Thursday, 12th December 2024

Bomb Blast : ಗುರುಗ್ರಾಮ ಬಾಂಬ್ ದಾಳಿ ಸ್ಫೋಟದ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ?

Bomb Blast

ನವದೆಹಲಿ: ಇತ್ತೀಚೆಗೆ ಗುರುಗ್ರಾಮದ (Gurugrama) ಕ್ಲಬ್‌ವೊಂದರ ಎದುರು ಕಚ್ಚಾ ಬಾಂಬ್ ಸ್ಫೋಟದ (Bomb Blast) ಹಿಂದೆ ತಮ್ಮ ಕೈವಾಡವಿರುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi Gang) ಸಹಚರರು ಹೊಣೆ ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರರಾದ ರೋಹಿತ್ ಗೋಡಾರಾ ಮತ್ತು ಗೋಲ್ಡಿ ಬ್ರಾರ್  ಗುರುಗ್ರಾಮ್ ಸೆಕ್ಟರ್ 29 ರ ಬಾರ್‌ನ ಹೊರಗೆ ಕಚ್ಚಾ ಬಾಂಬ್ ಸ್ಫೋಟವನ್ನು ನಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿ ಇದು ಕೇವಲ ಸಣ್ಣ ಮಟ್ಟದ ಸ್ಫೋಟವಾಗಿದ್ದು, ದೊಡ್ಡ ದಾಳಿಯನ್ನು ನಡೆಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಬಾರ್‌ನ ಮಾಲೀಕ ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಜೊತೆಗೆ ತೆರಿಗೆಯಿಂದ ವಂಚಿಸುವ ಮೂಲಕ ದೇಶದ ಆರ್ಥಿಕ ಸ್ಥಿತಿಗೆ ಹಾನಿಯುಂಟು ಮಾಡುತ್ತಿದ್ದಾನೆ ಎಂದು ಬಿಷ್ಣೋಯ್ ಗ್ಯಾಂಗ್ ಆರೋಪಿಸಿದೆ. ಮಂಗಳವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ್ ಪೊಲೀಸರು ಸಚಿನ್ ಎಂಬಾತನನ್ನು ಬಂಧಿಸಿದ್ದಾರೆ.

ಘಟನೆಯ ವೇಳೆ ಸಚಿನ್ ಪಾನಮತ್ತನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. “ಆರೋಪಿಯು ಅಮಲೇರಿದ ಸ್ಥಿತಿಯಲ್ಲಿದ್ದನು. ಮೊದಲು ಒಂದು ಕಚ್ಚಾ ಬಾಂಬ್‌ ಎಸೆದಿದ್ದು, ನಂತರ ಮತ್ತೊಂದು ಬಾಂಬ್‌ ಎಸೆಯಲು ಪ್ರಯತ್ನಿಸಿದಾಗ ನಮ್ಮ ಸಿಬ್ಬಂದಿಗಳು ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ಆರೋಪಿ ಬಳಿಯಿಂದ ಬಾಂಬ್‌ಗಳ ಜೊತೆಗೆ ದೇಸೀ ನಿರ್ಮಿತ ಆಯುಧವನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಐಪಿಎಸ್ ಅಧಿಕಾರಿ ವಿಕಾಸ್ ಅರೋರಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಹಾಗೂ ಭದ್ರತೆಗಾಗಿ ಬಾಂಬ್ ನಿಷ್ಕ್ರೀಯ ತಂಡವನ್ನು ಕರೆಯಿಸಲಾಯಿತು. ಘಟನೆಯಿಂದ ಅಲ್ಲಿದ್ದ ವಾಹನ ಹಾಗೂ ಬೋರ್ಡ್‌ಗೆ ಸಣ್ಣಪುಟ್ಟ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೃತ್ಯದ ಹಿಂದಿನ ಮೂಲ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಫೋಟದಿಂದಾಗಿ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಸೂಚನಾ ಫಲಕ ಮತ್ತು ಸ್ಕೂಟರ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಾದಾಗಿನಿಂದಲೂ ಸ್ಥಳದ ಸುತ್ತಮುತ್ತಲೂ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಕಮಿಷನರ್ ವರುಣ್ ದಹಿಯಾ ಮಾತನಾಡಿ, ಆರೋಪಿಯು ಮಾದಕ ದ್ರವ್ಯದ ಅಮಲಿನಲ್ಲಿದ್ದನು. ನಾವು ಸ್ಥಳಕ್ಕೆ ಆಗಮಿಸುವ ವೇಳೆಗೆ, ಆತ ಒಂದೆರಡು ಬಾಂಬ್‌ಗಳನ್ನು ಎಸೆದಿದ್ದ. ಕರ್ತವ್ಯದಲ್ಲಿದ್ದ ಅಧಿಕಾರಿಗಳು ಆರೋಪಿ ಇನ್ನೂ ಎರಡು ಬಾಂಬ್‌ಗಳನ್ನು ಎಸೆಯುವ ಮೊದಲು ಆತನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ : Bomb Threat: ಪ್ರಯಾಣಿಕನ ಬಳಿ ಬಾಂಬ್‌ ಇದೆ… ಮುಂಬೈ ಏರ್‌ಪೋರ್ಟ್‌ಗೆ ಮತ್ತೆ ಬೆದರಿಕೆ