Thursday, 12th December 2024

Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್‌ ಕೊಹ್ಲಿ ಕಣ್ಣು!

IND vs AUS: Virat Kohli Needs Century At Gabba To Match Sunil Gavaskar's Rare Feat

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ವಿಶೇಷ ದಾಖಲೆ ಬರೆಯುವ ಸಾಧ್ಯತೆ ಇದೆ. ಬ್ರಿಸ್ಬೆನ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಸಿಡಿಸಿದರೆ, ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಲಿದ್ದಾರೆ.

ಪರ್ತ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಶತಕ ಸಿಡಿಸಿದ್ದರು. ಆ ಮೂಲಕ ಈ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳ ಗೆಲುವು ಪಡೆದಿತ್ತು. ನಂತರ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಎರಡೂ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ವಿಶೇಷ ದಾಖಲೆಯ ಸನಿಹದಲ್ಲಿ ಕೊಹ್ಲಿ

ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 30 ಶತಕಗಳನ್ನು ಸಿಡಿಸಿರುವ ವಿರಾಟ್‌ ಕೊಹ್ಲಿ, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಎದುರು ನೋಡುತ್ತಿದ್ದಾರೆ. ಒಂದು ವೇಳೆ ದಿ ಗಬ್ಬಾ ಸ್ಟೇಡಿಯಂನಲ್ಲಿ ಶತಕ ಸಿಡಿಸಿದರೆ ಆಸ್ಟ್ರೇಲಿಯಾದ ಪ್ರಮುಖ ಐದು ಸ್ಥಳಗಳಲ್ಲಿ ಶತಕ ಸಿಡಿಸಿದ ಮೂರನೇ ಪ್ರವಾಸಿ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವಿರಾಟ್‌ ಕೊಹ್ಲಿ ಬರೆಯಲಿದ್ದಾರೆ.

ಭಾರತೀಯ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಹಾಗೂ ಇಂಗ್ಲೆಂಡ್‌ ಮಾಜಿ ನಾಯಕ ಆಲ್‌ಸ್ಟೈರ್‌ ಕುಕ್‌ ಅವರು ಆಸ್ಟ್ರೇಲಿಯಾದ ಪ್ರಮುಖ ಐದು ಸ್ಥಳಗಳಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ಸುನೀಲ್‌ ಗವಾಸ್ಕರ್‌, ಬ್ರಿಸ್ಬೇನ್‌, ಪರ್ತ್‌ ಹಾಗೂ ಮೆಲ್ಬೋರ್ನ್‌ನಲ್ಲಿ ಮೂರು ಶತಕಗಳನ್ನು 1977ರಲ್ಲಿ ಸಿಡಿಸಿದ್ದಾರೆ. ನಂತರ 1985ರಲ್ಲಿ ಅಡಿಲೇಡ್‌ ಮತ್ತು ಸಿಡ್ನಿಯಲ್ಲಿ ಶತಕಗಳನ್ನು ಬಾರಿಸಿದ್ದಾರೆ.

ಇನ್ನು ಇಂಗ್ಲೆಂಡ್‌ ದಿಗ್ಗಜ ಆಲ್‌ಸ್ಟೈರ್‌ ಕುಕ್‌ ಅವರು 2006ರಲ್ಲಿ ಪರ್ತ್‌, 2010-11ರ ಸಾಲಿನಲ್ಲಿ ಬ್ರಿಸ್ಬೇನ್‌, ಅಡಿಲೇಡ್‌ ಹಾಗೂ ಸಿಡ್ನಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದರು. ನಂತರ 2017ರಲ್ಲಿ ಮೆಲ್ಬೋರ್ನ್‌ನಲ್ಲಿ ಐದನೇ ಟೆಸ್ಟ್‌ ಶತಕವನ್ನು ಸಿಡಿಸಿದ್ದರು.

ವಿರಾಟ್‌ ಕೊಹ್ಲಿ ಖಾತೆಯಲ್ಲಿ 7 ಟೆಸ್ಟ್‌ ಶತಕಗಳು

ವಿರಾಟ್‌ ಕೊಹ್ಲಿ(7 ಶತಕಗಳು) ಅವರಿಗಿಂತ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಜ್ಯಾಕ್‌ ಹಾಬ್ಸ್‌ ಮತ್ತು ವಾಲ್ಟರ್‌ ಹ್ಯಾಮಂಡ್‌ ಬರೆದಿದ್ದಾರೆ. ಟೀಮ್‌ ಇಂಡಿಯಾ ಮಾಜಿ ನಾಯಕ ಅಡಿಲೇಡ್‌ನಲ್ಲಿ (2021, 20214 ಹಾಗೂ 2014) ಮೂರು ಶತಕಗಳು, ಪರ್ತ್‌ನಲ್ಲಿ (2018, 2024) ಎರಡು ಶತಕಗಳು ಹಾಗೂ ಮೆಲ್ಬೋರ್ನ್‌ (2014) ಹಾಗೂ ಸಿಡ್ನಿ (2015)ಗಳಲ್ಲಿ ತಲಾ ಒಂದೊಂದು ಶತಕವನ್ನು ಸಿಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ 12 ಶತಕ ಸಿಡಿಸಿರುವ ಕೊಹ್ಲಿ

ವಿರಾಟ್‌ ಕೊಹ್ಲಿ ಅವರು ಬ್ರಿಸ್ಬೇನ್‌ನಲ್ಲಿ ಕೇವಲ ಒಂದೇ ಒಂದು ಟೆಸ್ಟ್‌ ಪಂದ್ಯವನ್ನು ಆಡಿದ್ದಾರೆ ಹಾಗೂ ಇದರಲ್ಲಿ ಅವರು ಕ್ರಮವಾಗಿ 19 ಮತ್ತು 1 ರನ್‌ ಗಳಿಸಿದ್ದಾರೆ. 2014-15ರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ವೇಳೆ ಅವರು ಆಡಿದ್ದರು. ಆದರೆ, ಅವರಿಂದ ಇಲ್ಲಿ ಶತಕ ಮೂಡಿ ಬಂದಿರಲಿಲ್ಲ. ಒಟ್ಟಾರೆ ಎಲ್ಲಾ ಸ್ವರೂಪದಲ್ಲಿ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿ 12 ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಕಾಂಗರೂ ನಾಡಿನಲ್ಲಿ 10ಕ್ಕಿಂತ ಹೆಚ್ಚು ಶತಕ ಸಿಡಿಸಿದ ಪ್ರವಾಸಿ ಆಟಗಾರ ಎನಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಆಸ್ಟ್ರೇಲಿಯಾದಲ್ಲಿ ಏಳನೇ ಶತಕ ಸಿಡಿಸಿ ಸಚಿನ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!