Sunday, 15th December 2024

Danish Chikna : ದಾವೂದ್‌ ಇಬ್ರಾಹಿಂನ ಡ್ರಗ್ಸ್‌ ಫ್ಯಾಕ್ಟರಿ ಮ್ಯಾನೇಜರ್‌ ಡಾನಿಶ್ ಚಿಕ್ನಾ ಅರೆಸ್ಟ್‌

Danish Chikna

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ(Dawood Ibrahim) ಪ್ರಮುಖ ಸಹಚರ ಡ್ಯಾನಿಶ್ ಚಿಕ್ನಾ (Danish Chikna) ಅಲಿಯಾಸ್‌ ಡ್ಯಾನಿಶ್ ಮರ್ಚೆಂಟ್‌ನನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮುಂಬೈ ಪೊಲೀಸರು(Mumbai Police) ಬಂಧಿಸಿದ್ದಾರೆ. ಈತ ಡೋಂಗ್ರಿ ಪ್ರದೇಶದಲ್ಲಿ ದಾವೂದ್‌ ಇಬ್ರಾಹಿಂಗೆ ಸಂಬಂಧಿಸಿದ ಮಾದಕ ದ್ರವ್ಯ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಆತನ ಜೊತೆಯಲ್ಲಿದ್ದ ಸಹಚರ ಕಾದರ್ ಗುಲಾಮ್ ಶೇಖ್‌ನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈ ಪೊಲೀಸ್ ಮೂಲಗಳ ಪ್ರಕಾರ, ಈತ ಹಲವು ಪ್ರಕರಣದಲ್ಲಿ ಬೇಕಾಗಿರುವ ಆರೋಪಿಯಾಗಿದ್ದ. ಕಳೆದ ತಿಂಗಳು ಮೊಹಮ್ಮದ್ ಆಶಿಕುರ್ ಸಾಹಿದುರ್ ರೆಹಮಾನ್ ಮತ್ತು ರೆಹಾನ್ ಶಕೀಲ್ ಅನ್ಸಾರಿ ಎಂಬ ಇಬ್ಬರು ಡ್ರಗ್ಸ್‌ ವ್ಯಾಪಾರಿಗಳ ಬಂಧನವಾಗಿತ್ತು. ನಂತರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ನವೆಂಬರ್ 8 ರಂದು 144 ಗ್ರಾಂ ಡ್ರಗ್ಸ್‌ನೊಂದಿಗೆ ಮೆರೈನ್ ಲೈನ್ಸ್ ಸ್ಟೇಷನ್ ಬಳಿ ರೆಹಮಾನ್ ಸಿಕ್ಕಿಬಿದ್ದಿದ್ದ. ನಂತರ ವಿಚಾರಣೆ ನಡೆಸಿದಾಗ ಡೋಂಗ್ರಿಯಲ್ಲಿ ಅನ್ಸಾರಿಯಿಂದ ಡ್ರಗ್ಸ್ ಖರೀದಿಸಲಾಗಿದೆ ಎಂದು ರೆಹಮಾನ್ ಬಹಿರಂಗಪಡಿಸಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅನ್ಸಾರಿಯನ್ನು ಬಂಧಿಸಿ ಹೆಚ್ಚುವರಿ 55 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದ. ಆತ ಮಾದಕ ವಸ್ತುಗಳನ್ನು ಡ್ಯಾನಿಶ್ ಮರ್ಚೆಂಟ್ ಮತ್ತು ಇನ್ನೊಬ್ಬ ಸಹವರ್ತಿ ಖಾದಿರ್ ಫಾಂಟಾ ಅವರಿಂದ ಡ್ರಗ್ಸ್ ಖರೀದಿಸಿದ್ದ ಎಂದು ತಿಳಿದು ಬಂದಿದೆ.

ಪೊಲೀಸರು ಹಲವು ವಾರಗಳಿಂದ ಡ್ಯಾನಿಶ್‌ಗಾಗಿ ಹುಡುಕಾಟ ನಡೆಸಿದ್ದರು. ನಿಖರ ಮಾಹಿತಿ ಮೇರೆಗೆ ಪೊಲೀಸರು ಡಿಸೆಂಬರ್ 13 ರಂದು ಡೋಂಗ್ರಿ ಪ್ರದೇಶದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಆತನ ಜೊತೆ ಸಹಚರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆಯಲ್ಲಿ ಇಬ್ಬರೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

2019 ರಲ್ಲಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಡೋಂಗ್ರಿಯಲ್ಲಿರುವ ದಾವೂದ್‌ನ ಡ್ರಗ್ ಫ್ಯಾಕ್ಟರಿಯನ್ನು ಕೆಡವಿ, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿತು. ಆ ಸಮಯದಲ್ಲಿ, ಡ್ಯಾನಿಶ್‌ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು ಮತ್ತು ಇತ್ತೀಚಿನ ಬಿಡುಗಡೆಯವರೆಗೆ ಆತ ಜೈಲಿನಲ್ಲಿಯೇ ಇದ್ದ. ಇದೀಗ ಮತ್ತೆ ಬಂಧಿಸಲಾಗಿದೆ.

ಈ ಸುದ್ದಿಯನ್ನೂ ಓದಿ : Chennai Super Kings: ಸಿಎಸ್‌ಕೆಯ ಫಿಕ್ಸಿಂಗ್‌ ಕರಾಳತೆ ಬಿಚ್ಚಿಟ್ಟ ಮಾಜಿ ಐಪಿಎಲ್‌ ಅಧ್ಯಕ್ಷ