ತುಮಕೂರು : ನಗರದ ರಾಮಕೃಷ್ಣ- ವಿವೇಕಾನಂದ ಆಶ್ರಮದ 32ನೇ ವಾರ್ಷಿಕೋತ್ಸವ, ಶಾರದಾ ದೇವಿಯವರ 172ನೇ ಜನ್ಮ ದಿನೋತ್ಸವದ ಪ್ರಯುಕ್ತ ಡಿ.22ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 9.30 ಗಂಟೆಗೆ ಸ್ವಾಮಿ ಪುರುಷೋತ್ತಮಾನಂದ ಭವನದ ಸಾಧು ನಿವಾಸ ಹಾಗೂ ರಾಮಕೃಷ್ಣ ವಿದ್ಯಾರ್ಥಿ ನಿಲಯದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಉತ್ತರಪ್ರದೇಶ ಮಥುರಾದ ಗುರುಶರಣಾನಂದ ಉದ್ಘಾಟಿಸುವರು. ವಿಜಯಪುರದ ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 3 ಗಂಟೆಗೆ ಜೀವಂತ ದುರ್ಗಾ ಪೂಜೆಯ ಬೆಳ್ಳಿಹಬ್ಬದ ಆಚರಣೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಚಾಲನೆ ನೀಡಲಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಶಾಂತಲಾ ರಾಜಣ್ಣ, ಜಿ.ಪಂ ಸಿಇಒ ಜಿ.ಪ್ರಭು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿ.27, 28 ಮತ್ತು 29ರಂದು ರಾಮಕೃಷ್ಣ-ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ದಶಮಾನೋತ್ಸವ, ವಿವೇಕ ದಶಮಿ, ಭಾವಾವಲೋಕನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ ಎಂದರು.
27ರಂದು ಬೆಳಿಗ್ಗೆ 9.30ಕ್ಕೆ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಯುವಸಮ್ಮೇಳನ’ ನಡೆಯಲಿದೆ.
28ರಂದು ಬೆಳಿಗ್ಗೆ 9.30 ಗಂಟೆಗೆ ರಾಜ್ಯಮಟ್ಟದ ‘ಶ್ರೀರಾಮಕೃಷ್ಣ ಶಿಕ್ಷಕರ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ. ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಲಿದೆ ಎಂದು ವಿವರಿಸಿದರು.
29ರಂದು ಬೆಳಿಗ್ಗೆ 10 ಗಂಟೆಗೆ ವಿಶೇಷ ಪ್ರವಚನ ನಡೆಯಲಿದೆ. ಸ್ವಾಮಿ ವೀರೇಶಾನಂದ ಸರಸ್ವತಿ, ಸ್ವಾಮಿ ನಿರ್ಭಯಾ ನಂದ, ಸ್ವಾಮಿ ಮುಕ್ತಿದಾನಂದ, ಮಾತಾ ವಿವೇಕಮಯಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಶ್ರಮದ ಸ್ವಾಮಿ ಪರಮಾನಂದ, ಧೀರಾನಂದ ಸ್ವಾಮೀಜಿ, ನಿವೃತ್ತ ಉಪನ್ಯಾಸಕರಾದ ಎಚ್.ಆರ್ ರಂಗನಾಥ್, ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.