Thursday, 12th December 2024

End for Superstition: ದಲಿತರಿಗೆ ಶೇವಿಂಗ್ ಮಾಡಲ್ಲ ಎಂಬ ಮೌಢ್ಯಕ್ಕೆ ತೆರೆ ಎಳೆದ ಗುಬ್ಬಿ ತಹಶೀಲ್ದಾರ್

ಗುಬ್ಬಿ: ದಲಿತರಿಗೆ ಕಟಿಂಗ್ ಶೇವಿಂಗ್ ಮಾಡಲ್ಲ ಎಂಬ ವಿಚಾರ ಪೊಲೀಸರ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಚರ್ಚೆಯಾದ ಹಿನ್ನಲೆ ಕೂಡಲೇ ತಹಶೀಲ್ದಾರ್ ಬಿ.ಆರತಿ ಹಾಗೂ ಸಿಪಿಐ ಗೋಪಿನಾಥ್ ಸ್ಥಳಕ್ಕೆ ಧಾವಿಸಿ ಕ್ಷೌರಿಕರಿಗೆ ಬುದ್ಧಿ ಹೇಳಿ ಅಸ್ಪೃಶ್ಯತೆ ಮೌಢ್ಯತೆ ಅಳಿಸಿ ಕೂಡಲೇ ದಲಿತರಿಗೆ ಶೇವಿಂಗ್ ಮಾಡಿಸಿದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ನಡೆದಿದೆ. 

ಅಮ್ಮನಘಟ್ಟ ಗ್ರಾಮದಲ್ಲಿ ಕ್ಷೌರಿಕನೊಬ್ಬ ನಮ್ಮ ಪೂರ್ವಜರು ದಲಿತರಿಗೆ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡುತ್ತಿರಲಿಲ್ಲ. ಅದೇ ಪದ್ಧತಿ ಮುಂದು ವರೆಸಿದ್ದ ಹಿನ್ನಲೆ ಈ ಬಗ್ಗೆ ದಲಿತರ ಸಭೆಯಲ್ಲಿ ಮುಖಂಡರು ಖಂಡಿಸಿ ಚರ್ಚಿಸಿದ್ದರು. ಎಷ್ಟು ಬಾರಿ ಹೇಳಿದ್ದರೂ ಹಟಕ್ಕೆ ಬಿದ್ದಂತೆ ದಲಿತರನ್ನು ಅಂಗಡಿಗೆ ಬಾರದಂತೆ ಮಾಡಿದ್ದ ಹಿನ್ನಲೆ ಸಭೆಯ ವಿಚಾರ ಗಂಭೀರ ಸ್ವರೂಪ ಪಡೆದು ತಹಶೀಲ್ದಾರ್ ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಬುದ್ಧಿವಾದ ಹೇಳಿ ಕಾನೂನು ಬಗ್ಗೆ ಅರಿವು ಮೂಡಿಸಿ ತಕ್ಷಣ ದಲಿತರಿಗೆ ಶೇವಿಂಗ್ ಮಾಡುವಂತೆ ಹೇಳಿ ಸ್ಥಳದಲ್ಲೇ ಎಲ್ಲಾ ಮೌಢ್ಯತೆಗೆ ತೆರೆ ಎಳೆದರು.

ಶಿರಾದಲ್ಲಿ ನಡೆದ ಡಿವೈಎಸ್ಪಿ ದಲಿತರ ಕುಂದು ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾದ ಹಿನ್ನಲೆ ತಹಶೀಲ್ದಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ತಂಡದಲ್ಲಿ ಕಂದಾಯ ನಿರೀಕ್ಷಕ ಕುಮಾರ್, ಪಿಎಸ್ಐ ಸುನೀಲ್ ಕುಮಾರ್ ಸೇರಿದಂತೆ ಗ್ರಾಮ ಲೆಕ್ಕಿಗರು ಇದ್ದರು.