Thursday, 12th December 2024

Maha Kumbh 2025: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳಕ್ಕೆ ದಿನಗಣನೆ; ತ್ರಿವೇಣಿ ಸಂಗಮದಲ್ಲಿ ಪುಣ್ಯಕ್ಷಣ ಹೇಗಿರಲಿದೆ?

ಲಖನೌ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) 2025ರಲ್ಲಿ ಮಹಾ ಕುಂಭಮೇಳ (Maha Kumbh 2025) ನಡೆಯಲಿದೆ. ಇದು ಭಾರತೀಯ ಸಂತ ಪರಂಪರೆಯಲ್ಲೇ ಅತೀ ದೊಡ್ಡ ಧಾರ್ಮಿಕ ಸಂಭ್ರಮವಾಗಿದೆ. ಈ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಕೋಟ್ಯಂತರ ಮಂದಿ ಪ್ರಯಾಗ್‌ರಾಜ್‌ಗೆ ಭೇಟಿ ನಿಡುತ್ತಾರೆ. ಎಲ್ಲ ಧಾರ್ಮಿಕ ಆಚರಣೆಗಳಿಗಿಂತಲೂ ಕುಂಭಮೇಳವನ್ನು ಶ್ರೇಷ್ಠವಾದದ್ದು ಎಂಬುದು ಸನಾತನ ಹಿಂದು ಧರ್ಮದ ನಂಬಿಕೆಯಾಗಿದೆ.

ಈ ಕುಂಭಮೇಳವನ್ನು ನಾಲ್ಕು ಯಾತ್ರಾ ಸ್ಥಳಗಳಲ್ಲಿ ಆಯೊಜಿಸಲಾಗುತ್ತದೆ: ಪ್ರಯಾಗ್‌ರಾಜ್‌ನ (Prayagraj) ಸಂಗಮ ಸ್ಥಾನದಲ್ಲಿ, ಹರಿದ್ವಾರದ (Haridwar) ಗಂಗಾ ನದಿಯಲ್ಲಿ (Ganga River), ಉಜ್ಜೈನಿಯಲ್ಲಿರುವ (Ujjain) ಶಿಪ್ರಾ ನದಿಯಲ್ಲಿ (Shipra River) ಹಾಗೂ ನಾಶಿಕ್‌ನಲ್ಲಿರುವ (Nashik) ಗೋದಾವರಿ ನದಿಯಲ್ಲಿ (Godavari River) ಈ ‘ಕುಂಭ ಮೇಳ’ ಆಯೋಜನೆಗೊಳ್ಳುತ್ತದೆ.

ಹಾಗಾದರೆ ಮಹಾ ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಯಾಕೆ ಆಚರಿಸಲಾಗುತ್ತದೆ? ಏನಿದರ ಹಿಂದಿನ ಲೆಕ್ಕಾಚಾರ? ಮುಂತಾದ ವಿಚಾರಗಳ ಕುರಿತಾಗಿ ಇಲ್ಲಿದೆ ವಿವರ.

ಈ ಬಾರಿಯ ಮಹಾಕುಂಭ ಮೇಳ 2025ರ ಜನವರಿ 13ರಂದು ಪ್ರಾರಂಭಗೊಂಡು ಫೆಬ್ರವರಿ 26ಕ್ಕೆ ಸಂಪನ್ನಗೊಳ್ಳಲಿದೆ. ಹಿಂದು ಧಾರ್ಮಿಕ ಪಂಚಾಂಗದ ಪ್ರಕಾರ ಹೇಳುವುದಾದರೆ ಈ ಮೇಳವು ಪುಷ್ಯ ಪೌರ್ಣಮಿ ಸ್ನಾನದೊಂದಿಗೆ ಪ್ರಾರಂಭಗೊಂಡು ಮಹಾಶಿವರಾತ್ರಿ ಸ್ನಾನದೊಂದಿಗೆ ಸಮಾಪನಗೊಳ್ಳಲಿದೆ.

ಹರಿದ್ವಾರ, ಪ್ರಯಾಗ್ ರಾಜ್, ನಾಶಿಕ್ ಮತ್ತು ಉಜ್ಜೈನಿಗಳಲ್ಲಿ ಈ ಮಹಾಕುಂಭ ನಡೆಯಲಿದೆ. ಮಹಾಕುಂಭ ಮೇಳವು ಪ್ರತೀ 12 ವರ್ಷಗಳಿಗೊಮ್ಮೆ ಪರ್ಯಾಯ ರಿತಿಯಲ್ಲಿ ಅಥವಾ ಆವರ್ತನ ಪದ್ಧತಿಯಲ್ಲಿ ಈ ನಾಲ್ಕು ಜಾಗಗಳಲ್ಲಿ ಒಂದು ಕಡೆ ನಡೆಯುತ್ತದೆ.

ಮಹಾಕುಂಭ ಮೇಳ ಯಾಕೆ 12 ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುತ್ತದೆ?

ಗ್ರಹಗತಿ ಚಲನೆಯ ಹಿನ್ನಲೆ

2013ರ ಮಹಾಕುಂಭ ಮೇಳವು ಪ್ರಯಾಗ್‌ರಾಜ್‌ನಲ್ಲಿ ನಡೆದಿತ್ತು. ಗ್ರಹಗಳ ಸ್ಥಿತಿಯನ್ನು ಆಧರಿಸಿ ಮಹಾಕುಂಭ ಆಯೋಜನೆಗೊಳ್ಳುತ್ತದೆ. ಇದರಲ್ಲಿ ಗುರು ಮತ್ತು ಸೂರ್ಯನ ಸ್ಥಾನ ನಿರ್ಣಯ ಪ್ರಮುಖವಾಗಿರುತ್ತದೆ. ಗುರು ಗ್ರಹವು 12 ರಾಶಿಗಳನ್ನು ಪರ್ಯಟನ ಮಾಡಲು 12 ವರ್ಷಗಳು ತೆಗೆದುಕೊಳ್ಳುತ್ತದೆ. ಗುರು ಗ್ರಹವು ಕುಂಭ ರಾಶಿಯನ್ನು ಹಾಗೂ ಸೂರ್ಯ ಮೇಷ ರಾಶಿಯನ್ನು ಪ್ರವೇಶಿಸಿದಾಗ ಮಹಾಕುಂಭ ಮೇಳ ನಡೆಯುತ್ತದೆ. ಈ ಕಾರಣದಿಂದ ಮಹಾ ಕುಂಭ ಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ.

ಧಾರ್ಮಿಕ – ಪೌರಾಣಿಕ ಹಿನ್ನಲೆ

ಹಿಂದೆ ದೇವಾಸುರರ ನಡುವೆ ಸಮುದ್ರ ಮಥನ ನಡೆದ ಕಾಲಕ್ಕೆ, ದೇವತೆಗಳು ಮತ್ತು ಅಸುರರ ನಡುವೆ 12 ಪುಣ್ಯ ದಿನಗಳ ಕಾಲ ಹೋರಾಟ ನಡೆದಿತ್ತು. ಈ ಹನ್ನೆರಡು ದಿನವನ್ನು ಮಾನವ ಲೆಕ್ಕಾಚಾರದ 12 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪ್ರತೀ 12 ವರ್ಷಗಳಿಗೊಮ್ಮೆ ಮಹಾಕುಂಭಮೇಳವನ್ನು ಆಯೋಜಿಸಲಾಗುತ್ತದೆ ಮತ್ತು ಇದನ್ನು ಪರಮ ಪವಿತ್ರ ಎಂದು ನಂಬಲಾಗುತ್ತದೆ. ಮಹಾಕುಂಭ ಮೇಳದ ಸಂದರ್ಭದಲ್ಲಿ ಸಂಗಮ ಸ್ಥಾನದಲ್ಲಿ ಯಾರು ಪುಣ್ಯಸ್ನಾನ ಮಾಡಿ, ದಾನ ಧರ್ಮ ಮಾಡಿ, ಮಂತ್ರಗಳ ಪಠಣ ಮಾಡುತ್ತಾರೋ ಅವರ ಪಾಪಗಳೆಲ್ಲವೂ ತೊಳೆದು ಹೋಗಿ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕ ಹಿಂದೂಗಳ ಬಲವಾದ ನಂಬಿಕೆಯಾಗಿದೆ.

2025ರ ಮಹಾ ಕುಂಭಮೇಳದಲ್ಲಿ ಪ್ರಮುಖ ಸ್ನಾನದ ದಿನಾಂಕಗಳು

ಜನವರಿ 13 : ಪುಷ್ಯ ಪೌರ್ಣಮಿಯಂದು ಮೊದಲ ಶಾಹಿ ಸ್ನಾನ (Shahi Snan).

ಜನವರಿ 14:  ಮಕರ ಸಂಕ್ರಾಂತಿಯಂದು ಎರಡನೇ  ಶಾಹಿ ಸ್ನಾನ

ಜನವರಿ 29: ಮೌನಿ ಅಮಾವಾಸ್ಯೆಯಂದು  ಮುರನೇ ಶಾಹಿ ಸ್ನಾನ

ಫೆಬ್ರವರಿ 3: ಬಸಂತ್ ಪಂಚಮಿ ದಿನದಂದು ನಾಲ್ಕನೇ ಶಾಹಿ ಸ್ನಾನ.

ಫೆಬ್ರವರಿ 12: ಮಾಘ ಪೌರ್ಣಮಿಯಂದು ಐದನೇ ಶಾಹಿ ಸ್ನಾನ.

ಫೆಬ್ರವರಿ 26: ಮಹಾ ಶಿವರಾತ್ರಿಯ (Mahashivratri) ಪುಣ್ಯ ದಿನದಂದು ಆರನೇ ಮತ್ತು  ಅಂತಿಮ ಶಾಹಿ ಸ್ನಾನ ನಡೆಯಲಿದೆ.

ಇದನ್ನೂ ಓದಿ: Viral Video: ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ

ಈ ಬಾರಿಯ ಮಹಾಕುಂಭ ಮೇಳಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ನೇತೃತ್ವದ ಸರ್ಕಾರ ಸಕಲ ರೀತಿಯಲ್ಲಿ ತಯಾರಾಗಿದೆ. ಕುಂಭಮೇಳ ಕೇವಲ ಒಂದು ಉತ್ಸವವಲ್ಲ, ಇದು ಅಧ್ಯಾತ್ಮಿಕತೆ, ನಂಬಿಕೆ ಹಾಗೂ ಸಾಂಸ್ಕೃತಿಕ ಏಕತೆಯ ಸ್ಮಾರಕ ಸಂಗಮವಾಗಿದೆ. 2025ರಲ್ಲಿ ಹಿಂದೂ ಧರ್ಮದ ಅತ್ಯಂತ ಮಹತ್ವದ ಮಹಾ ಮೇಳ ಇದಾಗಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಕುಂಭಮೇಳದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಭೇಟಿ ನೀಡಲಿದ್ದಾರೆ.

ಈ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಮಂದಿ ಭಕ್ತರು ಸೇರುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಅವ್ಯವಸ್ಥೆ, ಅಹಿತಕರ ಘಟನೆಗಳು ನಡೆಯದಂತೆ ಯೋಗಿ ಸರ್ಕಾರ ಭಾರಿ ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವ ಮೂಲಕ ತಮ್ಮ ಪಾಪಗಳಿಂದ ಮುಕ್ತಿಪಡೆಯುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತದೆ.