Thursday, 12th December 2024

Lakshmi Hebbalkar: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌; ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು?

Lakshmi Hebbalkar

ಬೆಳಗಾವಿ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಮಾತುಕತೆಗೆ ಮುಖ್ಯಮಂತ್ರಿಗಳು ಮುಖಂಡರುಗಳನ್ನು ಕರೆತರುವಂತೆ ನನಗೇ ಸೂಚಿಸಿದ್ದರು.‌ ಸಿಸಿ ಪಾಟೀಲ್ ಸೇರಿದಂತೆ ಹಲವು ನಾಯಕರಿಗೆ ನಾನೇ ಖುದ್ದು ಕರೆ ಮಾಡಿದರೂ ಯಾರು ಸಭೆಗೆ ಬರಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಆರೋಪಿಸಿದರು.

ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಂಗಳವಾರದ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಕುರಿತು ಅಧಿವೇಶನದಲ್ಲಿ ಮತ್ತು ಮಾಧ್ಯಮಗಳೆದುರು ಪ್ರತಿಕ್ರಿಯಿಸಿದ ಸಚಿವರು, ಮೀಸಲಾತಿ ಹೋರಾಟ ರಾಜಕೀಯ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ‌ ಅಂತ ಬರಬಾರದು ಎಂದು ತಿಳಿಸಿದರು.

ಮೀಸಲಾತಿ ವಿಚಾರವಾಗಿ ಬಿಜೆಪಿಯವರಿಗೆ ಈ ಪ್ರೀತಿ ಮೊದಲೇ ಯಾಕಿರಲಿಲ್ಲ. ಅವರ ಸರ್ಕಾರ ಇದ್ದಾಗ 2A ಮೀಸಲಾತಿಯನ್ನು ಯಾಕೆ ಕೊಡಲಿಲ್ಲ. ಆಗ ಮೀಸಲಾತಿ ಕೊಡದೇ ಮೂಗಿಗೆ ತುಪ್ಪ‌ ಸವರುವ ಕೆಲಸ ಮಾಡಿದರು ಎಂದು ಸಚಿವರು ಕಿಡಿಕಾರಿದರು.

ಈ ಸುದ್ದಿಯನ್ನೂ ಓದಿ | Essay Competition: ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ ಪ್ರಬಂಧ ಸ್ಪರ್ಧೆ

ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು.‌ ಮಾತುಕತೆಗೆ ಮುಖ್ಯಮಂತ್ರಿಗಳು ಸಮಯ ಕೊಟ್ಟಿದ್ದರು. ನಾನೇ ಫೋನ್ ಮಾಡಿದ್ದಲ್ಲದೆ ಸ್ವತಃ ಹೋಗಿ ಕರೆದು ಬಂದಿದ್ದೆ. ಸಮಾಜದ 10 ಜನ ಮುಖಂಡರನ್ನು ಕರೆದುಕೊಂಡು ಬರಲು ಸಿಎಂ ಸೂಚಿಸಿದ್ದರು‌. ಈ ಸಂಬಂಧ ಸಿಸಿ ಪಾಟೀಲ್ ಅವರಿಗೆ ನಾನೇ ಫೋನ್ ಮಾಡಿ ಕರೆದೆ. ಅವರು ಯಾರೂ ಬರುತ್ತಿಲ್ಲ ಎಂದರು ಎಂದು ಸಚಿವರು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಬೇಕು

ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲು ಕೆಲವರ ಪ್ರಚೋದನೆಯೇ ಕಾರಣ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು.‌ ನ್ಯಾಯಾಲಯದ ಆದೇಶದಂತೆ ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡುವುದಿಲ್ಲ ಎಂದು ಸ್ವತಃ ಪ್ರತಿಭಟನಾಕಾರರೇ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರು. ಆದರೆ, ಪ್ರತಿಭಟನೆಯಲ್ಲಿ ಆಗಿದ್ದೇನು? ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Job Fair: ಜ.19ರಂದು ರೈತರ ಮಕ್ಕಳಿಗಾಗಿ ಉಚಿತ ಉದ್ಯೋಗ ಮೇಳ

ಯಾರದೋ ಪ್ರಚೋದನೆಯಿಂದ ಅಮಾಯಕರು ಲಾಠಿ ಏಟು ತಿನ್ನುವಂತಾಯಿತು

ಜನರೆಲ್ಲಾ ಬೆಳಗ್ಗೆಯಿಂದ ಹಸಿದಿದ್ದಾರೆ‌. ಹಾಗಾಗಿ ಈ ಸಂದರ್ಭದಲ್ಲಿ ಪ್ರತಿಭಟನೆಗೆ ಇಳಿಯುವುದಕ್ಕಿಂತ‌ ಮುಖ್ಯಮಂತ್ರಿಗಳ ಬಳಿ ಮಾತುಕತೆ ನಡೆಸೋಣ ಎಂದು ವಿನಂತಿಸಿದ್ದೆ‌. ಯಾರದೋ ಪ್ರಚೋದನೆಯಿಂದಾಗಿ ಅಮಾಯಕರು ಲಾಠಿ ಏಟು ತಿನ್ನುವಂತಾಯಿತು. ಇಂಥ ಘಟನೆಗಳು ಆಗಬಾರದು. ಹಿಂಸೆಗೆ ಯಾರೂ ಅವಕಾಶ ಕೊಡಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.