Thursday, 12th December 2024

Karnataka High Court: ಕನ್ನಡದಲ್ಲೇ ತೀರ್ಪು ಪ್ರಕಟಿಸಿ ಇತಿಹಾಸ ಬರೆದ ಕರ್ನಾಟಕ ಹೈಕೋರ್ಟ್‌

Karnataka High Court

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ (Karnataka High Court) ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡದಲ್ಲೇ ತೀರ್ಪು ಪ್ರಕಟಿಸುವ ಮೂಲಕ ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌ ಮತ್ತು ಸಿ.ಎಂ.ಜೋಶಿ ಅವರ ವಿಭಾಗೀಯ ಪೀಠವು ಗುರುವಾರ (ಡಿ. 12) ಇತಿಹಾಸ ಬರೆದಿದೆ. ಇದರೊಂದಿಗೆ ಹೈಕೋರ್ಟ್‌ನಲ್ಲಿ ಕನ್ನಡಕ್ಕೆ ಆದ್ಯತೆ ದೊರೆಯಬೇಕು ಎಂಬ ಬಹು ವರ್ಷಗಳ ಕೂಗಿಗೆ ಮಾನ್ಯತೆ ಸಿಕ್ಕಂತಾಗಿದೆ.

ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ವರ್ಸಸ್‌ ಎಸ್‌. ಲಿಂಗಣ್ಣ ಮತ್ತು ಇತರರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದ್ದು, ಈ ಪ್ರಕರಣದ ತೀರ್ಪನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ನ್ಯಾಯಮೂರ್ತಿಗಳು ಬರೆದಿದ್ದಾರೆ.

ತೀರ್ಪನ್ನು ಓದಿದ ನಂತರ ನ್ಯಾ. ದೀಕ್ಷಿತ್‌ ಅವರು “ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು” ಎಂದು ಹೇಳಿದರು. ವಿಶೇಷ ಎಂದರೆ ಕನ್ನಡದ ತೀರ್ಪು ಅನುವಾದವಲ್ಲ. ಬದಲಾಗಿ ನ್ಯಾಯಾಧೀಶರೇ ಕನ್ನಡದಲ್ಲಿ ಬರೆದಿದ್ದಾರೆ. ಈ ವಿಚಾರವನ್ನು ಸ್ವತಃ ನ್ಯಾ. ದೀಕ್ಷಿತ್‌ ಅವರೇ ತಿಳಿಸಿದರು.

ತೀರ್ಪಿನಲ್ಲಿ ಏನಿದೆ?

ಮೊದಲಿಗೆ ನ್ಯಾ. ದೀಕ್ಷಿತ್‌ ಅವರು ಇಂಗ್ಲಿಷ್‌ನಲ್ಲಿ ಬಳಿಕ ಕನ್ನಡದಲ್ಲಿ ತೀರ್ಪು ಓದಿದರು. “ಈ ಮೇಲ್ಮನವಿಯನ್ನು ಪುರಸ್ಕರಿಸಲಾಗಿದೆ. ಏಕಸದಸ್ಯ ನ್ಯಾಯಾಧೀಶರ ಪ್ರಶ್ನಿತ ತೀರ್ಪು ಮತ್ತು ಆದೇಶವನ್ನು ರದ್ದುಗೊಳಿಸಲಾಗಿದೆ. ಪ್ರತಿವಾದಿಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಟಿಒಎಸ್‌ ಸಂಖ್ಯೆ 1/2024ರಲ್ಲಿ ಮೇಲ್ಮನವಿದಾರರ ದಾವೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಅದನ್ನು ಕಾನೂನು ರೀತ್ಯಾ ವಿಚಾರಣೆ ಮತ್ತು ವಿಲೇವಾರಿ ಮಾಡಬೇಕಾಗುತ್ತದೆ. ಯಾರೂ ವೆಚ್ಚವನ್ನು ಭರಿಸುವಂತಿಲ್ಲ” ಎಂದು ಹೇಳಿದರು.

ಆಗ ವಕೀಲರೊಬ್ಬರು “ಇದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ನ್ಯಾಯಮೂರ್ತಿಗಳ ಈ ತೀರ್ಪು ಇತರ ನ್ಯಾಯಮೂರ್ತಿಗಳು ಉತ್ತಮ ಸಂದೇಶ ರವಾನಿಸಲಿದೆ” ಎಂದು ಅಭಿಪ್ರಾಯಪಟ್ಟರು. ಇದಕ್ಕೆ ನ್ಯಾ. ದೀಕ್ಷಿತ್‌ ಅವರು “ಹೌದು, ಸಾಮಾನ್ಯ ಜನರಿಗೆ ಅರ್ಥವಾಗಬೇಕು. ಇಂಗ್ಲಿಷ್‌ ಅಥವಾ ಅವರಿಗೆ ತಿಳಿಯದ ಭಾಷೆಯಲ್ಲಿ ಹೇಳಿದರೆ ಅರ್ಥವಾಗದು” ಎಂದರು.

ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲು ಸುಪ್ರೀಂ ಸೂಚನೆ

ಈ ವಿಚಾರದ ಕುರಿತಂತೆ ಪೂರಕವಾಗಿ ಮಾತನಾಡಿದ ನ್ಯಾಯ. ಸಿ.ಎಂ.ಜೋಶಿ ಅವರು, “ಸುಪ್ರೀಂ ಕೋರ್ಟ್‌ ಸಹ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ 2,400 ತೀರ್ಪುಗಳು ಸದ್ಯ ಕನ್ನಡಕ್ಕೆ ಅನುವಾದಗೊಂಡಿವೆ. 1,400 ಹೈಕೋರ್ಟ್‌ ತೀರ್ಪುಗಳು ಕನ್ನಡಕ್ಕೆ ಅನುವಾದವಾಗಿವೆ” ಎಂದರು.

ಹೈಕೋರ್ಟ್‌ನ ತೀರ್ಪುಗಳನ್ನು ಕೃತಕ ಬುದ್ದಿಮತ್ತೆ (Artificial Intelligence) ಸಹಾಯದಿಂದ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದಕ್ಕೆ ಪ್ರಕ್ರಿಯೆಯನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಕೃತಕ ಬುದ್ದಿಮತ್ತೆ ಬಳಕೆ ಮಾಡಿ ನ್ಯಾಯಾಂಗ ದಾಖಲೆಗಳನ್ನು ಅನುವಾದ ಮಾಡುವ ಸಲಹಾ ಸಮಿತಿಯನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಸಿ.ಎಂ. ಜೋಶಿ ಅವರ ನೇತೃತ್ವದಲ್ಲಿ 2023ರ ಫೆಬ್ರವರಿಯಲ್ಲಿ ರಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ: DY Chandrachud: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೀಡಿರುವ 10 ಪ್ರಮುಖ ತೀರ್ಪುಗಳಿವು