Friday, 22nd November 2024

ಭವಿಷ್ಯದ ಅಗತ್ಯಗಳಿಗಾಗಿ ಹೊಸ ಪಾರ್ಲಿಮೆಂಟ್

ಅವಲೋಕನ

ಪ್ರಹ್ಲಾದ್ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು

ಎಲ್ಲಾ ದೇಶಕ್ಕೂ ಒಂದು ಸಂದೇಶ ನೀಡುವುದಕ್ಕಿರುತ್ತದೆ, ಒಂದು ಉದ್ದೇಶ ಈಡೇರಿಸುವುದಕ್ಕಿರುತ್ತದೆ, ಒಂದು ಗುರಿ ತಲುಪುವು ದಕ್ಕಿರುತ್ತದೆ. ಅಂತೆಯೇ, ಭಾರತದ ಧ್ಯೇಯ ‘ಮಾನವಕುಲಕ್ಕೆ ಮಾರ್ಗದರ್ಶನ’ ಮಾಡುವುದು. ಹೀಗೆಂದು ಸ್ವಾಮಿ ವಿವೇಕಾ ನಂದರು ಬಹಳ ಹಿಂದೆಯೇ ಘಂಟಾಘೋಷವಾಗಿ ಹೇಳಿದ್ದರು.

ಅದೇ ರೀತಿ ಭಾರತವು ತನ್ನ ಸಂಸದೀಯ ಪ್ರಜಾಪ್ರಭುತ್ವದ ಮೂಲಕ ಸಾಮಾಜಿಕ ಕಲ್ಯಾಣದ ಉದ್ದೇಶವನ್ನು ಸಾಧಿಸಲು ಸಾಕಷ್ಟು
ಶ್ರಮಿಸುತ್ತಾ ಬಂದಿದೆ. ನಿನ್ನೆ ಒಂದು ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಾಧುನಿಕವಾದ ತ್ರಿಭುಜಾಕೃತಿಯ
ಹೊಸ ಸಂಸತ್ ಭವನಕ್ಕೆ ಶಿಲಾನ್ಯಾಸ ಮಾಡಿದರು. 1224 ಸಂಸದರು ಕುಳಿತುಕೊಳ್ಳಬಹುದಾದ ಭವ್ಯ ಕಟ್ಟಡವದು.

ಆತ್ಮನಿರ್ಭರ ಭಾರತದ ಪ್ರತೀಕವಾಗಿ ತಲೆಯೆತ್ತಲಿರುವ ಈ ಹೊಸ ‘ಪ್ರಜಾಪ್ರಭುತ್ವದ ದೇಗುಲ’ ಈಗಾಗಲೇ ಇರುವ ಸುಂದರ ವೃತ್ತಾಕಾರದ ಸಂಸತ್ ಭವನದ ಮೂಲಸೌಕರ್ಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ನಮ್ಮ ಹಳೆಯ ಸಂಸತ್ ಭವನವನ್ನು 1912-13ರಲ್ಲಿ ವಿನ್ಯಾಸ ಮಾಡಿದವರು ಆರ್ಕಿಟೆಕ್ಟ್‌ಗಳಾದ ಎಡ್ವಿನ್ ಲ್ಯೂಟನ್ಸ್ ಹಾಗೂ ಹರ್ಬರ್ಟ್ ಬೇಕರ್. ಮಧ್ಯಪ್ರದೇಶದ ಮೊರೇನಾ ದಲ್ಲಿರುವ ಚೌಸಾತ್ ಯೋಗಿನಿ ದೇಗುಲದಿಂದ ಸ್ಫೂರ್ತಿ ಪಡೆದು ಆ ವಿನ್ಯಾಸ ಮಾಡಿದ್ದರು.

1927ರಲ್ಲಿ ಉದ್ಘಾಟನೆಯಾದ ಈ ಸಂಸತ್ ಭವನ ಭಾರತದ ಅತ್ಯಂತ ಹಳೆಯ ಪಾರಂಪರಿಕ ಕಟ್ಟಡಗಳಲ್ಲಿ ಒಂದು. ಈಗ ಹೊಸ ಕಟ್ಟಡ ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನದ ಪ್ರತೀಕವಾಗಿ, ‘ಏಕ ಭಾರತ ಶ್ರೇಷ್ಠ ಭಾರತ’ ಎಂಬ ಧ್ಯೇಯದೊಂದಿಗೆ
2022ರ ಚಳಿಗಾಲದ ಅಧಿವೇಶನದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನಾವೀಗ ಬಳಸುತ್ತಿರುವ ಸಂಸತ್ ಭವನದಲ್ಲಿನ ಕೊರತೆಗಳ ಬಗ್ಗೆ ಬಹಳ ವರ್ಷಗಳಿಂದ ಕಳಕಳಿ ವ್ಯಕ್ತವಾಗುತ್ತಿತ್ತು. ಅದರಲ್ಲೂ, ಕಳೆದ ಮಳೆಗಾಲದ ಅಧಿವೇಶನ ವನ್ನು ಕೋವಿಡ್-19 ಮಹಾಮಾರಿಯ ಕಾಲದಲ್ಲಿ ನಡೆಸಿದಾಗ ಈ ಸಂಸತ್ ಭವನದ ಇತಿಮಿತಿ ಗಳು ಇನ್ನಷ್ಟು ಢಾಳಾಗಿ ಅನುಭವಕ್ಕೆ ಬಂದವು. ಈ ಸಂಸತ್ ಭವನದಲ್ಲಿರುವ ಲೋಕಸಭೆ, ರಾಜ್ಯಸಭೆ ಹಾಗೂ ಸೆಂಟ್ರಲ್ ಹಾಲ್‌ಗಳು ಕ್ರಮವಾಗಿ 552, 245 ಹಾಗೂ 436 ಜನ ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಹೊಂದಿವೆ.

ಹೆಚ್ಚಿನ ಆಸನಗಳ ನಡುವೆ ಇನ್ನೊಂದು ಡೆಸ್ಕ್ ಹಾಕಲು ಜಾಗವಿಲ್ಲ. ಆದರೆ, ಹೊಸ ಸಂಸತ್ ಭವನದಲ್ಲಿ ಈಗಿನ ಹಾಗೂ
ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಸಕಲ ವ್ಯವಸ್ಥೆಗಳಿರುತ್ತವ ಎರಡೂ ಸದನಗಳಲ್ಲೂ ಬೇಕಾದಷ್ಟು ಆಸನಗಳನ್ನು ಹಾಕಲು
ಜಾಗವಿರುತ್ತದೆ. ಜಂಟಿ ಕಲಾಪ ನಡೆಸುವುದಕ್ಕೆ ದೊಡ್ಡ ಹಾಲ್ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ, 2026 ರಲ್ಲಿ ನಡೆಯುವ
ಸಂಸದೀಯ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಿದರೆ ಆಗ ಲೋಕಸಭೆಯಲ್ಲಿ 888 ಸದಸ್ಯರು ಕುಳಿತುಕೊಳ್ಳಲು ಹಾಗೂ ರಾಜ್ಯಸಭೆಯಲ್ಲಿ 384 ಆಸನಗಳನ್ನು ಹಾಕಲು ಸಾಧ್ಯವಾಗುವಂತೆ ಹೊಸ ಸಂಸತ್ ಭವನ ನಿರ್ಮಾಣ ವಾಗುತ್ತದೆ.

130 ಕೋಟಿ ಜನಸಂಖ್ಯೆಯ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಎಂಬ ಹೆಗ್ಗಳಿಕೆಗೆ ತಕ್ಕಂತೆ ಈ ಸಂಸತ್ ಭವನವೂ ಬೃಹತ್ತಾಗಿಯೇ ಇರಲಿದೆ. ನಮ್ಮ ದೇಶಕ್ಕೆ ಸಂವಿಧಾನವೇ ಪರಮೋಚ್ಚವೆಂಬುದು ಎಲ್ಲರಿಗೂ ಗೊತ್ತು. ಇದೊಂದು ಜೀವಂತ ದಾಖಲೆ. ಸುಪ್ರೀಂಕೋರ್ಟ್ ಹೇಳುವಂತೆ ಅಥವಾ ಸಂಸತ್ತಿಗೆ ತೋಚಿದಂತೆ ಸಂವಿಧಾನ ಬದಲಾಗುವುದಿಲ್ಲ.

ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳು ಸಂವಿಧಾನದ ಮಕ್ಕಳು. ಇವುಗಳ ಅಧಿಕಾರ ಹಾಗೂ ಕಾರ್ಯವಿಧಾನಗಳು
ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿವೆ. ಈ ಐತಿಹಾಸಿಕ ಸಂದರ್ಭದಲ್ಲಿ ನಾನು ನವೆಂಬರ್ 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಎಲ್ಲಾ ಶಾಸನ ಸಭೆಗಳ ಸದಸ್ಯರ 80ನೇ ಅಧಿವೇಶನ ವನ್ನುದ್ದೇಶಿಸಿ ಮಾತನಾಡಿದ ವೇಳೆ ಬಿತ್ತಿದ ಕೆಲ ಹೊಸ ಚಿಂತನೆಗಳನ್ನು ಮತ್ತೊಮ್ಮೆ ನೆನಪಿಸಲು ಬಯಸುತ್ತೇನೆ.

ದೇಶದ ಜನರ ಒಳಿತಿಗಾಗಿ ಶಾಸನ ಸಭೆಗಳ ಸದಸ್ಯರು ಈ ವಿಷಯಗಳ ಮೇಲೆ ಮತ್ತೊಮ್ಮೆ ಗಂಭೀರವಾಗಿ ಗಮನ ಹರಿಸಿ ಇವುಗಳ ಜಾರಿಗೆ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ.

1. ನಮ್ಮ ಕಾಯಿದೆಗಳು, ನಿಯಮಗಳು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವುದು ಕಷ್ಟವೆಂಬುದು ನಮಗೆ ಗೊತ್ತಿದೆ. ಕಾಯಿದೆ ಕಾನೂನುಗಳು ಬಹಳ ಸಂಕೀರ್ಣವಾಗಿರುತ್ತವೆ ಎಂಬ ದೂರು ಈ ಕಾಯಿದೆಗಳಷ್ಟೇ ಹಳೆಯದು. ಇವುಗಳಲ್ಲಿ ಬಳಸುವ ತಾಂತ್ರಿಕ ಭಾಷೆಗಳು ಜನರನ್ನು ಗೊಂದಲಕ್ಕೀಡು ಮಾಡುತ್ತವೆ. ಬಹಳಷ್ಟು ದೇಶಗಳಲ್ಲೀಗ ಸರಳ ಇಂಗ್ಲಿಷ್ ಅಭಿಯಾನ ಆರಂಭವಾಗಿದೆ. ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಅಮೆರಿಕ ಮುಂತಾದ ಅನೇಕ
ದೇಶಗಳು ತಮ್ಮ ಕಾನೂನುಗಳ ಭಾಷೆಯನ್ನು ಸರಳಗೊಳಿಸುತ್ತಿವೆ.

ಭಾರತದಲ್ಲಿ ಈ ಕೆಲಸ ಇನ್ನೂ ಆರಂಭವಾಗಿಲ್ಲ. ಜನರ ಒಳಿತಿನ ದೃಷ್ಟಿಯಿಂದ ಕಾಯಿದೆ, ನಿಯಮ ಗಳು ಹಾಗೂ ಮಾರ್ಗದರ್ಶಿ ಸೂತ್ರಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳವಾದ ಭಾಷೆಯಲ್ಲಿ ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳ  ಬೇಕಿದೆ.

2.ಕಾಯಿದೆಯ ಪುಸ್ತಕಗಳನ್ನು ಅನಗತ್ಯವಾಗಿ ಭಾರಗೊಳಿಸುತ್ತಿರುವ, ಕೆಲಸಕ್ಕೆ ಬಾರದ ಹಾಗೂ ಇತರ ಕಾಯಿದೆಗಳ ಜತೆಗೆ ಘರ್ಷಣೆಗಿಳಿಯುವ ನಿರುಪಯುಕ್ತ ಹಳೆಯ ಕಾಯಿದೆಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಹೊರಟಿದೆ. ಈ ಕಾಯಿದೆಗಳು ದೇಶದ ಅಭಿವೃದ್ಧಿಗೂ ಸುಗಮ ಆಡಳಿತಕ್ಕೂ ತೊಡಕಾಗಿವೆ. ಹೇಗೆ ಕಾನೂನು ರೂಪಿಸುವುದು ಶಾಸನ ಸಭೆಗಳ ಸದಸ್ಯರ ನಿತ್ಯ
ಕೆಲಸವಾಗಿದೆಯೋ ಹಾಗೆಯೇ ನಿರುಪಯುಕ್ತ ಕಾಯಿದೆಗಳನ್ನು ಗುರುತಿಸಿ ರದ್ದುಪಡಿಸುವ ಕೆಲಸವೂ ಕಾಲಕಾಲಕ್ಕೆ ಆಗಬೇಕು.

ಅಂತಹದ್ದೊಂದು ಪರಾಮರ್ಶೆ ವ್ಯವಸ್ಥೆ ಜಾರಿಗೆ ಬಂದರೆ ನಮ್ಮ ಕಾನೂನು ಪುಸ್ತಕಗಳು ತೆಳುವಾಗುತ್ತವೆ. ಈ ಉದ್ದೇಶ ಈಡೇರಿಸಲು ಇಲ್ಲಿಯವರೆಗೆ 1486 ನಿರುಪಯುಕ್ತ ಕೇಂದ್ರ ಸರಕಾರಿ ಕಾಯಿದೆಗಳನ್ನು ಸಂಸತ್ತು ರದ್ದುಪಡಿಸಿದೆ. ಇದೇ ಹೆಜ್ಜೆ ಯನ್ನು ಎಲ್ಲಾ ರಾಜ್ಯ ಸರಕಾರಗಳೂ ಇರಿಸುವ ಅಗತ್ಯವಿದೆ.

3. ಇತ್ತೀಚೆಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಕಾಯಿದೆಗಳನ್ನು ತಿದ್ದುಪಡಿ ಮಾಡುವಾಗ ಅದಕ್ಕೆ ‘ಸೂರ್ಯಾಸ್ತ ನಿಯಮ’  (ಸನ್‌ಸೆಟ್ ಕ್ಲಾಸ್) ಅಳವಡಿಸಿಕೊಳ್ಳುವ ವ್ಯವಸ್ಥೆ ಆರಂಭವಾಗಿದೆ. (ಉದಾಹರಣೆಗೆ, ಖನಿಜಗಳ ಕಾಯಿದೆ ತಿದ್ದುಪಡಿ – 2020). ಈ ನಿಯಮವನ್ನು ಎಲ್ಲಾ ತಿದ್ದುಪಡಿ ಕಾಯಿದೆಗಳಲ್ಲಿ ಸೇರಿಸಬೇಕಿದೆ. ಏಕೆಂದರೆ ಸಾಮಾನ್ಯ ನಿಯಮಗಳ ಕಾಯಿದೆ – 1897ರ ಸೆಕ್ಷನ್ 6A ಪ್ರಕಾರ ತಿದ್ದುಪಡಿ ಕಾಯಿದೆಗಳು ಜಾರಿಗೆ ಬಂದಾಗ ಮಾತ್ರ ಕಾಯಿದೆಯಲ್ಲಿ ಲೀನಗೊಳ್ಳುತ್ತವೆ.

ಆಗ ಅಂತಹ ತಿದ್ದುಪಡಿ ಕಾಯಿದೆಗಳನ್ನು ಮುಂದೆ ರದ್ದುಗೊಳಿಸಿದರೆ ಮಾತೃ ಕಾಯಿದೆಯಲ್ಲಿ ಅವುಗಳ ನಿಯಮಗಳು ಹಾಗೇ ಜಾರಿಯಲ್ಲಿರುತ್ತವೆ. ಈ ಸಮಸ್ಯೆ ಬಗೆಹರಿಸಿಕೊಳ್ಳಲು ಎಲ್ಲಾ ರಾಜ್ಯಗಳೂ ‘ಸೂರ್ಯಾಸ್ತ ನಿಯಮ’ವನ್ನು ಕಾಯಿದೆಗಳ
ತಿದ್ದುಪಡಿ, ಕಾಯಿದೆಗಳ ರದ್ದತಿ ಹಾಗೂ ಸಾಮಾನ್ಯ ಕಾಯಿದೆಯಲ್ಲಿ ಸೇರಿಸಿಕೊಳ್ಳಬೇಕೆಂದು ನಾನು ಸಲಹೆ ಮಾಡುತ್ತೇನೆ. ಆಗ ಅಂತಹ ಕಾಯಿದೆಗಳನ್ನು ಔಪಚಾರಿಕ ವಾಗಿ ರದ್ದುಪಡಿಸುವ ಅಗತ್ಯ ತಲೆದೋರುವುದಿಲ್ಲ.

4. ಸಂಸತ್ತಿನ ಎರಡು ಸದನಗಳೂ ಸೇರಿದಂತೆ ನಮ್ಮ ದೇಶದಲ್ಲಿರುವ ಎಲ್ಲಾ ಶಾಸನ ಸಭೆಗಳನ್ನೂ ಡಿಜಿಟಲೀಕರಣಗೊಳಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಮಟ್ಟದ ಸಿಂಗಲ್ ಡ್ಯಾಶ್‌ಬೋರ್ಡ್ ಇರಬೇಕೆಂದೂ ಪ್ರತಿಪಾದಿಸಿದ್ದಾರೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಜಾರಿಗೆ ತಂದಿರುವ ನ್ಯಾಷನಲ್ ಇ-ಧಾನ್ ಆಪ್ ಮೂಲಕ ಅದನ್ನು ಸಾಧಿಸಲು ಸಾಧ್ಯವಿದೆ. 2022ರ ಚಳಿಗಾಲದ ಅಧಿವೇಶನದೊಳಗೆ ಸಂಸತ್ತಿನ ಸಂಪೂರ್ಣ ಕಲಾಪವನ್ನು ಡಿಜಿಟಲೀಕರಣ ಗೊಳಿಸಲು ಇದೊಂದು ಸುವರ್ಣಾವಕಾಶ. ಏಕೆಂದರೆ, ಹೊಸ ಸಂಸತ್ ಭವನದಲ್ಲಿ ಎಲ್ಲಾ ಡಿಜಿಟಲ್ ಮೂಲಸೌಕರ್ಯ ಗಳಿರುತ್ತವೆ. ಸಂಸತ್ತಿನ ಎರಡು ಸದನಗಳಿಗಾಗಿ ‘ಇ-ಸಂಸದ್’ ಹಾಗೂ ಎಲ್ಲಾ ರಾಜ್ಯಗಳ ವಿಧಾನಮಂಡಲಕ್ಕಾಗಿ ‘ಇ-ಧಾನ್’ ಎಂಬ
ಎರಡು ಯೋಜನೆಗಳನ್ನು ಈಗಾಗಲೇ ಕೇಂದ್ರ ಸರಕಾರ ಆರಂಭಿಸಿದೆ.

ಹಾಗೆಯೇ ಅನಗತ್ಯವಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪರಿಪಾಠಗಳನ್ನು ತೊಡೆದುಹಾಕಿ ತೀರಾ ಅಗತ್ಯದ್ದಾಗ ಅಥವಾ ಅರ್ಥಪೂರ್ಣ ಸಂದರ್ಭದಲ್ಲಿ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ನಿಯಮ ಜಾರಿಗೊಳಿಸುವ ಬಗ್ಗೆಯೂ ರಚನಾತ್ಮಕ ಚರ್ಚೆ ನಡೆಯಬೇಕಿದೆ.

ಜರ್ಮನಿಯಲ್ಲಿರುವಂತೆ ನಮ್ಮಲ್ಲೂ ಸ್ಥಿರ ಸರಕಾರ ಹಾಗೂ ಉತ್ತಮ ಆಡಳಿತವನ್ನು ಖಾತ್ರಿಗೊಳಿಸುವ ರೀತಿಯಲ್ಲಿ ಅವಿಶ್ವಾಸ ಅಥವಾ ವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು, ಶಾಸನಸಭೆಗಳ ನಿಯಮಗಳಲ್ಲಿ ಸೇರ್ಪಡೆ ಗೊಳಿಸಲು ಸಾಧ್ಯವಿದೆ. ಜರ್ಮನಿಯ ಸಂವಿಧಾನದ 67ನೇ ಪರಿಚ್ಛೇದದ ಪ್ರಕಾರ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕಾದರೆ ಪರ್ಯಾಯ ವ್ಯವಸ್ಥೆಯನ್ನೂ ಸೂಚಿಸಬೇಕಾಗುತ್ತದೆ.

ಈ ನಿಯಮದ ಪ್ರಕಾರ, ಒಂದು ಸರಕಾರದ ಬಹುಮತಕ್ಕೆ ಪರೀಕ್ಷೆ ಎದುರಾದಾಗ – ಅಂದರೆ ಅವಿಶ್ವಾಸ ಗೊತ್ತುವಳಿ ಮಂಡಿಸು ವಾಗ – ಅವಿಶ್ವಾಸ ಗೊತ್ತುವಳಿ ಮಂಡಿಸುವವರು ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಸದನಕ್ಕೆ ತಿಳಿಸಿಕೊಡಬೇಕಾಗುತ್ತದೆ. ಇದರೊಂದಿಗೆ ನಮ್ಮ ದೇಶದ ಕಟ್ಟಕಡೆಯ ವ್ಯಕ್ತಿಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ಅಡಿ ಉತ್ತಮ ಸೇವೆ ಸಲ್ಲಿಸುವ ವಾಗ್ದಾನವನ್ನು ಇನ್ನೊಮ್ಮೆ ನೀಡೋಣ.