ನವದೆಹಲಿ: ಕ್ಯುಆರ್ ಕೋಡ್(QR Code) ಬಳಸಿ ಮಾಡುವ ಆನ್ಲೈನ್ ಪಾವತಿಗಳಿಂದ ಇತ್ತೀಚೆಗೆ ಸಾಕಷ್ಟು ಸ್ಕ್ಯಾಮ್ಗಳು ನಡೆಯುತ್ತಿವೆ. ಒಂದು ಅರ್ಥದಲ್ಲಿ ಅದನ್ನು ಆನ್ಲೈನ್ ದಂಧೆ (Onine Scam) ಎನ್ನಬಹುದು. ಡಿಜಿಟಲೀಕರಣದಿಂದಾಗಿ(Digitalization) ಸಾಕಷ್ಟು ವ್ಯಾಪಾರಿಗಳು ಫೋನ್ ಪೇ(Phonepe) ಮತ್ತು ಗೂಗಲ್ ಪೇ (Google Pay) ಕ್ಯುಆರ್ ಕೋಡ್ ಬಳಸುತ್ತಿದ್ದಾರೆ. ಕೆಲವರು ವ್ಯಾಪಾರಿಗಳ ಮುಗ್ಧತೆಯನ್ನೇ ದುರುಪಯೋಗಪಡಿಸಿಕೊಂಡು ವಂಚನೆ ನಡೆಸುತ್ತಿದ್ದಾರೆ.
ಈಗ ಇಲ್ಲೊಬ್ಬ ವ್ಲಾಗರ್(Vlogger) ಕ್ಯುಆರ್ ಕೋಡ್ನಿಂದ ಹೇಗೆ ಸ್ಕ್ಯಾಮ್ ನಡೆಯುತ್ತದೆ ಎಂಬುದನ್ನು ತನ್ನ ವಿಡಿಯೊ ಮೂಲಕ ತಿಳಿಸಿಕೊಟ್ಟಿದ್ದಾನೆ. ಮೇಲ್ನೋಟಕ್ಕೆ ಅವನ ವಿಡಿಯೊ ಮನರಂಜನೆಯಂತೆ ಕಂಡರೂ ಜನರಿಗೆ ಎಚ್ಚರಿಕೆ ನೀಡಿ ಆನ್ಲೈನ್ ದಂಧೆಗಳ ಬಗ್ಗೆ ಅರಿವು ಮೂಡಿಸುವಂತಿದೆ. ಆರ್ಯನ್ ಪರ್ವಾರ್ ಎಂಬ ಯುವಕ ವಿಡಿಯೊವನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾಸ್ಯಮಯ ಮತ್ತು ಸ್ವಲ್ಪ ಗಂಭೀರವಾಗಿರುವ ಆ ವಿಡಿಯೊ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
ವಿಡಿಯೊದಲ್ಲಿ ತೋರಿಸಿರುವಂತೆ ಆರ್ಯನ್ ಹತ್ತಾರು ಅಂಗಡಿಗಳಿಗೆ ಹೋಗಿ ಅಂಗಡಿಯವರ ಕ್ಯುಆರ್ ಕೋಡ್ ಮೇಲೆ ತನ್ನ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಕ್ಯುಆರ್ ಕೋಡ್ ಚಿತ್ರವನ್ನು ಅಂಟಿಸುತ್ತಾನೆ. ಅಂಗಡಿಗೆ ಬರುವ ಗ್ರಾಹಕರೆಲ್ಲರು ಅವನ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ಹಣ ಪಾವತಿ ಮಾಡುತ್ತಾರೆ. ಆ ಹಣ ನೇರವಾಗಿ ಆರ್ಯನ್ ಖಾತೆಗೆ ಬೀಳುತ್ತದೆ. ಇದು ಅಂಗಡಿಯವರ ಜೇಬಿಗೆ ಕತ್ತರಿ ಹಾಕಿದಂತಾಗುತ್ತದೆ.
ಆರ್ಯನ್ ಬಟ್ಟೆ ಅಂಗಡಿ, ಸ್ಲಿಪ್ಪರ್ ಶೋರೂಮ್, ಸ್ಕೂಟರ್ ಶೋರೂಮ್ ಮತ್ತು ಮೊಬೈಲ್ ಆಕ್ಸೆಸರೀಸ್ ಅಂಗಡಿಗಳಲ್ಲಿ ಇದೇ ರೀತಿಯ ತಂತ್ರವನ್ನು ಬಳಸಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಆರ್ಯನ್ ನಗುತ್ತಲೇ ಪ್ರತಿ ಅಂಗಡಿಯಿಂದ ಆಚೆಗೆ ಬರುತ್ತಾನೆ. ಮನೆಗೆ ತಲುಪಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುತ್ತಾನೆ. ಅವನ ಮೊಬೈಲ್ ಫೋನ್ನಲ್ಲಿ 2,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ಪಾವತಿಯಾದ ಫೋನ್ ಪೇ ನೊಟಿಫಿಕೇಷನ್ಗಳು ಬರುತ್ತವೆ. ಅತೀ ಕಡಿಮೆ ಅವಧಿಯಲ್ಲಿ ಸ್ಕ್ಯಾಮ್ ಮೂಲಕ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸುತ್ತಾನೆ.
ಈ ವಂಚನೆಯಿಂದಾಗಿ ಖಂಡಿತವಾಗಿಯೂ ಅಂಗಡಿಯವರಿಗೆ ಹಣಕಾಸಿನ ನಷ್ಟವಾಗುತ್ತದೆ. ವಿಡಿಯೊವನ್ನು ಮನರಂಜನೆಯ ಉದ್ದೇಶಕ್ಕೆ ಚಿತ್ರೀಸಿರಬಹುದು ಎನ್ನಲಾಗುತ್ತಿದೆ. ಇಂತಹ ಸ್ಕ್ಯಾಮ್ಗಳು ವಾಸ್ತವದಲ್ಲಿ ನಿಜವಾಗಿಯೂ ನಡೆಯುತ್ತವೆ ಎಂಬುದು ಪ್ರಶ್ನಾತೀತ. ಪಾವತಿಗಳನ್ನು ಮಾಡುವ ಮೊದಲು ಜನರು ಸಾಮಾನ್ಯವಾಗಿ ಸ್ವೀಕರಿಸುವವರ ಹೆಸರನ್ನು ಪರಿಶೀಲಿಸುತ್ತಾರೆ, ವಿಶೇಷವಾಗಿ ಅಂಗಡಿಯವರ ಹೆಸರನ್ನು ತಪ್ಪದೇ ನೋಡುತ್ತಾರೆ. ಈ ವಹಿವಾಟಿನ ವೇಳೆ ಆರ್ಯನ್ ಹೆಸರು ಕಾಣಿಸಿಕೊಂಡಿದ್ದರೆ ಆತನ ವಂಚನೆ ಬಟ್ಟಾ ಬಯಲಾಗುತ್ತಿತ್ತು ಎಂದು ಹಲವರು ನೆಟ್ಟಿಗರು ತಿಳಿಸಿದ್ದಾರೆ. ಎಲ್ಲದರ ನಡುವೆಯೂ ಆರ್ಯನ್ ಎಂಬ ವ್ಯಕ್ತಿಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 5 ಕೋಟಿ 12 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಲಕ್ಷಾಂತರ ಲೈಕ್ಸ್, ಶೇರ್ಗಳು ಮತ್ತು ಕಾಮೆಂಟ್ಗಳು ಬಂದಿವೆ.
ಕೆಲವು ಬಳಕೆದಾರರು, ಸಾಮಾನ್ಯವಾಗಿ ಆನ್ಲೈನ್ ವರ್ಗಾವಣೆಯ ಸಮಯದಲ್ಲಿ ಗ್ರಾಹಕರ ಹೆಸರುಗಳನ್ನು ಪರಿಶೀಲಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ ಜನರಿಗೆ ಎಚ್ಚರಿಗೆ ನೀಡಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿದರೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಇತರರು ವಿಡಿಯೊವನ್ನು ನಕಲಿ ಎಂದಿದ್ದಾರೆ.
ಅದೆನೇ ಇರಲಿ, ನಾವುಗಳು ಆನ್ಲೈನ್ ಮೂಲಕ ಹಣ ಪಾವತಿಸುವ ವೇಳೆ ಸಾಕಷ್ಟು ಎಚ್ಚರವಹಿಸಬೇಕು. ಎಚ್ಚರ ತಪ್ಪಿದರೆ ಪಂಗನಾಮ ಗ್ಯಾರಂಟಿ!
ಈ ಸುದ್ದಿಯನ್ನೂ ಓದಿ:ಮನೆಕೆಲಸದಾಕೆ ಮೇಲೆ ಡಿಜಿಟಲ್ ರೇಪ್: ವೃದ್ದನ ಬಂಧನ