Saturday, 23rd November 2024

ರೈತ ಗೋವಿನ ಸಂಬಂಧ, ಶ್ರೀರಾಮ ಹನುಮರ ಅನುಬಂಧ

ಹಂಪಿ ಏಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

ನಮ್ಮ ದೇಶದ ದುರಾದೃಷ್ಟವೆಂದರೆ ಸಂವಿಧಾನ, ಕಾಯಿದೆ, ಕಾನೂನುಗಳು ಪ್ರಜೆಗಳಿಗಾಗಿಯೇ ರಚಿತವಾಗುತ್ತದೆ. ಆದರೆ ಅದು
ಶ್ರೀಸಾಮಾನ್ಯನಿಗೆ ತಲುಪುವುದೇ ಇಲ್ಲ. ರಾಮಾಯಣ – ಮಹಾಭಾರತ – ಭಗವದ್ಗೀತೆಯನ್ನು ಆರಾಧಿಸುತ್ತೇವೆ, ಪೂಜಿಸುತ್ತೇವೆ.

ಆದರೆ ಪಾಲಿಸುವುದಿಲ್ಲ. ಸಂವಿಧಾನವೇ ಪ್ರಜಾಪ್ರಭುತ್ವದ ಗ್ರಂಥವೆಂದು ಹೆಮ್ಮೆ ಪಡುತ್ತೇವೆ. ಆದರೆ ಅದರಲ್ಲಿನ ನೀತಿ ನಿಯಮ ಗಳನ್ನು ನಮ್ಮ ರಾಜಕಾರಣಿಗಳು ಪ್ರಜೆಗಳಿಗೆ ತಿಳಿಸುವ ಪ್ರಯತ್ನವೇ ಮಾಡುವುದಿಲ್ಲ. ಅಸಲಿಗೆ ಅವರಿಗೆ ಅದರ ಮೊದಲ ಪುಟ ದಲ್ಲೇನಿದೆ ಎಂಬುದೇ ಗೊತ್ತಿರುವುದಿಲ್ಲ.

ಹಾಗೆಯೇ ಸರಕಾರಗಳು ಕಾಯಿದೆಗಳನ್ನು ತಂದಾಗ ವಿದ್ಯಾವಂತರು ಅದರ ಸಾಧಕಬಾಧಕವೇನು, ಅದರಲ್ಲಿನ ಸಿದ್ಧಾಂತ ವೇನೆಂದು ತಿಳಿದುಕೊಳ್ಳುವ ಗೋಜಿಗೆ ಹೋಗುವು ದಿಲ್ಲ. ಈಗ ನೋಡಿ ಕೇಂದ್ರ ಸರಕಾರ ದೇಶದ ಕೃಷಿ ವಿಚಾರವಾಗಿ ಮೂರು ಮಸೂದೆಗಳನ್ನು ಜಾರಿಗೆ ತಂದಿದೆ. ಆದರೆ ಅದರ ಒಳಹೂರಣವೇನೆಂಬುದು ಬಹುತೇಕರಿಗೆ ತಿಳಿದಿಲ್ಲ. ಆದರೆ ಇಂಥ ವಿಚಾರ ಗಳನ್ನು ಹಿಡಿದುಕೊಂಡು ಸಮಯಸಾಧಕ ರಾಜಕಾರಣಿಗಳು ಮಾತ್ರ ತಮ್ಮ ಪಕ್ಷ ಮತ್ತು ತಮ್ಮ ಹಿತಾಸಕ್ತಿಗೆ ಹೊಂದಿಕೊಳ್ಳು ವಂಥ ಅಂಶಗಳನ್ನು ಮಾತ್ರ ಅಪಪ್ರಚಾರಕ್ಕೆ ತಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಚುರುಕಾಗಿದ್ದಾರೆ.

ಇನ್ನು ನಮ್ಮ ದೇಶದ ನಾಲ್ಕನೇ ಸಾಕ್ಷಿಪ್ರಜ್ಞೆ ಎನಿಸಿರುವ ಪತ್ರಿಕೋದ್ಯಮವೂ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ವನ್ನೂ ಮಾಡುತ್ತಿಲ್ಲ. ಸೆಲೆಬ್ರಿಟಿಗಳ ನಿಶ್ಚಿತಾರ್ಥ, ಮದುವೆ, ಸೀಮಂತ, ನಾಮಕರಣ ಹಾಗೂ ಅಪರಾಧ ವರದಿಗಳನ್ನು ದಿನಪೂರ್ತಿ ಬಿತ್ತರಿಸುವ ಸುದ್ದಿವಾಹಿನಿಗಳು ಅಷ್ಟೇ ಹೊಣೆಗಾರಿಕೆಯಿಂದ ರೈತರ ಮಸೂದೆಗಳಲ್ಲಿನ ವಿಚಾರಗಳನ್ನು ‘ನಾವು ನಿಮಗೆ ಹೇಳ್ತೆವೆ ನಾವು ನಿಮಗೆ ತೋರಿಸ್ತೇವೆ’ ಎಂದು ಮಂಥನ ಮಾಡಿ ಸಾಮಾನ್ಯ ರೈತನಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ
ಹೇಳಬಹು ದಲ್ಲವೇ?.

ಹಾಗೆಯೇ ಪತ್ರಿಕೆಗಳೂ ಒಂದು ಪುಟವನ್ನು ಇದಕ್ಕಾಗಿಯೇ ಸೀಮಿತಗೊಳಿಸಿ ವಿಷಯವನ್ನು ಸರಳ ಗೊಳಿಸಬಹುದಲ್ಲವೇ?. ಈಗ
ನೋಡಿ ರೈತರು ತಮಗಾಗಿ ಕೇಂದ್ರ ಸರಕಾರ ತಂದಿರುವ ನೀತಿಗಳ ಬಗ್ಗೆ ಕೆಲವು ರಾಜಕಾರಣಿ, ದಲ್ಲಾಳಿ, ಮಧ್ಯವರ್ತಿಗಳಿಂದ ಕೇವಲ ಋಣಾತ್ಮಕ ವಿಚಾರಗಳನ್ನಷ್ಟೇ ತಿಳಿದುಕೊಂಡು ಬೀದಿಗಿಳಿದಿರುವುದು ಶೋಚನೀಯ. ರಾಜಕೀಯದ ಅಡ್ಡಕಸುಬಿಗಳು
ದೇಶದ ಭಾಗ್ಯವಿಧಾತ ರೈತನನ್ನು ಬೀದಿಗೆ ತಂದು ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಹಾಳುಮಾಡುವ ಹುನ್ನಾರದಲ್ಲಿರುವುದು ಸುಳ್ಳಲ್ಲ.

ರೈತ ನಮ್ಮ ಪರಂಪರೆಯಲ್ಲಿ ದೈವಸಮಾನ. ಆತ ಹೊಲದಲ್ಲಿದ್ದರೆ ಗರ್ಭಗುಡಿಯಲ್ಲಿ ದೇವರಿದ್ದಂತೆ. ಆದರೆ ಈಗ ಉತ್ಸವ ಮೂರ್ತಿ ಗಳದ್ದೇ ಹೆಚ್ಚು ಆರ್ಭಟ. ರೈತ ಮಣ್ಣಿನಲ್ಲಿ ಕಾಲಿಡದೆ ಕುಳಿತರೆ ಪ್ರಜೆಗಳು ಹೊಟ್ಟೆಗೆ ಮಣ್ಣು ತಿನ್ನಬೇಕಾಗುತ್ತದೆ. ದೇಶದ ರೈತ ಮತ್ತು ಮನೆಯ ಹೆಣ್ಣು ಎಂದಿಗೂ ಬೀದಿಗೆ ಬರಬಾರದು. ಅದಕ್ಕಾಗಿಯೇ ಅನೇಕ ಮೈಗಳ್ಳರು ಸಮಯಸಾಧಕರು ಅವಕಾಶ ವಾದಿಗಳಿದ್ದಾರೆ. ರೈತನಿದ್ದಲ್ಲಿಗೇ ಹೋಗಿ ಆತನ ಬೇಡಿಕೆಯನ್ನು ಪೂರೈಸುವ ಕೆಲಸ ಆಗಬೇಕಿದೆ.

ರೈತನಿಗೆ ಹೆಗಲು ನೀಡುವ ಗೋವು ಮತ್ತು ದೇಶವನ್ನು ಕಾಯುವ ಯೋಧ ಈ ಮೂವರೂ ನಮ್ಮ ದೇಶದ ಸುಪ್ರಭಾತ. ಈ ಮೂವರೂ ನೆಮ್ಮದಿಯಿಂದ ಆತ್ಮವಿಶ್ವಾಸದಿಂದ ಬದುಕಿ ಬಾಳಿದರೇ ದೇಶಕ್ಕೆ ಶ್ರೇಯಸ್ಸು. ಆದರೆ ಇಂದು ದರಿದ್ರ ರಾಜಕಾರಣ
ದಿಂದಾಗಿ ಎಲ್ಲದರ ಮೌಲ್ಯಗಳು ಹಾಳಾಗುತ್ತಿದೆ. ಇಂತಿನ ತಲೆಮಾರಿ ಗಂತೂ ವ್ಯವಸಾಯದ ಕಲ್ಪನೆಯೇ ಇಲ್ಲ. ಮೊದಲಾಗಿ ರೈತ – ವ್ಯವಸಾಯ – ಕೃಷಿ ಈ ಕುರಿತು ಪ್ರಾಥಮಿಕ ತರಗತಿ ಯಿಂದಲೇ ವಿದ್ಯಾರ್ಥಿಗಳಿಗೆ ಪಾಠ ಹೇಳ ಬೇಕಾದ ಅವಶ್ಯಕತೆಯಿದೆ.

ನಮ್ಮ ದೇಶದ ರೈತನ ಕುರಿತು ಪುಟ್ಟ ಮಕ್ಕಳಲ್ಲಿ ಗೌರವ ಪೂಜ್ಯನೀಯ ಭಾವನೆಗಳನ್ನು ಬಿತ್ತಬೇಕಿದೆ. ದೇಶದ ಆತ್ಮದಂತಿರುವ ರೈತರು ನೆರೆ, ಬರ, ಪ್ರವಾಹ, ದಲ್ಲಾಳಿಗಳು ಮಧ್ಯವರ್ತಿಗಳು ವಂಚಕರ ವಂಚನೆ, ಸಾಲಬಾಧೆ, ಇವುಗಳಿಂದ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರನ್ನು ಕೇವಲ ಮತದಾರನಾಗಿ ಕಾಣುತ್ತಾ ಬಂದ ರಾಜಕೀಯ
ಪಕ್ಷಗಳು ಮೂಗಿಗೆ ಆಗಾಗ ತುಪ್ಪ ಸವರುತ್ತಾ ಬರುತ್ತಿವೆ ಹೊರತು, ನಿರ್ಣಾಯಕ ನೀತಿ ನಿರ್ಣಯಗಳನ್ನೇ ರೂಪಿಸದೆ ‘ನೀನು ನೀನೆ ಇಲ್ಲಿ ನಾನು ನಾನೇ’ ಎಂಬಂತೆ ಅವರನ್ನು ಬಳಸಿಕೊಳ್ಳುತ್ತಾ ಬಂದಿದೆ.

ಪಂಚಭೂತಗಳಂತೆ ರೈತನ ಅಸ್ತಿತ್ವವಿದ್ದರೆ ಮಾತ್ರ ಜಗತ್ತಿನಲ್ಲಿ ಎಲ್ಲವೂ ಉಳಿಯಲು ಸಾಧ್ಯ. ಅದಕ್ಕಾಗಿಯೇ ಕೇಂದ್ರ ಸರಕಾರವು ರೈತರ ಭವಿಷ್ಯ ಮತ್ತು ದೇಶದ ಕೃಷಿ ವ್ಯವಸ್ಥೆಯ ಭದ್ರತೆಯ ದೃಷ್ಟಿಯಿಂದ ದಿಟ್ಟ ನಿರ್ಧಾರ ಕೈಗೊಳ್ಳುವ ಪ್ರಯತ್ನದಲ್ಲಿದೆ. ಆದರೆ
ಅದರ ಅಂಶ ಗಳೇನೆಂಬುದನ್ನು ಸಮಗ್ರವಾಗಿ ಪ್ರತಿಯೊಬ್ಬ ರೈತರ ತಿಳಿವಳಿಕೆಗೆ ತಂದು ಆ ನಂತರ ಏನು ಮಾಡಬೇಕೆಂಬುದನ್ನು ಅವರ ಸಮ್ಮುಖದಲ್ಲೇ ತೀರ್ಮಾನಿಸಬೇಕಿದೆ. ಆದರೆ ಅಂಥ ಪ್ರಯತ್ನಗಳೇ ಆಗದೆ ಮುಗ್ಧ ರೈತರನ್ನು ರಾಜಕೀಯದ ಕುತಂತ್ರಗಳ
ಭಾಗವಾಗಿ ಉಪಯೋಗಿಸಿ ಕೊಂಡು ಅವರ ನೆಮ್ಮದಿ ಹಾಳುಮಾಡುತ್ತಿರುವುದು ಸ್ಪಷ್ಟ ವಾಗುತ್ತಿದೆ.

ತಮ್ಮ ಪಕ್ಷದ ನಾಯಕ ನಾಯಕಿಯರ ಅಯೋಗ್ಯತನ ಅವಿವೇಕ ಅನೈತಿಕತೆಗಳನ್ನು ಪ್ರಶ್ನಿಸ ಲಾಗದವರೆಲ್ಲರೂ ಕೃಷಿ ಮಸೂದೆ ಯನ್ನು ದಾರಿತಪ್ಪಿಸಿ ರೈತರನ್ನು ಕೆರಳಿಸುತ್ತಿರುವುದು ಕಂಡುಬರುತ್ತಿದೆ. ಹೆತ್ತ ತಾಯಿಯ ನೋವು, ರೈತರ ಮತ್ತು ಗೋಮಾತೆಯ ನೋವು ಮನೆಗೆ ಹಾಗೂ ದೇಶಕ್ಕೆ ಶಾಪಕಾರಕವಾದದ್ದು. ಇದರ ಸ್ಪಷ್ಟ ಚಿಂತನೆಯುಳ್ಳ ಕೇಂದ್ರ ಸರಕಾರ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಗಳನ್ನು ತರುತ್ತದೆಯೇ ಹೊರತು ಎಲ್ಲಾ ಬಿಟ್ಟು ಅನ್ನದಾತನ ಬದುಕಿಗೆ ಬೆಂಕಿಯಿಡುತ್ತದೆ ಎಂಬುದು ಅಪ್ರಸ್ತುತ.

ಏಕೆಂದರೆ ನರೇಂದ್ರ ಮೋದಿಯವರ ಸರಕಾರದ ದಿಕ್ಕು ರಾಷ್ಟ್ರದ ಏಳಿಗೆ ಮತ್ತು ವಿಷಯಾಧಾರಿತವೇ ಹೊರತು ವ್ಯಕ್ತಿಯಾಧಾರಿತ ವಲ್ಲ ಎಂಬುದು ಇಲ್ಲಿಯವರೆಗಿನ ಅವರ ಆಡಳಿತವೇ ನಿರೂಪಿಸಿದೆ. ಈಗ ಆಗಬೇಕಾಗಿರುವುದೇನೆಂದರೆ ಹಳ್ಳಿಗಳಲ್ಲಿನ ಸ್ಥಳೀಯ ಪ್ರಜ್ಞಾವಂತರು ರೈತರನ್ನು ಸಂಪರ್ಕಿಸಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಜತೆಗೆ ನಮ್ಮ ನ್ಯಾಯಾಲಯಗಳೂ ಮಧ್ಯ ಪ್ರವೇಶಿಸಿ ಕೃಷಿ ಮಸೂದೆಯಲ್ಲಿನ ಒಳಿತು ಕೆಡಕನ್ನು ಪರಾಮರ್ಶಿಸಿ ರೈತರಲ್ಲಿ ವಿಶ್ವಾಸ ಮೂಡಿಸಬೇಕಿದೆ.

ಇಲ್ಲದಿದ್ದರೆ ದೆಹಲಿಯಲ್ಲಿನ ಕಿಚ್ಚನ್ನು ದೇಶದೆಲ್ಲೆಡೆ ಹತ್ತಿಸಿ ಚಳಿಕಾಯುವ ನೀಚರು ಹೆಚ್ಚಾಗುತ್ತಾರೆ. ಸಮಾಜದಲ್ಲಿ ಯಾವುದೇ ವರ್ಗದಲ್ಲಿ ನಿರ್ಗತಿಕರು ಅಸಹಾಯಕರಿರಬಹುದು. ಆದರೆ ಅದರ ನಾಯಕರೆಲ್ಲರೂ ಸ್ಥಿತಿವಂತರು ಐಷರಾಮಿಗಳು ಎಂಬುದು ಸುಳ್ಳಲ್ಲ. ಒಂದಂತೂ ಸ್ಪಷ್ಟವೆಂದರೆ ಪ್ರಜೆಗಳು ಮೊದಲಿನಂತಿಲ್ಲ. ಇಂದು ಸಾಮಾಜಿಕ ಜಾಲತಾಣಗಳು ತೀಕ್ಷ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ.

ಒಬ್ಬೊಬ್ಬರ ಯೋಗ್ಯತೆಯನ್ನು ಹೊರಗೆಡವುತ್ತಿದೆ. ಅಸಲಿ ರೈತರಾರು ರೈತ ನಾಯಕರಾರು ಹೊಲದಲ್ಲಿಹ ರೈತನಾರು ಪ್ರತಿಭಟಿಸು ವವರಾರು ಪ್ರಚೋದಿಸುವವರಾರು ಎಂಬುದೆಲ್ಲವನ್ನು ಗಮನಿಸುತ್ತಿದ್ದಾರೆ. ಇನ್ನು ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯಿದೆ
ದಿಢೀರ್ ಅಂಗೀಕಾರವಾಗಿದೆ ನಮ್ಮ ಗಮನಕ್ಕೇ ತಂದಿಲ್ಲ, ಚರ್ಚೆಗಳಾಗಿಲ್ಲವೆಂದು ಪ್ರತಿಪಕ್ಷದವರು ಕೂಗಾಡು ತ್ತಿದ್ದಾರೆ. ಆದರೆ ಅಽವೇಶನ ಕೇವಲ ನಾಲ್ಕು ದಿನಕ್ಕೇ ಖಾಲಿ ಹೊಡೆದಿದೆ. ಇದಕ್ಕೆ ಯಾರು ಕಾರಣ.

ಪ್ರಜಾಪ್ರಭುತ್ವದ ಪವಿತ್ರವಾದ ಅಧಿವೇಶನದಲ್ಲಿ ತಪ್ಪದೇ ಪಾಲ್ಗೊಂಡು ತಾವು ಚುನಾಯಿತರಾಗಿ ಬಂದಿರುವ ಮೂಲಭೂತ ಕರ್ತವ್ಯ ವನ್ನೇ ಕಡೆಗಣಿಸಿ ಗೈರು ಹಾಜರಾದರೆ ಅದಕ್ಕೆ ಯಾರು ಹೊಣೆ?. ಇಷ್ಟಕ್ಕೂ ಗೋಹತ್ಯೆ ನಿಷೇಧವೆಂಬುದು ಕೇವಲ ರಾಜಕೀಯ ಪಕ್ಷಗಳ ವಿರೋಧದ ವಿಷಯ ವಲ್ಲ. ಅದು ಈ ದೇಶದ ಬಹುಸಂಖ್ಯಾತ ಪ್ರಜೆಗಳ ಬೇಡಿಕೆ. ಆದರೆ ಕೇವಲ ತಮ್ಮ ರಾಜಕೀಯದ ಸಿದ್ಧಾಂತದ ಹಿತಾಸಕ್ತಿಗಾಗಿ ವಿರೋಧಿಸುವುದು ತರವಲ್ಲ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅಪ್ರತಿಮ ಮೇದಾವಿ ರಾಹುಲ್‌ಗಾಂಧಿಗೆ ಮತ ನೀಡುವ ರೈತರೆಲ್ಲರೂ ಗೋವನ್ನು ಕಟುಕರಿಗೆ ಮಾರಿಕೊಂಡು ಗೋವಿನ ನರಕಕ್ಕೆ ಪ್ರಚೋದಿಸುವ
ಹೃದಯ ಹೀನರಲ್ಲ.

ಗೋವನ್ನು ಮನೆಯ ಸದಸ್ಯ ನೆಂದೇ ಕಾಣುವ ಅನ್ನದಾತರು ಅದರೊಂದಿಗೆ ಭಾವನಾತ್ಮಕ ಅಂತಃಕರಣ ವನ್ನು ಹೊಂದಿರುತ್ತಾರೆ.
ಆದರೆ ರಾಜಕಾರಣಿಗಳು ಪುತ್ರ ಶೋಕಂ ನಿರಂತರಂ ಎನ್ನುವ ಪರಮ ಶೋಕವನ್ನೂ ಮೀರಿ ರಾಜಕೀಯ ಕ್ರೌರ್ಯವನ್ನು ಮೆರೆಯುತ್ತಾರೆ. ಅಸಲಿಗೆ ಕೃಷಿಯಾಧಾರಿತ ದೇಶದಲ್ಲಿ ರೈತರು ಮತ್ತು ಗೋವಿನ ಸಂಬಂಧವೇ ಪರಮ ಪವಿತ್ರವಾದದ್ದು. ರಾಮಾಯಣದ ರಾಮ ಮತ್ತು ಹನುಮನ ನಡುವೆ ಇರುವ ಪ್ರೀತಿ ಮತ್ತು ನಿಷ್ಠೆಯ ಅನುಬಂಧದ ಪ್ರತೀಕವೇ ರೈತ ಮತ್ತು
ಗೋವಿನ ನಡುವಿನ ಸಂಬಂಧ. ಅದು ಹಾಲು ನೀಡಲಾಗದೆ ಮುದಿಯಾದಾಗ ಅದನ್ನು ಕಸಾಯಿ ಖಾನೆಯ ಕಟುಕರಿಗೆ ಮಾರುವ ದರಿದ್ರ ಮನಸ್ಥಿತಿಯವರಲ್ಲ.

ಅದೇನಿದ್ದರೂ ರಾಜಕೀಯ ಮುಖಂಡರಿಗಿರಬಹುದು. ಮೊನ್ನೆ ಸಿದ್ದರಾಮಯ್ಯ ನವರು ಮುದಿ ಎತ್ತುಗಳನ್ನು ಕೋಣಗಳನ್ನು ಬಿಜೆಪಿ ಕಚೇರಿಯ ಮುಂದೆ ಕಟ್ಟಬೇಕಾ ಎಂದು ಪ್ರಶ್ನಿಸಿದ್ದಾರೆ. ಅಂಥ ಕೋಣ ಎಮ್ಮೆ ಎತ್ತುಗಳನ್ನು ಕಟ್ಟಿಹಾಕಲು ಬೇಕಿರು
ವುದು ವ್ಯವಸ್ಥಿತ ಗೋಶಾಲೆಯೇ ಹೊರತು ಕಚೇರಿಗಳು ಬೀದಿ ಕಂಬಗಳಲ್ಲ. ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಹೆಚ್ಚೆಚ್ಚು ಗೋಶಾಲೆಗಳನ್ನು ಸ್ಥಾಪಿಸಲಿ ಮತ್ತು ಪ್ರೋತ್ಸಾಹಿಸಲಿ. ಅದಕ್ಕೆ ಬೇಕಾದ ಆರ್ಥಿಕ ನಿಧಿಯನ್ನು ಬಜೆಟ್‌ನಲ್ಲಿ ಮೀಸಲಿ ಡಲಿ. ಹೇಗಿದ್ದರೂ ಜಾತಿಮಠಗಳಿಗೆ ಜಾತಿ ಪ್ರಾಧಿಕಾರಗಳಿಗೆ ಉತ್ಸವಗಳಿಗೆ ಹಣವನ್ನು ಮೀಸಲಿಡುವಂತೆ ಗೋಶಾಲೆ ಗಳಿಗೂ ಮೀಸಲಿಡಲಿ. ಏಕೆಂದರೆ ಪ್ರಾಣಿಗಳೇ ಗುಣದಲ್ಲಿ ಮೇಲಾಗಿ ಜಾತಿಧರ್ಮ ಯಾವುದನ್ನೂ ಕೇಳದೆ ಪರಮ ಪಾಪಿಗೂ ತನ್ನ ಹಾಲನ್ನು ನೀಡುತ್ತ ದಲ್ಲವೇ? ಅದೂ ಮನುಷ್ಯ ಬಿಸಾಡುವ ಮುಸುರೆ ಕಸ ಹುಲ್ಲನ್ನು ತಿಂದು.

ಅಂಥ ಹಾಲನ್ನು ಕುಡಿದು ವಿಷವನ್ನು ಕಕ್ಕುವ ಮನುಷ್ಯನಿಂದ ಇದು ಸಾಧ್ಯವೇ?. ಗೋಹತ್ಯೆಯನ್ನು ಪ್ರಚೋದಿಸುವವರಿಗಿಂತ ಗೋವನ್ನು ಉಳಿಸಿ ಎಂಬ ದನಿ ನಮ್ಮ ದೇಶದಲ್ಲಿ ಸಾವಿರಪಟ್ಟು ಹೆಚ್ಚಿದೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ನಿಧಿಯಂತೆ ಗೋಶಾಲಾ ನಿಧಿಯನ್ನು ಸ್ಥಾಪಿಸಿದರೆ ಗೋಭಕ್ತರು ಗೋಸೇವಕರು ಸಹೃದಯಿಗಳು ಅದನ್ನು ನಿರಂತರವಾಗಿ ಉಕ್ಕಿ ಹರಿಸುವು ದರಲ್ಲಿ ಸಂಶಯವೇ ಇಲ್ಲ. ಆಗ ಬಡರೈತನಿಗೆ ತನ್ನ ಒಡನಾಡಿ ಗೋವನ್ನು ಸಾಕಲು ಕಷ್ಟವಾದರೆ ಸಂತಸದಿಂದ ಗೋಶಾಲೆಗೆ ಅರ್ಪಿಸುತ್ತಾನೆ.

ನೆನಪಿರಲಿ ಕೊಲ್ಲುವವನು ಒಬ್ಬರಿಬ್ಬರಿದ್ದರೆ ಕಾಯುವವರು ಕೋಟಿ ಮಂದಿಗಳಿರುತ್ತಾರೆ. ಈಗಾಗಲೇ ಸಾರ್ವಜನಿಕ ಕ್ಷೇತ್ರದಲ್ಲಿ ಗೋಶಾಲೆಗಳನ್ನು ಅನೇಕ ಹೃದಯವಂತರು ವ್ಯಾಪಾರಸ್ಥರು ಶ್ರೀಮಂತರು ಮಠಮಂದಿರಗಳು ಮಮಕಾರದಿಂದ ನಡೆಸಿಕೊಂಡು ಬರುತ್ತಿವೆ. ತಮ್ಮ ದುಡಿಮೆಯ ಒಂದು ಭಾಗವನ್ನು ಗೋಶಾಲೆಗೆಂದೇ ಎತ್ತಿಡುವ ಉದಾರ ಮನೆತನಗಳಿವೆ. ಹೀಗಿರುವಾಗ
ಸರಕಾರ ಗೋಶಾಲೆಗೆಂದೇ ಒಂದು ಪ್ರಾಧಿಕಾರ ರಚಿಸಿ ವಾಣಿಜ್ಯ ಕ್ಷೇತ್ರದಲ್ಲಿ ‘ಸೆಸ್’ ರೂಪದ ಕರವನ್ನು ಗೋಶಾಲೆಗಾಗಿ ಜಾರಿಗೆ ತಂದರೆ ಅದಕ್ಕಿಂತ ಪುಣ್ಯದ ಕೆಲಸ ಬೇರಿಲ್ಲ.

ಏಕೆಂದರೆ ಪ್ರತಿಯೊಬ್ಬ ಮನುಷ್ಯನೂ ಗೋವಿನ ಹಾಲಿನಿಂದ ಉಪಕೃತಿಯಾದವನೇ ಅಲ್ಲವೇ? ಇನ್ನು ಗೋಹತ್ಯೆ ಆಗದಿದ್ದರೆ ಒಂದು ವರ್ಗದ ಜನರ ಆಹಾರದ ಹಕ್ಕನ್ನು ಕಿತ್ತುಕೊಂಡಂತೆ ಎಂದು ವಾದಿಸುವ ಅವಿವೇಕಿಗಳು ಮೊದಲು ಅವರ ಆರೋಗ್ಯದ ಬಗ್ಗೆ ಅರಿವು ಮೂಡಿಸಲಿ. ಇಂದು ಅತಿಬೇಗ ಮಧುಮೇಹ, ರಕ್ತದೊತ್ತಡದ ಕಾಯಿಲೆಗಳು ವಕ್ಕರಿಸುತ್ತಿದೆ. ಅಂಥದರಲ್ಲಿ ಮಾಂಸಾ ಹಾರಕ್ಕಿಂತ ಸಸ್ಯಾಹಾರವೇ ಹೆಚ್ಚು ಸತ್ವಾಂಶ, ಪೌಷ್ಠಿಕಾಂಶವುಳ್ಳ ಆರೋಗ್ಯಕ್ಕೆ ಶ್ರೇಷ್ಠ ಮತ್ತು ಕಡಿಮೆ ಬೆಲೆ ಎಂಬ ಸತ್ಯವನ್ನು ಹೇಳಿ ಅವರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದಿಲ್ಲ. ಇನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ ಕುರಿಮೇಕೆ ಸಾಕಣಿಕೆಗೆ ಆಧುನಿಕ ಸ್ಪರ್ಶ ನೀಡಿ ಅದನ್ನು ಲಾಭದಾಯಕ ಉದ್ಯಮವನ್ನಾಗಿಸಿದ್ದರೆ ಸಮಾಜದಲ್ಲೇ ಅನೇಕ ಉದ್ಯಮಗಳು ಉದ್ಯೋಗ ಗಳು ಸೃಷ್ಟಿಯಾಗುತ್ತಿತ್ತು.

ಜತೆಗೆ ಕುರಿಮೇಕೆ ಮತ್ತು ಮಾಂಸಕ್ಕೆ ಸರಕಾರಿ ಮಾರುಕಟ್ಟೆ ತೆರೆದು ಕೆಜಿಗೆ ನೂರರಿಂದ ಇನ್ನೂರು ರುಪಾಯಿಗೆ ಇಳಿಸಿದ್ದರೆ ಯಾರೂ ನಮಗೆ ದನದ ಮಾಂಸವೇ ಬೇಕು ಎಂದು ಹುಡುಕಿಕೊಂಡು ಹೋಗುತ್ತಿರಲಿಲ್ಲ. ಎಲ್ಲಾ ಜಾತಿ ಧರ್ಮದವರೂ
ಕುರಿಮೇಕೆ ಮಾಂಸವನ್ನೇ ತಿನ್ನುವಂತಾಗಿ ಮಾಂಸಾಹಾರದಲ್ಲಿ ಶ್ರೀಮಂತ ಬಡವ ಎಂಬ ಅಸಮಾನತೆ ಭೇದವನ್ನು ನೀಗಿಸಿ ದಂತಾಗುತ್ತಿತ್ತು. ಆಗ ಸಮಾಜದಲ್ಲಿ ಯಾರನ್ನೂ ಗೋವು ತಿನ್ನೋರು ಎಂದು ಮೂದಲಿಸುವ ಮಾತು ಇರುತ್ತಿರಲಿಲ್ಲ. ಆಗ ಸಿದ್ದರಾಮಯ್ಯನವರನ್ನು ಸಮಾಜ ಕೈಬಿಡುತ್ತಿರಲಿಲ್ಲ.

ಈಗ ನೋಡಿ ದಲ್ಲಾಳಿಗಳು ಮಧ್ಯವರ್ತಿಗಳಿಂದಾಗಿ ಕುರಿಮೇಕೆಯ ಮಾಂಸವು ಸಾವಿರ ರುಪಾಯಿಗಳ ಸಮೀಪದಲ್ಲಿದೆ. ಆದರೆ
ಬಿಸಿಲು, ಚಳಿ ಮಳೆ ಗಾಳಿಯಲ್ಲಿ ಸಾಕಿ ಕೊಬ್ಬಿಸುವ ಕುರುಬನಿಗೆ ಮಾತ್ರ ಮೂರುಕಾಸಿನ ಕಜ್ಜಾಯವಷ್ಟೆ. ಸಮಾಜದ ಭಾಗವಾ ಗಿದ್ದ ಲಾಟರಿ ನಿಷೇಧವಾಯ್ತು ಆನ್‌ಲೈನ್ ಲಾಟರಿ ಸ್ಥಗಿತವಾಯ್ತು ಸಕಲರೋಗಕ್ಕೂ ಮದ್ದು ಎನ್ನಲಾಗುತ್ತಿದ್ದ ಸಾರಾಯಿ ಸತ್ತುಹೋಯ್ತು. ಮಜಾ ನೀಡುವ ಮಾದಕ ಗಾಂಜ ಅಫೀಮು ಹಾಳಾಗಿಹೋಯ್ತು.

ಆಟೋಟ್ಯಾಕ್ಸಿ ಬಸ್ಸು ಬೀದಿ ವ್ಯಾಪಾರಗಳ ಆದಾಯ ಕುಗ್ಗಿಸುವ ಮೆಟ್ರೋ ಮಾಲುಗಳು ಬಂತು ಹಾಗಂತ ಸಮಾಜದಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳ ಲಿಲ್ಲ. ಆಸ್ಪತ್ರೆಗೆ ರೋಗಿಗಳಿಲ್ಲದಿದ್ದರೆ ವೈದ್ಯರು ಸಿಬ್ಬಂದಿಗಳಿಗೆ ದುಡಿಮೆಯಿಲ್ಲವೆಂದು ಯಾವ ರಾಜಕಾರಣಿಯೂ ಬರಬಾರದ ರೋಗ ಬರಲಿ ಎಂದು ವಿಧಾನಸಭೆಯ ಬಾವಿಗೆ ಬೀಳಲಿಲ್ಲ. ಸ್ಮಶಾನದ ವೀರಬಾಹುಗಳಿಗೆ ಕೆಲಸವಿಲ್ಲವೆಂದು ಯಾರೂ ಹೆಣ ಬೀಳಲಿ ಎಂದು ಟೌನ್‌ಹಾಲ್ ಮುಂದೆ ಪ್ರತಿಭಟಿಸುವುದಿಲ್ಲ.

ಯಾವುದೇ ಶೋಕವೂ ಶಾಶ್ವತ ವಲ್ಲ. ಹಾಗೆಯೇ ಗೋಹತ್ಯೆಯನ್ನು ತಡೆದರೆ ಆಹಾರೋದ್ಯಮ, ಚರ್ಮೋದ್ಯಮಕ್ಕೆ ಪೆಟ್ಟು
ಬೀಳುತ್ತದೆಂಬುದು ತಡೆದುಕೊಳ್ಳಲಾಗದ ಬದಲಾಗದ ಬಾಧೆಯೇನಲ್ಲ. ಮನುಷ್ಯ ತನ್ನ ಆರೋಗ್ಯ ಉಳಿದರೆ ಸಾಕೆಂದು ಸಕ್ಕರೆ
ತುಪ್ಪ ಉಪ್ಪು ಉಳಿ ಖಾರವನ್ನೆಲ್ಲಾ ತ್ಯಜಿಸಿ ಬದುಕುವುದನ್ನು ಕಲಿತಿದ್ದಾನೆ. ದಶಕಗಳ ಕಾಲ ದೇಶವನ್ನಾಳಿದ ಪಿತೃಪಕ್ಷಗಳನ್ನೇ ದೇಶದ ನಾಗರಿಕರು ತಿರಸ್ಕರಿಸಿ ಮುನ್ನಡೆಯುತ್ತಿದ್ದಾರೆ. ಇನ್ನು ಜಜುಬಿ ವೋಟ್‌ಬ್ಯಾಂಕ್ ತೆವಲು ಗೋಹತ್ಯೆಯಂಥ ಗಿಮಿಕ್
ಗಳನ್ನು ಉಗಿದು ದೂರವಿಡುವ ಕಾಲ ದೂರವೇನಿಲ್ಲ