ಜೈಪುರ: ಸೂರತ್‌ನ ಅಕೌಂಟೆಂಟ್ ಮಯೂರ್ ತಾರಾಪಾರ ಅವರ ಕಾಣೆಯಾದ ಬೆರಳುಗಳ ರಹಸ್ಯವನ್ನು ಗುಜರಾತ್ ಪೊಲೀಸರು ಭೇದಿಸಿದ್ದಾರೆ. ಈ ವ್ಯಕ್ತಿ ಆರಂಭದಲ್ಲಿ ಮೂರ್ಛೆ ಹೋಗಿದ್ದು, ನಂತರ ತನ್ನ ಬೆರಳುಗಳು ಕಾಣೆಯಾಗಿವೆ ಎಂದು ಹೇಳಿಕೊಂಡಿದ್ದಾನೆ ಮತ್ತು ತನಿಖೆ ವೇಳೆ ತನ್ನ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಬಯಸದ ಕಾರಣ ಉದ್ದೇಶಪೂರ್ವಕವಾಗಿ ಅವುಗಳನ್ನು ಕತ್ತರಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ.ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಮಾಹಿತಿಯ ಪ್ರಕಾರ, ಮಯೂರ್ ಆ ರಾತ್ರಿ ಸೂರತ್‌ನ ವೇದಾಂತ್ ವೃತ್ತದ ಬಳಿ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ತಲೆತಿರುಗಿದಂತಾಗಿ ಮೂರ್ಛೆ ಹೋದರಂತೆ. ಪ್ರಜ್ಞೆ ಮರಳಿದಾಗ, ಅವರ ಎಡಗೈಯ ನಾಲ್ಕು ಬೆರಳುಗಳು ಕಳೆದುಹೋಗಿರುವುದನ್ನು ಗಮನಿಸಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾರಾಪಾರಾ ಸ್ನೇಹಿತನಿಗೆ ವಿಷಯ ತಿಳಿಸಿದ್ದು, ಸ್ನೇಹಿತ ಇವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಕತ್ತರಿಸಿದ ಬೆರಳುಗಳಿಗೆ ಚಿಕಿತ್ಸೆ ನೀಡಿದ್ದಾರೆ ಮತ್ತು ಅದೇ ದಿನ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಪೊಲೀಸ್ ತನಿಖೆಯಲ್ಲಿ, ಅವರು ವಿವರಿಸಿದ ಸ್ಥಳದಲ್ಲಿ ಯಾವುದೇ ರಕ್ತದ ಕುರುಹುಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ, ಆದ್ದರಿಂದ ಅವರು ನೀಡಿದ ಮಾಹಿತಿ ಪೊಲೀಸರಿಗೆ ಅನುಮಾನ ಹುಟ್ಟಿಸಿತು.
ಇದಾದ ಕೆಲವೇ ದಿನಗಳಲ್ಲಿ ಸೂರತ್ ಕ್ರೈಂ ಬ್ರಾಂಚ್ ಸತ್ಯವನ್ನು ಬಯಲಿಗೆಳೆದಿದೆ. ಉಪ ಪೊಲೀಸ್ ಆಯುಕ್ತ ಭವೇಶ್ ರೋಜಿಯಾ ಮಾತನಾಡಿ, “ಮಯೂರ್ ತಾರಾಪಾರಾ ಬೆರಳುಗಳನ್ನು ತಾನೇ ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅವನು ಚಾಕುವನ್ನು ಖರೀದಿಸಿ ಯೋಜಿತ ರೀತಿಯಲ್ಲಿ ಕೃತ್ಯವೆಸಗಿದ್ದಾನೆ”. ಎಂದು ಅವರು ಹೇಳಿದ್ದಾರೆ.
ತಾರಾಪಾರಾ ಕೆಲಸದಲ್ಲಿ ತೀವ್ರ ಒತ್ತಡದಲ್ಲಿದ್ದರು ಎಂದು ರೋಜಿಯಾ ತಿಳಿಸಿದ್ದಾರೆ. ಅವರು ಸಂಬಂಧಿಕರ ಒಡೆತನದ ಆಭರಣ ಶೋರೂಂನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರಿಗೆ ಇಷ್ಟವಿಲ್ಲದಿದ್ದರೂ ಕೆಲಸದಲ್ಲಿ ಮುಂದುವರಿಯಲು ಅವರ ತಂದೆ ಒತ್ತಾಯಿಸಿದ್ದರು ಎಂದು ವರದಿಯಾಗಿದೆ. ತಾರಾಪಾರಾ ಅವರ ಮೊಬೈಲ್ ಲೊಕೇಶನ್ ಡೇಟಾದ ಮಾಹಿತಿ ಮತ್ತು ವಿಧಿವಿಜ್ಞಾನ ತಜ್ಞರ ಸಹಾಯವನ್ನು ಪಡೆದುಕೊಂಡು ತನಿಖೆ ನಡೆಸಲಾಗಿದೆ. ತಾರಾಪಾರಾ ಮೊದಲು ಮೂರು ಬೆರಳುಗಳನ್ನು ಕತ್ತರಿಸಿ ನಂತರ ನಾಲ್ಕನೇ ಬೆರಳನ್ನು ಕತ್ತರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:ಒಂದು ರಾತ್ರಿಗೆ ಬರೋಬ್ಬರಿ 10 ಸಾವಿರ ರೂ.! ಸೇನೆಯ ಈ ಬಾಂಬ್ ನಿಷ್ಕ್ರಿಯ ಟ್ರಕ್‌ನಲ್ಲಿ ನೀವೂ ತಂಗಬಹುದು- ಏನಿದರ ವಿಶೇಷತೆ?
ಮಾಧ್ಯಮದವರು ಪ್ರಶ್ನಿಸಿದಾಗ, ತಾರಾಪಾರಾ ಪ್ರತಿಕ್ರಿಯಿಸಲು ನಿರಾಕರಿಸಿದ್ದು, “ನಾನು ಅದನ್ನು ಏಕೆ ಮಾಡಿದ್ದೇನೆಂದು ನನಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.