ಬೆಂಗಳೂರು: 24 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ(Suicide) ಶರಣಾಗಿರುವ ಟೆಕ್ಕಿ ಅತುಲ್ ಸುಭಾಷ್(Atul Subhash) ಸಹೋದರ ನೀಡಿರುವ ದೂರಿನ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ನಾಲ್ವರ ವಿರುದ್ಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ(Nikita Singhania), ಆಕೆಯ ತಾಯಿ ನಿಶಾ ಸಿಂಘಾನಿಯಾ(Nisha Singhania), ಸಹೋದರ ಅನುರಾಗ್ ಸಿಂಘಾನಿಯಾ(Anurag Singhania) ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ(Susheel Singhania) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Bengaluru Techie).
ನಿಖಿತಾ ಸಿಂಘಾನಿಯಾ ಹಿನ್ನೆಲೆಯೇನು?
ಮೃತ ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಸಿಂಘಾನಿಯಾ ದೆಹಲಿ ಮೂಲದ ಎಐ ಇಂಜಿನಿಯರ್ ಕನ್ಸಲ್‌ಟೆಂಟ್ ಆಗಿದ್ದು, ದೇಶದ ಅತೀ ಪ್ರತಿಷ್ಠಿತ ಐಟಿ ಕಂಪನಿಯೊಂದರದಲ್ಲಿ ಕೆಲಸ ಮಾಡುತ್ತಿದ್ದಾರೆ. 2021ರಲ್ಲಿ ಸೀನಿಯರ್ ಕನ್ಸಲ್‌ಟೆಂಟ್ ಆಗಿ ಈ ಕಂಪೆನಿಗೆ ಸೇರಿದ್ದಾರೆ ಎಂಬ ಮಾಹಿತಿಯಿದೆ. ಬನಸ್ಥಲಿ ವಿದ್ಯಾಪೀಠದಿಂದ ಬಿ.ಟೆಕ್ ಪದವಿ ಪಡೆದುಕೊಂಡಿದ್ದು, ಜೈಪುರಿಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಾರಂಭದಲ್ಲಿ ಟೆಕ್ ಸಂಸ್ಥೆಯೊಂದರಲ್ಲಿ ಇಂಟರ್ನ್ ಆಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ನಂತರದಲ್ಲಿ ವಿವಿಧ ಟೆಕ್ ಹಾಗೂ ಫೈನಾನ್ಶಿಯಲ್ ಕಂಪೆನಿಗಳಲ್ಲಿ ಕೆಲಸ ಮಾಡಿರುವ ಅನುಭವ ನಿಖಿತಾ ಸಿಂಘಾನಿಯಾ ಅವರಿಗಿದೆ. 2019ರಲ್ಲಿ ಅತುಲ್ ಸುಭಾಷ್ ಅವರೊಂದಿಗೆ ವಿವಾಹವಾಗಿದ್ದು, 2021ರಲ್ಲಿ ಕೌಟುಂಬಿಕ ಕಲಹದಿಂದಾಗಿ ಪತಿಯನ್ನುತೊರೆದಿದ್ದರು. ಇವರಿಗೆ ಒಬ್ಬ ಮಗನಿದ್ದಾನೆ.
ಎಫ್‌ಐಆರ್‌ನಲ್ಲಿ ಏನಿದೆ?
ಅತುಲ್ ಸುಭಾಷ್, ನಿಖಿತಾ ಸಿಂಘಾನಿಯಾಗೆ 2019ರಲ್ಲಿ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಪತಿ ಅತುಲ್ ಸುಭಾಷ್ ವಿರುದ್ಧ ನಿಖಿತಾ ಸುಳ್ಳು ದೂರು ದಾಖಲಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ಅತುಲ್ ಸುಭಾಷ್‌ಗೆ ಪುತ್ರನ ಭೇಟಿಗೂ ಅವಕಾಶ ನೀಡದೆ 30 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ಅಲ್ಲದೆ, ಪ್ರಕರಣದ ನ್ಯಾಯಾಲಯದ ಕಲಾಪಗಳಿಗೆ ಅತುಲ್ ಸುಭಾಷ್ ಹಾಜರಾದ ಸಂದರ್ಭದಲ್ಲಿ ‘3 ಕೋಟಿ ರೂ. ಕೊಡು, ಇಲ್ಲದಿದ್ದರೆ ಬದುಕಿರಬೇಡ’ ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದು ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅತುಲ್ ಸಹೋದರ ಬಿಕಾಸ್ ಕುಮಾರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ. ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದರು.
ನನ್ನ ಹುಟ್ಟಿನ ಬಗ್ಗೆ ಚಿಂತಿಸಬೇಡಿʼ- ತನ್ನ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದವರಿಗೆ ಗಾಯಕಿ ತಿರುಗೇಟು
ಡಿ. 11ರಂದು ಪತ್ನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್(Atul Subhash) ಸುಭಾಷ್ ಸಾವಿನ ಕುರಿತು ಗಾಯಕಿ ಚಿನ್ಮಯಿ ಶ್ರೀಪಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಅತುಲ್ ಸಾವಿಗೆ ನ್ಯಾಯ ಸಿಗಬೇಕೆಂಬ ಸಾಕಷ್ಟು ಬೇಡಿಕೆಗಳ ಮಧ್ಯೆಯೇ, “ಬೆಂಬಲ ನೀಡಲು, ಫಂಡ್ ಸಂಗ್ರಹಿಸಲು ಮತ್ತು ಆಕ್ಸೆಂಚರ್‌ನಂತಹ ಕಂಪೆನಿಗಳಿಗೆ ಒತ್ತಡ ಹೇರಲು ಪುರುಷರು ಸಮರ್ಥರಾಗಿದ್ದಾರೆ. ಅಷ್ಟೇ ಅಲ್ಲದೆ, ಅತುಲ್ ಪತ್ನಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ವಿಫಲರಾಗಿದ್ದಾರೆ” ಎಂದು ಚಿನ್ಮಯಿ ಶ್ರೀಪಾದಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಕೆರಳಿಸಿತು. ಕೆಲವೇ ಗಂಟೆಗಳಲ್ಲಿ ಅವರ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಬಂದವು. ಕೆಲವರು ತೀರಾ ಅಸಭ್ಯವಾಗಿ ಕಾಮೆಂಟ್ ಹಾಕಿದ್ದಾರೆ. “ಚಿನ್ಮಯಿ ನೀವು ವೇಶ್ಯೆಯೇ? ನಿಮ್ಮ ಹುಟ್ಟಿನ ಬಗ್ಗೆ ಅನುಮಾನವಿದೆ. ನಿಮಗೆ ಒಂದಕ್ಕಿಂತ ಹೆಚ್ಚು ತಂದೆಯಂದಿರಬೇಕು. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ” ಎಂದೆಲ್ಲ ಎಕ್ಸ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಅಂಥ ಅವಹೇಳನಕಾರಿ ಕಾಮೆಂಟ್‌ಗಳಿಗೆ ಮರು ಉತ್ತರ ನೀಡಿರುವ ಚಿನ್ಮಯಿ ಶ್ರೀಪಾದಾ ತರಾಟೆಗೆ ತೆಗೆದುಕೊಂಡಿದ್ದಾರೆ. ತೀರಾ ಬೋಲ್ಡ್ ಆಗಿ ಪ್ರತಿಕ್ರಿಯೆ ನೀಡಿರುವ ಅವರು “ನೀವು ಸುಶಿಕ್ಷಿತರಾಗಿದ್ದರೆ ಮಾತ್ರ ತಿಳಿದಿರುತ್ತದೆ. ವೀರ್ಯ ಮತ್ತು ಅಂಡಾಣು ಒಂದು ಹುಟ್ಟಿಗೆ ಕಾರಣವಾಗುತ್ತದೆ. ನೀವು ನನ್ನ ಹುಟ್ಟಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇನ್ನು ನೀವು ನನ್ನನ್ನು ವೇಶ್ಯೆ ಎಂದು ಕರೆದಿದ್ದೀರಿ. ನಿಮ್ಮಂಥವರ ನೆರಳು ಕೂಡ ನನ್ನನ್ನು ಸೋಕುವುದಿಲ್ಲ. ಅನೇಕರು ತಮ್ಮನ್ನು ಪುರುಷರ ಹಕ್ಕುಗಳ ಪ್ರತಿಪಾದಕರೆಂದುಕೊಂಡಿರುವುದು ಹಾಸ್ಯಾಸ್ಪದ” ಎಂದಿದ್ದಾರೆ. ಚಿನ್ಮಯಿ ಶ್ರೀಪಾದ ಅವರ ಈ ಪ್ರತಿಕ್ರಿಯೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ:Pralhad Joshi: ಯಾವ ಕಾಲಕ್ಕೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಪ್ರಲ್ಹಾದ್ ಜೋಶಿ