣೆ’-ಪಾಕ್‌ ಮಾಜಿ ಕ್ರಿಕೆಟಿಗರ ಆಕ್ರೋಶ!