Thursday, 12th December 2024

One Nation One Election: ಒಂದು ರಾಷ್ಟ್ರ-ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

One Nation One Election

ನವದೆಹಲಿ: ಚುನಾವಣೆ (Election) ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ದೇಶಾದ್ಯಂತ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ನಿರ್ಣಯಿಸಿರುವ “ಒಂದು ರಾಷ್ಟ್ರ ಒಂದು ಚುನಾವಣೆ” (One Nation One Election) ಮಸೂದೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಆ ಮೂಲಕ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ಈ ಮಸೂದೆ ಮಂಡಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಲೋಕಸಭೆ (loksabha), ರಾಜ್ಯ ವಿಧಾನಸಭೆ (vidhana sabha), ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದಿಂದ ಈ ಮಸೂದೆ ಜಾರಿಗೆ ಕೇಂದ್ರ ನಿರ್ಧರಿಸಿದೆ.

ಮುಂದಿನ ನಡೆ ಏನು?

“ಒಂದು ರಾಷ್ಟ್ರ ಒಂದು ಚುನಾವಣೆ” ಪ್ರಸ್ತಾವನೆಯನ್ನು ಜಾರಿಗೊಳಿಸಲು ಸಂಸತ್ತು ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಬೇಕಿದೆ. ಇದಕ್ಕೆ ವಿವಿಧ ರಾಜಕೀಯ ಪಕ್ಷಗಳ ವ್ಯಾಪಕ ಬೆಂಬಲ ಬೇಕಾಗುತ್ತದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ ಅದು ತನ್ನ ಎನ್‌ಡಿಎ ಮಿತ್ರಪಕ್ಷಗಳನ್ನು ಮಾತ್ರವಲ್ಲ ವಿರೋಧ ಪಕ್ಷಗಳ ಬೆಂಬಲವನ್ನೂ ಗಳಿಸಬೇಕಿದೆ.

ಈಗಾಗಲೇ ಎನ್‌ಡಿಎ ಘಟಕ ಜನತಾ ದಳ (ಯುನೈಟೆಡ್) ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಸ್ವಾಗತಿಸಿದೆ. ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್ ಅವರು ‘ಒಂದು ರಾಷ್ಟ್ರ, ಒಂದು ಚುನಾವಣೆ’ ದೀರ್ಘಾವಧಿಯ ಪರಿಣಾಮಗಳನ್ನು ಉಂಟು ಮಾಡುತ್ತದೆ ಮತ್ತು ದೇಶಕ್ಕೆ ಹೆಚ್ಚು ಪ್ರಯೋಜನ ತರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕಕಾಲದ ಚುನಾವಣೆ ಪ್ರಾಯೋಗಿಕವಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ನೈಜ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಇಂತಹ ವಿಷಯಗಳನ್ನು ಮುಂದಿಡುತ್ತಿದೆ ಎಂದು ಆರೋಪಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಚುನಾವಣೆ ಅವಧಿ

ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು ಸುಲಭವಲ್ಲ. ಇದಕ್ಕಾಗಿ ಕೆಲವು ಕಡೆಗಳಲ್ಲಿ ಚುನಾವಣೆಯನ್ನು ಮೊದಲು, ಇನ್ನು ಕೆಲವು ಕಡೆಗಳಲ್ಲಿ ವಿಳಂಬವಾಗಿ ಮಾಡಬೇಕಿದೆ. ಈ ವರ್ಷ ಮೇ- ಜೂನ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಇದರೊಂದಿಗೆ ಜಮ್ಮು-ಕಾಶ್ಮೀರ, ಹರ್ಯಾಣ, ಜಾರ್ಖಂಡ್‌, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆ ನಡೆಯಿತು.

2025ರಲ್ಲಿ ದೆಹಲಿ ಮತ್ತು ಬಿಹಾರ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಅಲ್ಲದೇ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭೆಗಳ ಅವಧಿ 2026ರಲ್ಲಿ ಹಾಗೂ ಗೋವಾ, ಗುಜರಾತ್, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆಗಳ ಅವಧಿ 2027ರಲ್ಲಿ ಕೊನೆಗೊಳ್ಳಲಿದೆ.

ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗಳ ಅವಧಿ 2028ರಲ್ಲಿ ಕೊನೆಗೊಳ್ಳಲಿದೆ. ಈ ವರ್ಷ ಅಧಿಕಾರಕ್ಕೆ ಬಂದಿರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅಧಿಕಾರ ಅವಧಿ 2029ರಲ್ಲಿ ಕೊನೆಗೊಳ್ಳಲಿದೆ.

ಏನು ಪರಿಣಾಮ?

ಪಶ್ಚಿಮ ಬಂಗಾಳದಲ್ಲಿ 2026ರಲ್ಲಿ ಮತ್ತು ಕರ್ನಾಟಕದಲ್ಲಿ 2028ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಗಳು ನಿಗದಿಯಾಗಿದೆ. ಈ ಅಸೆಂಬ್ಲಿಗಳ ಅವಧಿಯನ್ನು ಮೇ ಅಥವಾ ಜೂನ್ 2029ರಲ್ಲಿ ಮುಕ್ತಾಯಗೊಳಿಸುತ್ತವೆ. ಇದು ಮುಂದಿನ ಲೋಕಸಭೆಯ ಅವಧಿಗೆ ಹೊಂದಿಕೆಯಾಗುತ್ತದೆ. 2029ರ ವೇಳೆಗೆ ಒಂದು ರಾಷ್ಟ್ರ, ಒಂದು ಚುನಾವಣಾ ನೀತಿಯು ಜಾರಿಯಾದ ಬಳಿಕ ಬಹುಮತದ ನಷ್ಟದಿಂದಾಗಿ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಯು ಐದು ವರ್ಷಗಳ ಅವಧಿಗೆ ಮುಂಚಿತವಾಗಿ ವಿಸರ್ಜಿಸಿದರೆ ಹೊಸ ಚುನಾವಣೆಗಳನ್ನು ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ. ಇವುಗಳನ್ನು ಮಧ್ಯಂತರ ಚುನಾವಣೆ ಎಂದು ಪರಿಗಣಿಸಲಾಗುತ್ತದೆ. ಹೊಸ ಸರ್ಕಾರವು ಅವಧಿಯ ಉಳಿದ ಭಾಗವನ್ನು ಮಾತ್ರ ಪೂರೈಸುತ್ತದೆ ಎಂದು ಸಮಿತಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ ಕಾರ್ಯಸಾಧುವೇ ?