ಬೆಂಗಳೂರು: ಇಲ್ಲಿ ನಡೆದ ಮಹಿಳೆಯರ ಐಪಿಎಲ್ ಮಿನಿ ಹರಾಜಿನಲ್ಲಿ(WPL Auction 2025) ಮುಂಬೈ ಮೂಲದ ಯುವ ಸಿಮ್ರಾನ್ ಶೇಖ್(Simran Shaikh) ಗರಿಷ್ಠ 1.90 ಕೋಟಿ ಮೊತ್ತ ಪಡೆದು ಗುಜರಾತ್ ಟೈಟಾನ್ಸ್ ತಂಡ ಸೇರುವ ಮೂಲಕ ಗಮನಸೆಳೆದಿದ್ದಾರೆ. ಸದ್ಯ ಇದುವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರ್ತಿಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ 16 ವರ್ಷದ ಕಮಲಿನಿ(G Kamalini) 1.60 ಕೋಟಿ ರೂ. ಪಡೆದು ಮಿಂಚಿದ್ದಾರೆ.
ಸಿಮ್ರಾನ್ ಈ ಹಿಂದೆ ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2023ರಲ್ಲಿ ನಡೆದ ಉದ್ಘಾಟನ ಆವೃತ್ತಿಯಲ್ಲಿ ಒಂಬತ್ತು ಪಂದ್ಯಗಳನ್ನಾಡಿ ಕೇವಲ 29 ರನ್ ಗಳಿಸಿದ್ದರು. 2024 ರ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. ಇದೀಗ ಮುಂದಿನ ಆವೃತ್ತಿಗಾಗಿ ನಡೆದ ಮಿನಿ ಹರಾಜಿನಲ್ಲಿ ದುಬಾರಿ ಮೊತ್ತ ಜೇಬಿಗಿಳಿಸಿದ್ದಾರೆ. ಸಿಮ್ರಾನ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಹಿರಿಯ ಮಹಿಳಾ ಟಿ20 ಟ್ರೋಫಿಯಲ್ಲಿ 11 ಪಂದ್ಯಗಳಲ್ಲಿ 176 ರನ್ ಗಳಿಸಿದ್ದರು.
ಕಮಾಲ್ ಮಾಡಿದ ಕಮಲಿನಿ
ತಮಿಳುನಾಡಿನ ಆಲ್ರೌಂಡರ್ ಜಿ. ಕಮಲಿನಿ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 1.60 ಕೋಟಿ ರೂ.ಗೆ ಖರೀದಿ ಮಾಡಿತು. 16 ವರ್ಷದ ಕಮಲಿನಿ U19 ಮಹಿಳೆಯರ T20 ಟ್ರೋಫಿಯಲ್ಲಿ ಎಂಟು ಪಂದ್ಯಗಳಲ್ಲಿ 311 ರನ್ಗಳೊಂದಿಗೆ ಎರಡನೇ ಅಗ್ರ ಸ್ಕೋರರ್ ಆಗಿದ್ದರು. ಎಡಗೈ ಬ್ಯಾಟರ್ ಆಗಿರುವ ಅವರು ದೇಶೀಯ ಕ್ರಿಕೆಟ್ನಲ್ಲಿಯೂ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.
ಅವರು ದಕ್ಷಿಣ ಆಫ್ರಿಕಾ ವಿರುದ್ಧದ U-19 ತ್ರಿಕೋನ ಸರಣಿಯ ಫೈನಲ್ನಲ್ಲಿ ಭಾರತ ‘B’ ಪರ ಆಡಿ 79 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹರಾಜಿಗೂ ಮುನ್ನ ಬೆಳಗ್ಗೆ ನಡೆದಿದ್ದ U-19 ಏಷ್ಯಾ ಕಪ್ನಲ್ಲಿ ಪಾಕಿಸ್ತಾನದ ವಿರುದ್ಧ 29 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಮಧ್ಯಾಹ್ನದ ವೇಳೆಗೆ ಹರಾಜಿನಲ್ಲಿ ಉತ್ತಮ ಮೊತ್ತ ಪಡೆದರು. ಕಮಲಿನಿ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರ್ತಿ.