Saturday, 14th December 2024

Sensex Down Today: 13ನೇ ಬ್ಲ್ಯಾಕ್‌ ಫ್ರೈಡೇ! ಸೆನ್ಸೆಕ್ಸ್‌ 1,100 ಅಂಕ ಪತನ, ಕಾರಣವೇನು?

Sensex Down Today

ಮುಂಬಯಿ: ಜಾಗತಿಕ ಮಟ್ಟದಲ್ಲಿ ಷೇರು ಸೂಚ್ಯಂಕಗಳು ಶುಕ್ರವಾರ ತತ್ತರಿಸಿವೆ. ಮುಂಬಯಿ ಷೇರು ಮಾರುಕಟ್ಟೆ (Share Market)ಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶುಕ್ರವಾರ ಭಾರಿ ಕುಸಿತಕ್ಕೀಡಾಗಿವೆ (Sensex Down Today). ಬೆಳಗ್ಗೆ ಸೆನ್ಸೆಕ್ಸ್‌ 1,147 ಅಂಕಗಳ ಕುಸಿತಕ್ಕೀಡಾಗಿ 80,142 ಅಂಕಗಳ ಮಟ್ಟದಲ್ಲಿತ್ತು. ನಿಫ್ಟಿ 337 ಅಂಕ ಕುಸಿದು 24,211ಕ್ಕೆ ವಹಿವಾಟು ನಡೆಸುತ್ತಿತ್ತು.

ಡಾಲರ್‌ ಅಬ್ಬರ, ಚೀನಾದ ಮಂದಗತಿ ಎಫೆಕ್ಟ್

ಅಮೆರಿಕದಲ್ಲಿ ಡಾಲರ್‌ ಕರೆನ್ಸಿ ಪ್ರಬಲವಾಗಿರುವುದು, ಚೀನಾದಲ್ಲಿ ಆರ್ಥಿಕ ಪ್ರಗತಿ ಕುರಿತ ನೆರವಿನ ಪ್ಯಾಕೇಜ್‌ ಬಗ್ಗೆ ಅನಿಶ್ಚಿತತೆ, ನವೆಂಬರ್‌ನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಹಣದುಬ್ಬರ ಹೆಚ್ಚಳವಾಗಿರುವುದು ಷೇರು ಪೇಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಬಿಎಸ್‌ಇನಲ್ಲಿ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 6.5 ಲಕ್ಷ ಕೋಟಿ ರೂ. ಇಳಿದಿದ್ದು, 451 ಲಕ್ಷ ಕೋಟಿ ರೂ.ಗೆ ತಗ್ಗಿತು. ಡಾಲರ್‌ ಪ್ರಬಲವಾದರೆ ಭಾರತದ ಆಮದು ವೆಚ್ಚಗಳು ಹೆಚ್ಚಲಿದ್ದು, ಇದರಿಂದ ಹಣದುಬ್ಬರ ಕೂಡ ಏರಿಕೆಯಾಗುವ ಅಪಾಯ ಇದೆ.

ಲೋಹದ ಷೇರುಗಳು ಪಾತಾಳಕ್ಕೆ ಕುಸಿತ

ನಿಫ್ಟಿ ಮೆಟಲ್‌ ಸ್ಟಾಕ್ಸ್‌ಗಳು 5% ತಗ್ಗಿತು. ಚೀನಾದಲ್ಲಿ ಲೋಹಗಳಿಗೆ ಬೇಡಿಕೆ ಮಂದಗತಿಯಲ್ಲಿತ್ತು. ಹೀಗಾಗಿ ಲೋಹದ ಉದ್ದಿಮೆಯ ಷೇರು ದರಗಳು ಭಾರಿ ನಷ್ಟಕ್ಕೀಡಾಯಿತು. ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಎನ್‌ಎಂಡಿಸಿ, ಸೇಲ್‌ ಕಂಪನಿಯ ಷೇರುಗಳು ಭಾರಿ ಕುಸಿಯಿತು.

ನಿಫ್ಟಿ ಬ್ಯಾಂಕ್‌, ಆಟೊಮೊಬೈಲ್‌, ಹಣಕಾಸು ಸೇವೆ, ಪಿಎಸ್‌ಯು ಬ್ಯಾಂಕ್‌, ರಿಯಾಲ್ಟಿ ಷೇರುಗಳೂ ಇಳಿಕೆಯಾಯಿತು. ಇಂಡಿಯಾ ವಿಕ್ಸ್‌ 9.9%ರಿಂದ 14.5%ಕ್ಕೆ ಜಿಗಿದು ಮಾರುಕಟ್ಟೆಯ ಅನುಶ್ಚಿತತೆಯನ್ನು ಬಿಂಬಿಸಿತು.
ಜಪಾನ್‌, ಚೀನಾ, ಹಾಂಕಾಂಗ್‌, ಯುರೋಪ್‌ನಲ್ಲಿ ಷೇರು ಸೂಚ್ಯಂಕಗಳು ಕುಸಿಯಿತು. ಜೊಮ್ಯಾಟೊ ಕಂಪನಿಯ ಷೇರು ದರದಲ್ಲಿ 3% ಇಳಿಕೆ ದಾಖಲಾಯಿತು (277 ರೂ.). ಕಂಪನಿಯ ವಿರುದ್ಧ 803 ಕೋಟಿ ರೂ. ಜಿಎಸ್‌ಟಿ ಬೇಡಿಕೆ ಕುರಿತ ನೋಟಿಸ್‌ ಜಾರಿಯಾಗಿರುವುದು ಇದಕ್ಕೆ ಕಾರಣ.

ಈ ಸುದ್ದಿಯನ್ನೂ ಓದಿ: JM Financial Picks Top Stocks: 2025ರಲ್ಲಿ ಲಾಭ ಗಳಿಸಲು‌ 12 ಬೆಸ್ಟ್‌ ಸ್ಟಾಕ್ಸ್!