ಅನುಭವಾಮೃತ
ರಾಘವೇಂದ್ರ ಜೋಯಿಸ್, ಮೈಸೂರು
ಒಬ್ಬ ವಿದ್ಯಾರ್ಥಿ ತುಂಬಾ ಪ್ರತಿಭಾವಂತನಾಗಿರುತ್ತಾನೆ, ಕಷ್ಟಪಟ್ಟು ಓದುತ್ತಾನೆ; ಆದರೆ ಫಲಿತಾಂಶ ಬಂದಾಗ ಅಚ್ಚರಿ ಎನ್ನುವಂತೆ, ಇವನಷ್ಟು ಪರಿಶ್ರಮ ಹಾಕದ ಇನ್ನೊಬ್ಬ ವಿದ್ಯಾರ್ಥಿಗೆ ಹೆಚ್ಚಿನ ಅಂಕಗಳು ದಕ್ಕಿರುತ್ತವೆ, ಒಳ್ಳೆಯ ಕಾಲೇಜಿನಲ್ಲಿ ಸೀಟೂ ಸಿಗುತ್ತದೆ. ಒಬ್ಬ ವಿದ್ಯಾರ್ಥಿ ಕ್ಯಾಂಪಸ್ ಸಂದರ್ಶನ ಗಳನ್ನು ಬಹಳ ಚೆನ್ನಾಗಿ
ನಿರ್ವಹಿಸಿರುತ್ತಾನೆ, ಉದ್ಯೋಗಕ್ಕೆ ಬೇಕಾದ ಎಲ್ಲಾ ಕೌಶಲಗಳನ್ನೂ ಹೊಂದಿರುತ್ತಾನೆ; ಆದರೆ ಭರ್ಜರಿ ಸಂಬಳ ವಿರುವ ಒಳ್ಳೆಯ ಕಂಪನಿಯ ಕೆಲಸ ಇವನಿಗೆ ಸಿಗದೆ ಮತ್ತೊ ಬ್ಬನ ಪಾಲಾಗುತ್ತದೆ.
ಒಬ್ಬಾತ ತುಂಬಾ ಕಷ್ಟಪಟ್ಟು ಒಂದು ಬಿಸಿನೆಸ್ ಶುರುಮಾಡುತ್ತಾನೆ, ಅಹರ್ನಿಶಿ ದುಡಿಯುತ್ತಾನೆ, ಆದರೂ ವ್ಯವಹಾರ ಗಿಟ್ಟುವುದಿಲ್ಲ; ಆದರೆ ಪಕ್ಕದಲ್ಲಿ ಬಂದು ಸೇರಿಕೊಂಡು ಇವನಂಥದೇ ವ್ಯವಹಾರವನ್ನು ಶುರು ಮಾಡುವಾತ ಇವನ ಕಣ್ಣೆದುರಿಗೇ ಗೆಲ್ಲುತ್ತಾನೆ, ಏರುಗತಿ ಕಾಣುತ್ತಾನೆ. ಆ ಶ್ರಮಜೀವಿ ಕಚೇರಿಯಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಾ, ಅಗತ್ಯ ಕೌಶಲಗಳನ್ನು ರೂಢಿಸಿಕೊಂಡು ದುಡಿಯುತ್ತಿರುತ್ತಾನೆ; ಆದರೆ ಅವನಷ್ಟು ಅರ್ಹತೆ ಯಿಲ್ಲದ ಅವನ ಸಹೋದ್ಯೋಗಿಗೆ ಪ್ರಮೋಷನ್ ಸಿಗುತ್ತದೆ.
ಹೀಗೇ ಹೇಳುತ್ತ ಹೋದರೆ, ಹೊಲದಲ್ಲಿ ದಿನ ವಿಡೀ ಬೆವರು ಸುರಿಸಿ ದುಡಿಯುವ ರೈತನಿಗಿಂತ, ಆತ ಬೆಳೆದಿದ್ದನ್ನು ಕೈಬದಲಾಯಿಸಿ ವ್ಯವಹರಿಸುವ ಮಧ್ಯವರ್ತಿಗೇ ಹೆಚ್ಚಿನ ಲಾಭ ಸಿಗುವಿಕೆ, ಶಾಸ್ತ್ರೀಯವಾಗಿ ಸಂಗೀತ ಕಲಿತಿದ್ದು ಅದರ ಎಲ್ಲ ಮಗ್ಗುಲುಗಳ ಪರಿಚಯವಿದ್ದರೂ ರಿಯಾಲಿಟಿ ಷೋನ ‘ಗ್ರಾಂಡ್ ಫಿನಾಲೆ’ಯಲ್ಲಿ ಮತ್ತಾರೋ ವಿಜಯ ಶಾಲಿಯಾಗುವಿಕೆ, ಒಬ್ಬ ಒಳ್ಳೆಯ ನಟ ಹಾಗೂ ಒಬ್ಬ ಅತ್ಯುತ್ತಮ ನಿರ್ದೇಶಕ ಸೇರಿ ನಿರ್ಮಿಸಿದ ಚಲನ ಚಿತ್ರಕ್ಕೆ ಬಿಡುಗಡೆ ಭಾಗ್ಯ ದೊರೆಯದೆ ಅಥವಾ ನಿರೀಕ್ಷಿತ ಮಾರುಕಟ್ಟೆ ದಕ್ಕದೆ, ಅಡ್ನಾಡಿಗಳ ಚಲನಚಿತ್ರ ಸೂಪರ್ಹಿಟ್ ಆಗುವಿಕೆ, ಜನಪರನಾಗಿದ್ದುಕೊಂಡು ಭರವಸೆದಾ ಯಕ ರಾಜಕಾರಣಿ ಎನಿಸಿಕೊಂಡಿದ್ದರೂ ಚುನಾವಣೆಯಲ್ಲಿ ಟಿಕೆಟ್-ವಂಚಿತನಾಗುವಿಕೆ ಇಂಥ ಹತ್ತು ಹಲವು ನಿದರ್ಶನಗಳನ್ನು ಉಲ್ಲೇಖಿಸುತ್ತಾ ಹೋಗಬಹುದು.
ಹೀಗೆ ಆಯಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಅದಕ್ಕೆ ಅಗತ್ಯವಾದ ಪ್ರತಿಭೆ-ಪರಿಶ್ರಮ-ಪ್ರಾಮಾಣಿಕತೆ-ಪ್ರಯತ್ನಶೀಲತೆಗಳ ಮೂಟೆಯೇ ಆಗಿದ್ದರೂ, ‘ಅದೃಷ್ಟ’ ಎಂಬುದರ ಬೆಂಬಲವಿಲ್ಲದೆ ತಮಗೆ ಸಿಗಬೇಕಾದ ಗೆಲುವು, ಯಶಸ್ಸುಗಳಿಂದ ವಂಚಿತರಾಗುವಂಥ ಪರಿಸ್ಥಿತಿ ಎದುರಾಗುತ್ತದೆ. ಈ ಯಾವ ಮಾನದಂಡಗಳಲ್ಲೂ ಸರಿಸಾಟಿ ಯಾಗದ ವ್ಯಕ್ತಿಯೇ ಹೀಗೆ ಯಶಸ್ಸು ಮತ್ತು ಲಾಭವನ್ನು ದಕ್ಕಿಸಿಕೊಂಡಾಗ, ನಿಜಾರ್ಥದಲ್ಲಿ ಅರ್ಹರಾಗಿದ್ದೂ ‘ಅದೃಷ್ಟ’ದ ಒತ್ತಾಸೆಯಿಲ್ಲದವರಿಗೆ ಬೇಸರವಾಗುವುದು ಸಹಜ.
ಆದರೆ ಇಂಥವರು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗಬಾರದು, ಹಾಗೆ ಮಾಡುವುದರಲ್ಲಿ ಅರ್ಥವೂ ಇರುವುದಿಲ್ಲ.
ಅದಕ್ಕೆ ಬದಲಾಗಿ, ನಿಯೋಜಿತ ಕೆಲಸದಲ್ಲಿ ಮೊದಲಿನಂತೆಯೇ ಪ್ರೀತಿಯಿಂದ ತೊಡಗಿಸಿ ಕೊಳ್ಳಬೇಕು. ಯಶಸ್ಸಿನ ಹಾದಿಯೆಡೆಗೆ ಹೆಜ್ಜೆ ಹಾಕಲು ತಮಗೆ ಅಡ್ಡಿಯಾಗಿರುವ ಅಂಶಗಳಾವುವು ಎಂಬುದನ್ನು ಪತ್ತೆಮಾಡಿಕೊಂಡು, ಆ ನ್ಯೂನತೆಯನ್ನು ಸರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು. ‘ಹಾರ್ಡ್ವರ್ಕ್’ ಮತ್ತು
‘ಸ್ಮಾರ್ಟ್ವರ್ಕ್’ ನಡುವೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬೇಕು. ಆಗ ಇಂಥವರಿಗೂ ಒಂದು ದಿನ ಬರುತ್ತದೆ, ‘ಅದೃಷ್ಟ’ದ ಬಾಗಿಲು ತೆರೆಯುತ್ತದೆ.
ಹಾಗೊಮ್ಮೆ ತೆರೆದುಕೊಳ್ಳದಿದ್ದರೂ ಪರವಾಗಿಲ್ಲ, ಇದ್ದುದರಲ್ಲೇ ತೃಪ್ತಿ ಪಡೆದುಕೊಂಡು, ಎದುರಿಗಿರುವ ಜೀವನ ವನ್ನು ಖುಷಿಯಿಂದ ಕಳೆಯುವುದನ್ನು ರೂಢಿಸಿಕೊಂಡರೆ ಬದುಕು ಸೊಗಸಾಗಿರುತ್ತದೆ, ನೆಮ್ಮದಿಯಿಂದ ತುಂಬಿರು ತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ