ಸ್ಫೂರ್ತಿಪಥ ಅಂಕಣ: ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತ
- ರಾಜೇಂದ್ರ ಭಟ್ ಕೆ.
Rajendra Bhat Column: ಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನ್ (ustad zakir hussain) ನಿಧನರಾದ ಸುದ್ದಿಯು ಸಂಗೀತಪ್ರೇಮಿಗಳಿಗೆ ನಿಜಕ್ಕೂ ಆಘಾತಕಾರಿ. ಆ ಶೂನ್ಯವನ್ನು ತುಂಬಿಸುವ ಇನ್ನೊಬ್ಬ ತಬಲಾ ಕಲಾವಿದ ಇಲ್ಲ ಅನ್ನುವುದು ಅವರ ತಾಕತ್ತು. ಅವರಿಗೆ 73 ವರ್ಷ ವಯಸ್ಸು.
ತನ್ನ 12ನೆಯ ವಯಸ್ಸಿಗೇ ತಬಲಾ ಸೋಲೋ ಕಛೇರಿಯನ್ನು ನಡೆಸಿದ ಕೀರ್ತಿ ಅವರದ್ದು! ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಅವರ ಮತ್ತು ತಬಲಾ ಗೆಳೆತನ 61 ವರ್ಷಗಳದ್ದು. ತಬಲಾ ಅಂದಕೂಡಲೇ ಜಗತ್ತು ನೆನಪಿಸಿಕೊಳ್ಳುವುದು, ಕನವರಿಸುವುದು ಉಸ್ತಾದರನ್ನೇ!
ಉಸ್ತಾದ್ ಅಲ್ಲಾ ರಖಾ ಅವರ ಮಗ ಅಂದರೆ ಸಾಮಾನ್ಯ ಸಂಗತಿ ಅಲ್ಲ!
ಭಾರತದಲ್ಲಿ ತಬಲಾಗೆ ಅನ್ವರ್ಥ ನಾಮ ಆಗಿ ಇದ್ದವರೆಂದರೆ ಉಸ್ತಾದ ಅಲ್ಲಾ ರಖಾ! ಸಾವಿರಾರು ಶಿಷ್ಯರನ್ನು ತಯಾರು ಮಾಡಿದವರು ಅವರು. ಭಾರತದ ಎಲ್ಲ ದೊಡ್ಡ ಸಂಗೀತ ಮಹೋತ್ಸವಗಳಲ್ಲಿ ತಬಲಾ ನುಡಿಸಿದ ಕೀರ್ತಿ ಉಸ್ತಾದ್ ಅಲ್ಲಾ ರಖಾ ಅವರದ್ದು. ಅವರ ಹಿರಿಯ ಮಗ ಝಾಕೀರ್ ಹುಸೇನ್. ಆದರೆ ಅಪ್ಪನು ಮಗನಿಗೆ ತಬಲಾ ಕಲಿಸಲಿಲ್ಲ. ಆದರೆ ಅಪ್ಪನ ಎಲ್ಲ ಸಂಗೀತ ಕಾರ್ಯಕ್ರಮಗಳಿಗೆ ಮಗನು ತಪ್ಪದೇ ಹೋಗುತ್ತಿದ್ದರು. ಅಪ್ಪನ ಹಿಂದೆಯೆ ಕೂತು ಅಪ್ಪನ ಬೆರಳ ಚಲನೆಯನ್ನು ಏಕಾಗ್ರತೆಯಿಂದ ಗಮನಿಸುತ್ತಿದ್ದರು. ಮಗನಿಗೆ ಅಪ್ಪನೇ ಲೆಜೆಂಡ್! ಮಗನದ್ದು ಒಂದು ರೀತಿ ಏಕಲವ್ಯ ಸಾಧನೆ ಅನ್ನಬಹುದು.
ಮಗನು 12ನೇ ವಯಸ್ಸಿಗೇ ತಬಲಾ ಸೋಲೋ ಸ್ಟೇಜ್ ಕಾರ್ಯಕ್ರಮವನ್ನು ನೀಡಿದಾಗ ಅಪ್ಪ ನಿಬ್ಬೆರಗಾಗಿದ್ದರು. ಮುಂಬೈಯ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ಮಗ ಝಾಕೀರ್ ಹುಸೇನ್ ಸಂಪೂರ್ಣ ಸಂಗೀತಕ್ಕೆ ಸಮರ್ಪಣೆ ಆದರು.
ಉಸ್ತಾದರು ನಡೆದದ್ದೇ ದಾರಿ!
ಬಾಲ್ಯದಲ್ಲಿ ತನ್ನ ಎರಡು ಸೋದರಿಯರನ್ನು ಮತ್ತು ಒಬ್ಬ ಸೋದರನನ್ನು ಅಕಾಲಿಕವಾಗಿ ಕಳೆದುಕೊಂಡ ನೋವನ್ನು ಎದೆಯಲ್ಲಿ ಇಟ್ಟುಕೊಂಡು ಉಸ್ತಾದರು ತಮ್ಮ ಎಲ್ಲ ಮನದ ನೋವುಗಳನ್ನು ಸಂಗೀತದಲ್ಲಿಯೇ ಮರೆತರು. ತಬಲಾದಲ್ಲಿ ಅದುವರೆಗೆ ಯಾರೂ ಮಾಡದಷ್ಟು ಆವಿಷ್ಕಾರಗಳನ್ನು ಮಾಡಿದರು. ಶಾಸ್ತ್ರೀಯ ಸಂಗೀತ ಕಛೇರಿಗಳು, ವೆಸ್ಟರ್ನ್ ಫ್ಯೂಷನ್ ಕಾರ್ಯಕ್ರಮಗಳು, ಜಾಝ್ ಶೋ, ತಬಲಾ ಸೋಲೋ ಕಾರ್ಯಕ್ರಮಗಳು, ವಿಶೇಷ ಜುಗಲಬಂದಿಗಳು, ಸಿನೆಮಾ ಸಂಗೀತ………ಮಾಧ್ಯಮವು ಈ ಉಸ್ತಾದರಿಗೆ ಯಾವುದಾದರೇನು?
ಉಸ್ತಾದರ ತಬಲಾ ನುಡಿತವೆಂದರೆ…!
ಅದು ಕೆಲವೊಮ್ಮೆ ಭೋರ್ಗರೆವ ಸಮುದ್ರದ ಅಲೆಗಳ ಹಾಗೆ! ಕೆಲವೊಮ್ಮೆ ನಿಧಾನವಾಗಿ ಬೀಸುವ ಮಂದಾನಿಲದ ಹಾಗೆ! ಇನ್ನೂ ಕೆಲವೊಮ್ಮೆ ಸಿಡಿಯುವ ಮಿಂಚಿನ ಹಾಗೆ! ಇನ್ನೊಮ್ಮೆ ತಾಯಿಯ ಮಮತೆಯ ಜೋಗುಳದ ಹಾಗೆ! ಇನ್ನೂ ಕೆಲವೊಮ್ಮೆ ಆಹ್ಲಾದಕರವಾದ ಸೋನೆಮಳೆಯ ಹಾಗೆ! ಮತ್ತೊಮ್ಮೆ ಮುಸಲಧಾರೆ ಆದ ಜಡಿಮಳೆಯ ಹಾಗೆ! ಮತ್ತೂ ಒಮ್ಮೆ ದುಂಬಿಯ ಝೇಂಕಾರ, ಜಲಪಾತದ ಘರ್ಜನೆ, ಕುದುರೆಯ ಖುರಪುಟ, ರೈಲಿನ ಶಬ್ದ, ಗಾಳಿಯ ಬೀಸು, ಶಂಖದ ನಾದ, ಕಂಸಾಳೆಯ ತಾಳ, ಎದೆಯ ಬಡಿತ, ಪ್ರೇಯಸಿಯ ಗೆಜ್ಜೆಯ ನಾದ, ನಿಧಾನವಾಗಿ ತೊಟ್ಟಿಕ್ಕುವ ಇಬ್ಬನಿಯ ಹನಿ, ಕೈ ಬಳೆಗಳ ರಿಂಗಣ… ಹೀಗೆ ಎಲ್ಲವೂ.
ಇನ್ನೂ ಏನೇನೋ ಅನುಭೂತಿಗಳು! ಅದ್ಯಾವುದೂ ನಮ್ಮ ನಿಮ್ಮ ಶಬ್ದಗಳಿಗೆ ನಿಲುಕುವುದಿಲ್ಲ! ಎದುರು ಕಣ್ಣು ಮುಚ್ಚಿ ಕೂತು ಅನುಭವಿಸಬೇಕು ಅಷ್ಟೇ.
ಅಸದೃಶವಾದ ನಾದ ಸೌಖ್ಯ ಎಂದರು ಲತಾ ಮಂಗೇಷ್ಕರ್.
ತಬಲಾ ಎಂಬ ಅತೀ ಸಾಮಾನ್ಯವಾದ ಚರ್ಮವಾದ್ಯದಲ್ಲಿ ಅವರಷ್ಟು ಅದ್ಭುತವಾದ ನಾದಸೌಖ್ಯವನ್ನು ಕ್ರಿಯೇಟ್ ಮಾಡುವ ಕಲಾವಿದ ಜಗತ್ತಿನಲ್ಲಿಯೇ ಇನ್ನೊಬ್ಬರು ಇಲ್ಲ ಅಂದಿದ್ದರು ಲತಾ ಮಂಗೇಷ್ಕರ್! ಒಮ್ಮೆ ಉಸ್ತಾದರ ಬೆರಳುಗಳನ್ನು ಕಣ್ಣಿಗೆ ಒತ್ತಿಕೊಂಡು ಸಂಭ್ರಮ ಪಟ್ಟಿದ್ದರು! ಅಮೆರಿಕಾದ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಉಸ್ತಾದ್ ಝಾಕೀರ್ ಹುಸೇನರನ್ನು ತನ್ನ ಅಧಿಕೃತ ನಿವಾಸ ವೈಟ್ ಹೌಸಿಗೆ ಕರೆಸಿ ಅವರ ವೆಸ್ಟರ್ನ್ ಫ್ಯೂಷನ್ ಕಾರ್ಯಕ್ರಮ ನಡೆಸಿ ಸನ್ಮಾನ ಮಾಡಿ ಕಳುಹಿಸಿದ್ದರು!
ಒಂದಕ್ಷರ ಬಿಡದೆ ನುಡಿಸುವ ಸೊಗಸು! ನಾಲ್ಕನೇ ಕಾಲವೂ ಸಲೀಸು!
ಅವರು ನುಡಿಸಿದ ಎರಡು ಸೋಲೋ ಕಾರ್ಯಕ್ರಮಗಳನ್ನು ನಾನು ಎದುರು ಸಭೆಯಲ್ಲಿ ಕೂತು ನೋಡಿ ಮೂಕವಿಸ್ಮಿತ ಆಗಿದ್ದೆ. ಬಾಯಲ್ಲಿ ಬೋಲ್ ಹೇಳುತ್ತಾ ಒಂದಕ್ಷರವನ್ನೂ ಬಿಡದೇ ಅವುಗಳನ್ನು ತಬಲಾದಲ್ಲಿ ನುಡಿಸಿದಾಗ ಆಗುವ ರೋಮಾಂಚನವು ಒಂದೆಡೆ! ಶಾಸ್ತ್ರೀಯ ಸಂಗೀತದ ಕಾರ್ಯಕ್ರಮದಲ್ಲಿ ಇತರ ಕಲಾವಿದರು ಹಾಡಿದ, ನುಡಿಸಿದ ಒಂದಕ್ಷರಕ್ಕೆ ಲೋಪವಾಗದ ಹಾಗೆ ಮೂರನೇ, ನಾಲ್ಕನೇ ಕಾಲದಲ್ಲಿ ಅವರ ಬೆರಳುಗಳು ತಬಲಾವನ್ನು ಮೀಟುತ್ತಿದ್ದರೆ ಅವರ ಜೊಂಪೆ ಜೊಂಪೆ ಕೂದಲು ಹಣೆಯ ಮೇಲೆ ಕುಣಿದಾಡುವುದನ್ನು ನೋಡುವ ಚೆಂದವೆ ಇನ್ನೊಂದೆಡೆ! ಅವರ ಮತ್ತು ಅವರ ಅಪ್ಪನ ತಬಲಾ ಜುಗಲಬಂದಿಯ ಹತ್ತಾರು ವಿಡಿಯೋಗಳು ಯು ಟ್ಯೂಬ್ ವೇದಿಕೆಯಲ್ಲಿದ್ದು ಅವುಗಳನ್ನು ಆಲಿಸುವುದೇ ನಮ್ಮ ಕಿವಿಗಳ ಭಾಗ್ಯ!
ಅಹಂ ಇಲ್ಲದ ಸ್ಟಾರ್ ಕಲಾವಿದ
ಅಹಂಕಾರದ ಲವಲೇಶವೂ ಇಲ್ಲದೆ ಅವರು ಎಳೆಯ ಕಲಾವಿದರನ್ನು ಪ್ರೋತ್ಸಾಹಿಸುವುದು, ಸಣ್ಣ ಸಣ್ಣ ವಯಸ್ಸಿನ ಕಲಾವಿದರಿಗೆ ಕೂಡ ತಬಲಾ ಸಾಥ್ ನೀಡಿ ಪ್ರೋತ್ಸಾಹವನ್ನು ನೀಡುವುದು ಅವರ ಭಾರೀ ದೊಡ್ದ ಗುಣ.
ಇತ್ತೀಚೆಗೆ ತಬಲಾ ಕಿರಿಯ ಪ್ರತಿಭೆ ಆದ ಝಾಂಪ ಲಾಹಿರಿ ಅವಳ ಸೋಲೋ ಪ್ರದರ್ಶನಕ್ಕೆ ಒಬ್ಬ ಸಾಮಾನ್ಯವಾದ ಪ್ರೇಕ್ಷಕನಾಗಿ ಎರಡು ಗಂಟೆ ಎದುರಿನ ಸಾಲಿನಲ್ಲಿ ಕೂತದ್ದು, ನಂತರ ವೇದಿಕೆಯನ್ನು ಏರಿ ಆಕೆಯನ್ನು ಸನ್ಮಾನ ಮಾಡಿದ್ದು ಎಲ್ಲವೂ ಸ್ಮರಣೀಯವಾದ ಘಟನೆ!
ಸಾವಿರಾರು ವಿದೇಶದ ಆಲ್ಬಂಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ತಬಲಾ ನುಡಿಸಿದ್ದಾರೆ. ಗ್ರ್ಯಾಮಿ ಮೊದಲಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ನೂರಾರು ದೊರೆತಿವೆ. ಅಮೆರಿಕ ಸರಕಾರವು ಕೊಡುವ ನೇಷನಲ್ ಹೆರಿಟೇಜ್ ಸ್ಕಾಲರಶಿಪ್ ಅವಾರ್ಡ್ ಅವರಿಗೆ ದೊರಕಿದೆ.
ಭಾರತರತ್ನವೊಂದೇ ಬಾಕಿ!
ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮ ವಿಭೂಷಣ (2023) ಪ್ರಶಸ್ತಿಗಳು ಉಸ್ತಾದರಿಗೆ ಈಗಾಗಲೇ ಲಭಿಸಿವೆ. ಈ ಸರಣಿಯಲ್ಲಿ ಭಾರತ ರತ್ನವೊಂದೇ ಅವರಿಗೆ ಬಾಕಿ ಇದ್ದು ಅದಕ್ಕೆ ಕೂಡ ಅವರು ನೂರಕ್ಕೆ ನೂರರಷ್ಟು ಅರ್ಹರಿದ್ದಾರೆ! ಮರಣೋತ್ತರವಾಗಿಯಾದರೂ ಅದು ಅವರಿಗೆ ದೊರೆಯಬೇಕು. ಕೇಂದ್ರ ಸರಕಾರದ ಸಂಗೀತ ಮತ್ತು ನಾಟ್ಯ ಅಕಾಡೆಮಿಯ ಪ್ರಶಸ್ತಿ, ಮಧ್ಯಪ್ರದೇಶ ಸರಕಾರ ಕೊಡುವ ಕಾಳಿದಾಸ ಸನ್ಮಾನ್…….ಎಲ್ಲವೂ ಅವರಿಗೆ ದೊರೆತಾಗಿದೆ.
ಅವರು ಹತ್ತಾರು ಸಿನೆಮಾಗಳಿಗೆ ಸಂಗೀತ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಸಿನೆಮಾಗಳಲ್ಲಿ ನಟನೆಯನ್ನು ಕೂಡ ಮಾಡಿದ್ದಾರೆ! ಅಮೆರಿಕಾದ ಸ್ಯಾನ್ ಫೋರ್ಡ್ ವಿವಿಯಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಗೌರವವನ್ನು ಕೂಡ ಪಡೆದಿದ್ದಾರೆ.
ಭಾರತೀಯ ಸಂಗೀತದ ಬಗ್ಗೆ ಅವರು ಹೇಳಿದ್ದು …..
ಉಸ್ತಾದ್ ಝಾಕೀರ್ ಹುಸೇನರು ಭಾರತೀಯ ಸಂಗೀತದ ಬಗ್ಗೆ ಹೇಳಿದ ಮಾತುಗಳು ನನಗೆ ಭಾರೀ ಪ್ರೇರಣೆ ಕೊಟ್ಟಿವೆ. ಅವರ ಮಾತುಗಳಲ್ಲಿಯೇ ಕೇಳುತ್ತಾ ಹೋಗೋಣ!
‘ನಾನು ಭಾರತೀಯ ಸಂಗೀತದ ಆರಾಧಕ. ಸಂಗೀತದಲ್ಲಿ ನಾನು ಸಾಧನೆ ಮಾಡಿದ್ದು ಬಲು ಕಡಿಮೆ. ನಾನಿನ್ನೂ ಸಾಧಿಸಬೇಕಾದದ್ದು ತುಂಬಾ ಇದೆ. ನಾನು ಮದುವೆಯ ಪಾರ್ಟಿಗಳಲ್ಲಿ, ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ, ಗುಂಡು ಪಾರ್ಟಿಗಳಲ್ಲಿ ತಬಲಾ ನುಡಿಸುವುದಿಲ್ಲ! ಎಷ್ಟು ಕೋಟಿ ಕೊಟ್ಟರೂ ನಾನು ಆ ಕಡೆಗೆ ಹೋಗುವುದಿಲ್ಲ! ನನ್ನ ಪ್ರಕಾರ ನನಗೆ ಭಾರತೀಯ ಸಂಗೀತ ಎಂದರೆ ಬಹಳ ದೊಡ್ಡ ಆರಾಧನೆ. ನಾನು ಸಂಗೀತ ಕಛೇರಿಗೆ ತಬಲಾ ನುಡಿಸುವ ಮೊದಲು ನನ್ನ ಎಲ್ಲಾ ಅಹಂಕಾರವನ್ನು ನನ್ನ ಪ್ರೇಕ್ಷಕರ ಕಾಲ ಬುಡದಲ್ಲಿ ಇಟ್ಟು ನಂತರ ತಬಲಾ ನುಡಿಸಲು ಆರಂಭ ಮಾಡುತ್ತೇನೆ! ಪ್ರತೀಯೊಂದು ಸಂಗೀತ ವೇದಿಕೆಗಳಲ್ಲಿಯೂ ನಾನು ಹೊಸತು ಕಲಿಯುತ್ತಾ ಇದ್ದೇನೆ!’
ಅಂತಾ ತಬಲಾ ಸಾಮ್ರಾಟ ನಿನ್ನೆ ನಿರ್ಗಮಿಸಿದ್ದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.
ಹೀಗೆ ಹೋಗಿ ಹಾಗೆ ಬನ್ನಿ ಉಸ್ತಾದ್.
ಇದನ್ನೂ ಓದಿ: Faith: ರಾಜೇಂದ್ರ ಭಟ್ ಅಂಕಣ: ದೇವರ ನಂಬಿಕೆಯು ದೊಡ್ಡದಾ? ವಿಜ್ಞಾನದ ಸಿದ್ಧಾಂತಗಳು ದೊಡ್ಡದಾ?