Sunday, 15th December 2024

Swami Avimukteshwaranand: ವಿಶ್ವಗುರು ಆಗುವ ಮುನ್ನ ನಿಜವಾದ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು: ಅವಿಮುಕ್ತೇಶ್ವರಾನಂದ ಸರಸ್ವತಿ

Swami Avimukteshwaranand

ಭೋಪಾಲ್‌: ”ನಿಜವಾದ ನಾಯಕತ್ವದ ಗುಣಗಳನ್ನು ಮೊದಲು ಬೆಳೆಸಿಕೊಳ್ಳದೆ ಭಾರತವು ‘ವಿಶ್ವಗುರು’ (ವಿಶ್ವ ನಾಯಕ) ಆಗಲು ಸಾಧ್ಯವಿಲ್ಲ” ಎಂದು ಜ್ಯೋತಿಷ ಪೀಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ (Swami Avimukteshwaranand) ಹೇಳಿದರು. ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ತೆರಳುವ ಮಾರ್ಗಮಧ್ಯೆ ಮಧ್ಯ ಪ್ರದೇಶದ ಮೊರೆನಾಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಈ ವೇಳೆ ಅವರು ಗೋ ಸಂರಕ್ಷಣೆ, ಹಿಂದೂ ರಾಷ್ಟ್ರ ಭಾರತ, ವಿಶ್ವಗುರು ಭಾರತ ಮುಂತಾದ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

“ಹೆಮ್ಮೆ ಮತ್ತು ವಿಶ್ವಾಸವನ್ನು ಹೊಂದಿದವನು ಮಾತ್ರ ಗುರುವಾಗಲು ಸಾಧ್ಯ. ಆದರೆ ಇಂದು ಭಾರತಕ್ಕೆ ಈ ಹೆಮ್ಮೆಯ ಕೊರತೆಯಿದೆ. ತನ್ನದೇ ಆದ ಪರಂಪರೆಯನ್ನು ಗೌರವಿಸುವ ಬದಲು, ಭಾರತವು ಸ್ಫೂರ್ತಿಗಾಗಿ ನಿರಂತರವಾಗಿ ವಿದೇಶಗಳತ್ತ ನೋಡುತ್ತಿದೆ. ಉದಾಹರಣೆಗೆ ಕಾಶಿಯ ಪುನರಾಭಿವೃದ್ಧಿಯ ಸಮಯದಲ್ಲಿ ಅದರ ಮಾದರಿಯನ್ನು ಪುನರಾವರ್ತಿಸಲು ಜಪಾನ್‌ನ ಕ್ಯೋಟೋಗೆ ನಿಯೋಗವನ್ನು ಕಳುಹಿಸಲಾಯಿತು. ಕಾಶಿ ಕಾಶಿಯಾಗಿ ಏಕೆ ಉಳಿಯಬಾರದು? ಈಗ ಕ್ಯೋಟೋದಂತೆ ಇರಲು ಪ್ರಯತ್ನಿಸುವ ಮೂಲಕ ನಾವು ಕೇವಲ ಅನುಯಾಯಿಗಳಾಗಿದ್ದೇವೆʼʼ ಎಂದುವರು ಅ ತಿಳಿಸಿದರು.

ವಿದೇಶಿ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ತ್ಯಜಿಸಿದ್ದಕ್ಕಾಗಿ ಇಲ್ಲಿನ ನಾಯಕರನ್ನು ಟೀಕಿಸಿದ ಶಂಕರಾಚಾರ್ಯರು, ಈ ಮನಸ್ಥಿತಿಯು ಭಾರತವನ್ನು ನಾಯಕನಿಗಿಂತ ಹೆಚ್ಚಾಗಿ ‘ಜಾಗತಿಕ ಅನುಯಾಯಿ’ಯನ್ನಾಗಿ ಮಾಡಿದೆ ಎಂದು ಹೇಳಿದರು.

ಭಾರತ ಎಂದಿಗೂ ಹಿಂದುತ್ವವನ್ನು ಅರ್ಥ ಮಾಡಿಕೊಳ್ಳಲಿಲ್ಲ

ಭಾರತವು ಹಿಂದೂ ರಾಷ್ಟ್ರವಾಗುವ ಪರಿಕಲ್ಪನೆಯ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, “ಭಾರತವು ಹಿಂದೂ ರಾಷ್ಟ್ರವಾಗಿದ್ದರೂ, ಅದು ಹಿಂದೂ ಧರ್ಮವನ್ನು ಅದರ ನಿಜವಾದ ಅರ್ಥದಲ್ಲಿ ಸಾಕಾರಗೊಳಿಸಿಲ್ಲ. ಇದು ರಾಜಕೀಯ ಕಾರ್ಯಸೂಚಿಗಳ ಭೂಮಿಯಾಗಿದ್ದು, ಇಲ್ಲಿ ಜನರು ಧರ್ಮದ ಸಾರವನ್ನು ಅರ್ಥ ಮಾಡಿಕೊಳ್ಳದೆ ‘ಹಿಂದೂ-ಹಿಂದೂ’ ಎಂದಷ್ಟೇ ಜಪಿಸುತ್ತಾರೆ. ಧರ್ಮದ ಹೆಸರಿನಲ್ಲಿ ಇಲ್ಲಿ ಅವ್ಯವಸ್ಥೆ ಆಳುತ್ತದೆʼʼ ಎಂದು ತಿಳಿಸಿದರು.

ಕಳೆದ ದಶಕದ ‘ಹಿಂದೂ ರಾಜಕೀಯ’ದ ಉಗಮವನ್ನು ಟೀಕಿಸಿದ ಅವರು, ಇದೇ ಅವಧಿಯಲ್ಲಿ ಗೋಹತ್ಯೆ ಮತ್ತು ಗೋಮಾಂಸ ರಫ್ತು ಹೆಚ್ಚಾಗಿದೆ ಎಂದು ಒತ್ತಿ ಹೇಳಿದರು. ಕಸಾಯಿಖಾನೆಗಳ ಆಧುನೀಕರಣದ ಬಗ್ಗೆ ಗಮನಸೆಳೆದ ಅವರು, ಇದು ಗೋವುಗಳನ್ನು ರಕ್ಷಿಸುವ ತತ್ವಗಳಿಗೆ ಹೊಂದಿಕೆಯಾಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.

3ನೇ ಮಹಾಯುದ್ಧ ಸಮೀಪಿಸುತ್ತಿದೆ

ಪ್ರಸ್ತುತ ಜಾಗತಿಕ ವಿದ್ಯಾಮಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು, “ಇಂದು ಪ್ರತಿಯೊಂದು ರಾಷ್ಟ್ರವೂ ಅಜೇಯವೆಂದು ಭಾವಿಸುತ್ತದೆ. ಇದು ಕ್ರಮೇಣ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲ ಇದು ಉದ್ವಿಗ್ನತೆಯನ್ನು ಸೃಷ್ಟಿಸುತ್ತದೆ ಮತ್ತು ಜಗತ್ತನ್ನು ವಿರೋಧಿ ಶಿಬಿರಗಳಾಗಿ ವಿಭಜಿಸುತ್ತದೆ. ಅಂತಹ ವಿಭಜನೆಗಳು ಮೊದಲ ಎರಡು ಮಹಾಯುದ್ಧಗಳಿಗೆ ಮೂಲ ಕಾರಣಗಳಾಗಿದ್ದವು. ಅಲ್ಲದೆ ವಿದ್ವಾಂಸರು ಈಗಾಗಲೇ 3ನೇ ಮಹಾಯುದ್ಧದ ಸೂಚನೆಯನ್ನು ಗುರುತಿಸಿದ್ದಾರೆʼʼ ಎಂದು ಹೇಳಿದರು. ಿವರು ಆಗಾಗ ಬಿಜೆಪಿಯ ನೀತಿಗಳನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಈ ಸುದ್ದಿಯನ್ನೂ ಓದಿ: Parineeti Chopra : ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ನಿವಾಸದಲ್ಲಿ ಪಾದ ಪೂಜೆ ಸ್ವೀಕರಿಸಿದ ಶಂಕರಾಚಾರ್ಯರ ಸ್ವಾಮೀಜಿ