Thursday, 12th December 2024

Supreme Court: ಪೂಜಾ ಸ್ಥಳಗಳ ಸಮೀಕ್ಷೆ ಕುರಿತಂತೆ ಯಾವುದೇ ಆದೇಶ ಹೊರಡಿಸುವಂತಿಲ್ಲ: ಸುಪ್ರೀಂ ಕೋರ್ಟ್‌

Supreme Court

ಹೊಸದಿಲ್ಲಿ: ಮಸೀದಿಗಳು ಸೇರಿದಂತೆ ವಿವಿಧ ಪೂಜಾ ಸ್ಥಳಗಳಲ್ಲಿ ನಡೆಯುತ್ತಿರುವ ಸಮೀಕ್ಷೆಗಳನ್ನು ಸ್ಥಗಿತಗೊಳಿಸಬೇಕು ಎಂದು ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ (ಡಿ. 12) ಹೇಳಿದೆ. ಪೂಜಾ ಸ್ಥಳಗಳ ಕಾಯ್ದೆಯ (Worship Act) ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಹೈಕೋರ್ಟ್‌ಗಳು ಸೇರಿದಂತೆ ಕೆಳ ನ್ಯಾಯಾಲಯಗಳು ಈ ವಿಷಯದ ಕುರಿತು ಮುಂದಿನ ವಿಚಾರಣೆ ನಡೆಯುವವರೆಗೆ ಮಸೀದಿಗಳ ಸಮೀಕ್ಷೆಯ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸದಂತೆ ಅಥವಾ ಯಾವುದೇ ಹೊಸ ಪ್ರಕರಣಗಳನ್ನು ಆಲಿಸದಂತೆ ನಿರ್ದೇಶಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಕೆ.ವಿ.ವಿಸ್ವನಾಥ್‌ ಅವರಿರುವ ವಿಶೇಷ ಪೀಠ ಅರ್ಜಿ ವಿಚಾರಣೆ ನಡೆಸಿದೆ.

ಈ ಕಾನೂನು ಅನಿಯಂತ್ರಿತ ಮತ್ತು ಅಸಮಂಜಸವಾಗಿದೆ. ಅಲ್ಲದೆ ದರ್ಮಾಚರಣೆಯ ಮೂಲಭೂತ ಹಕ್ಕನ್ನು ಉಲಲಘಿಸುತ್ತದೆ. ಇದು ಭಾರತೀಯ ಸಂವಿಧಾನದ 14 ಮತ್ತು 25ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿ ಅರ್ಜಿ ಸಲ್ಲಿಸಲಾಗಿತ್ತು. 1991ರ ಈ ಕಾಯ್ದೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಿಗೆ ಈ ಪ್ರಕರಣ ಸಂಬಂಧ ಹೊಂದಿದೆ.

ಕಾಯ್ದೆ ಏನು ಹೇಳುತ್ತದೆ?

ಈ ಕಾಯ್ದೆಯು ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳಗಳನ್ನು ಮರಳಿ ಪಡೆಯಲು ಅಥವಾ ಅವುಗಳ ಸ್ವರೂಪವನ್ನು ಬದಲಾಯಿಸಲು ಮೊಕದ್ದಮೆಗಳನ್ನು ದಾಖಲಿಸುವುದನ್ನು ನಿಷೇಧಿಸುತ್ತದೆ. ಈ ಕಾಯ್ದೆಯು ಹಿಂದೂಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ನಾಶವಾದ ತಮ್ಮ ‘ಪೂಜಾ ಸ್ಥಳಗಳು ಮತ್ತು ತೀರ್ಥಯಾತ್ರೆಗಳನ್ನು’ ಪುನಃಸ್ಥಾಪಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯೆ ಸಲ್ಲಿಸಲು 4 ವಾರಗಳ ಕಾಲಾವಕಾಶ

ಈ ಕಾಯ್ದೆಯ ವಿರುದ್ಧ ಅಥವಾ ಅದರ ಅನುಷ್ಠಾನವನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ 4 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ವಿಚಾರಣೆಯಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿ ಮುಸ್ಲಿಂ ಸಂಘಟನೆಗಳು ಸೇರಿದಂತೆ ವಿವಿಧ ಪಕ್ಷಗಳು ಸಲ್ಲಿಸಿದ್ದ ಮನವಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಈ ಸುದ್ದಿಯನ್ನೂ ಓದಿ: Bengaluru Techie: ಸ್ವಾರ್ಥಕ್ಕಾಗಿ ವಿವಾಹಿತ ಮಹಿಳೆಯರಿಂದ ಕಾನೂನು ದುರ್ಬಳಕೆ; ಟೆಕ್ಕಿ ಆತ್ಮಹತ್ಯೆ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಕಳವಳ