Sunday, 15th December 2024

Pushpa 2: ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಪುಷ್ಪ 2; 1500 ಕೋಟಿ ರೂ. ಗಳಿಕೆಯತ್ತ ದಾಪುಗಾಲು

Pushpa 2

ಹೈದರಾಬಾದ್‌ : ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಪುಷ್ಪ 2 (Pushpa 2) ದಾಖಲೆಗಳನ್ನು ನಿರ್ಮಿಸುತ್ತಿದೆ. ಅಲ್ಲು ಅರ್ಜುನ್‌ (Allu Arjun) ನಟನೆಯ ಈ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸ್‌ ಆಫೀಸ್‌ ಲೂಟಿ ಮಾಡುತ್ತಿರುವ ಸಿನಿಮಾ  1500 ಕೋಟಿ ರೂ ಕ್ಲಬ್‌ ಸೇರುವತ್ತ ದಾಪುಗಾಲಿಡುತ್ತಿದೆ. ಈ ಮೂಲಕ ಭಾರತದ ಸಿನಿಮಾವೊಂದು 2024ರಲ್ಲಿ ದಾಖಲೆ ಮಟ್ಟದ ಯಶಸ್ಸು ಪಡೆಯುವ ಸೂಚನೆ ದೊರಕಿದೆ(Box Office Collection).

ಸುಕುಮಾರ್‌ ನಿರ್ದೇಶನದ ಪುಷ್ಪ 2  ಎರಡನೇ ಶನಿವಾರದಂದು ಅಂದಾಜು 46–48 ರೂ. ಕೋಟಿ ಗಳಿಸಿದೆ. ಬಿಡುಗಡೆಯಾದ ಹತ್ತು ದಿನಗಳಲ್ಲಿ ಒಟ್ಟು 509 ಕೋಟಿ ರೂ. ಗಳನ್ನು ಬಾಚಿಕೊಂಡಿದೆ. ಬಿಡುಗಡೆಯಾದ ಮೊದಲ ದಿನವೇ 72 ಕೋಟಿ ರೂ ಗಳಿಕೆ ಮಾಡಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಿತ್ತು. ಇದೀಗ  2024ರಲ್ಲಿ ಭಾರತದ ಅತ್ಯಧಿಕ ಗ್ರೋಸಿಂಗ್‌ ಸಿನಿಮಾ ಎಂಬ ಹಿರಿಮೆಗೆ ಪಾತ್ರವಾಗುವ ಸೂಚನೆ ಇದೆ. ಪುಷ್ಪ 2 ಸಿನಿಮಾದ ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ 1500 ಕೋಟಿ ರೂಪಾಯಿ ಸನಿಹದಲ್ಲಿದೆ.

‘ಬಾಹುಬಲಿ 2: ದಿ ಕನ್‌ಕ್ಲೂಷನ್’ (1,788.06 ಕೋಟಿ ರೂ.), ‘ಆರ್‌ಆರ್‌ಆರ್’ (1,230 ಕೋಟಿ ರೂ.), ‘ಕೆಜಿಎಫ್: ಅಧ್ಯಾಯ 2’ (1,215 ಕೋಟಿ ರೂ) ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಪಡೆದಿತ್ತು. ಇದೀಗ ಪುಷ್ಪ 2 ಕೂಡ ಇದೇ ಹಾದಿಯಲ್ಲಿದೆ. ಜವಾನ್‌ ಸಿನಿಮಾ ಒಟ್ಟು 1,160 ಕೋಟಿ ರೂಪಾಯಿ ಗಳಿಸಿದ್ದರೆ. ದಂಗಲ್‌ ಸಿನಿಮಾವು 2,070.3 ಕೋಟಿ ರೂಪಾಯಿ ಗಳಿಸಿತ್ತು. ದಂಗಲ್‌ ಭಾರತದ ಸಾರ್ವಕಾಲಿಕ ಅತ್ಯಧಿಕ ಗಳಿಕೆಯ ಸಿನಿಮಾವಾಗಿದೆ. ಪುಷ್ಪ 2 ಸಿನಿಮಾದ ಗಳಿಕೆಯು ಈ ಹಿಂದಿನ ಹಲವು ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಬಹುದೇ ಎಂದು ಕಾದು ನೋಡಬೇಕಿದೆ.

2021ರಲ್ಲಿ ಪುಷ್ಪ ಸಿನಿಮಾದ ಮೊದಲ ಭಾಗ 350 ಕೋಟಿ ರೂ. ಗಳಿಸಿತ್ತು. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಹಾದ್‌ ಫಾಸಿಲ್‌, ರಾವ್ ರಮೇಶ್, ಜಗಪತಿ ಬಾಬು, ಸುನಿಲ್ ಮತ್ತು ಅನಸೂಯಾ ಸೇರಿದಂತೆ ಕಲಾವಿದರ ದೊಡ್ಡ ಬಳಗವೇ ಚಿತ್ರದಲ್ಲಿ ನಟಿಸಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಥೀಯೇಟರ್‌ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಸಂಬಂಧಿಸಿದಂತೆ ಹೈದರಾಬಾದ್‌ ಪೊಲೀಸರು ಡಿಸೆಂಬರ್ 13ರಂದು ಅಲ್ಲು ಅರ್ಜುನ್‌ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದರು. ಹೈದರಾಬಾದ್ ನ್ಯಾಯಾಲಯವು ಅಲ್ಲು ಅರ್ಜುನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಆದೇಶಿಸಿತ್ತು. ನಂತರ ಹೈಕೋರ್ಟ್‌ ಆದೇಶದ ನಂತರ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ನೆಚ್ಚಿನ ನಟ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಅಲ್ಲು ಅರ್ಜುನ್‌ ಕುಟುಂಸ್ಥರು ಆರತಿ ಬೆಳಗಿ ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌