Monday, 16th December 2024

Guinness World Record: ಗ್ವಾಲಿಯರ್ ಅರಮನೆಯಲ್ಲಿ ಹರಿದ ಸಂಗೀತ ಸುಧೆ; 546 ಕಲಾವಿದರ ಪ್ರಸ್ತುತಿಗೆ ಒಲಿದು ಬಂತು ಗಿನ್ನೆಸ್ ವಿಶ್ವದಾಖಲೆಯ ಮುಕುಟ

ಗ್ವಾಲಿಯರ್: ತಾನ್ ಸೇನ್ ಸಂಗೀತ ಹಬ್ಬದ (Tansen Music Festival) 100ನೇ ಆವೃತ್ತಿಯಲ್ಲಿ ಹೊಸ ವಿಶ್ವದಾಖಲೆಯೊಂದು ನಿರ್ಮಾಣಗೊಳ್ಳುವ ಮೂಲಕ, ಮಧ್ಯಪ್ರದೇಶದ (Madhya Pradesh) ಹಿರಿಮೆಗೊಂದು ಹೊಸ ಗರಿ ಸೇರ್ಪಡೆಗೊಂಡಿದೆ. ಈ ಸಂಗೀತ ಹಬ್ಬದಲ್ಲಿ (Music Festival) 546 ಕಲಾವಿದರು ಒಂಬತ್ತು ಶಾಸ್ತ್ರೀಯ ಪರಿಕರಗಳನ್ನು ಏಕಕಾಲದಲ್ಲಿ ನುಡಿಸುವ ಮೂಲಕ ಈ ಸಂಭ್ರಮ ಗಿನ್ನೆಸ್ ವಿಶ್ವ ದಾಖಲೆಗೆ (Guinness World Record) ಸೇರ್ಪಡೆಗೊಂಡಿದೆ. ನಿರಂತರ 9 ನಿಮಿಷಗಳ ಈ ಸಮ್ಮಿಳಿತ ಸಂಗೀತ ಪ್ರದರ್ಶನವು ಸಂಗೀತ ಪರಿಕರ ಮತ್ತು ಗಾಯನ ವಿಭಾಗಗಳೆರಡರಲ್ಲೂ ಗಿನ್ನೆಸ್ ವಿಶ್ವದಾಖಲೆಯನ್ನು ಬರೆಯಿತು.

ಈ ಕಾರ್ಯಕ್ರಮವು ಇಲ್ಲಿನ ಗ್ವಾಲಿಯರ್ ಕೋಟೆಯಲ್ಲಿ (Gwalior Fort) ನಡೆಯಿತು. ಈ ಕ್ಷಣಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಸಹಿತ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಭಾರತಿಯ ಶಾಸ್ತ್ರಿಯ ಸಂಗೀತಕ್ಕೆ ಹೊಸ ವಿಶ್ವಮನ್ನಣೆಯನ್ನು ದೊರಕಿಸಿಕೊಟ್ಟ ಸಂಗೀತ ಕಲಾವಿದರನ್ನು ಇದೇ ಸಂದರ್ಭದಲ್ಲಿ ಈ ರಾಜಕೀಯ ಮುಖಂಡರು ಅಭಿನಂದಿಸಿ ಗೌರವಿಸಿದರು.

ಪ್ರಖ್ಯಾತ ಕೊಳಲು ವಾದಕ ಪಂಡಿತ್ ರೋಣು ಮಜುಮ್ದಾರ್ ಅವರ ಸಮರ್ಥ ನಿರ್ದೇಶನದಲ್ಲಿ ಈ ಸಂಗೀತ ಹಬ್ಬ ಮೂಡಿಬಂತು. ಈ ಕಾರ್ಯಕ್ರಮದಲ್ಲಿ, 347 ಪುರುಷರು ಹಾಗೂ 189 ಮಹಿಳಾ ಕಲಾವಿದರು ಭಾಗವಹಿಸಿದ್ದರು. ಈ ತಂಡದಲ್ಲಿ ಒಬ್ಬರು ಹಾಡುಗಾರರು, 76 ತಬಲಾ ವಾದಕರು, 56 ಕೊಳಲು ವಾದಕರು, 80 ವಯಲಿನ್ ವಾದಕರು, 3 ಸಂತೂರ್ ವಾದಕರು, 13 ಸರೋದ್ ವಾದಕರು, 11 ಸಾರಂಗಿ ವಾದಕರು, 93 ಸಿತಾರ್ ವಾದಕರು, ಒಬ್ಬರು ಸಿತಾರ್-ಬಂಜೋ ವಾದಕ ಹಾಗೂ 34 ಹಾರ್ಮೋನಿಯಂ ಕಲಾವಿದರ ಸಮ್ಮಿಲನ ಈ ಬೃಹತ್ ಸಂಗೀತ ಹಬ್ಬದ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದ ಯಶಸ್ಸಿ ಆಯೋಜನೆಯ ಬಳಿಕ, ಗಿನ್ನೆಸ್ ವಿಶ್ವ ದಾಖಲೆಯ ತಂಡವು ಈ ದಾಖಲೆಯ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಸಭಿಕರ ಕರಾಡತನದ ನಡುವೆ ಹಸ್ತಾಂತರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಯಾದವ್ ಅವರು, ‘ಇದು ನಿಜವಾಗಿಯೂ ಸುಪ್ರಸಿದ್ಧ ಸಂಗೀತ ಮಾಂತ್ರಿಕ ತಾನ್ ಸೇನ್ ಅವರಿಗೆ ಸಲ್ಲಿಸುತ್ತಿರುವ ನಿಜವಾದ ಗೌರವ’ ಎಂದು ಹೇಳಿದರಲ್ಲದೇ, ‘ಯುನೆಸ್ಕೋ (UNESCO) ಸಂಗೀತ ನಗರದಲ್ಲಿ ಸಂಗೀತ ಪರಂಪರೆಯನ್ನು ಸಂರಕ್ಷಿಸುವುದಕ್ಕೆ ಇದೊಂದು ಅಭೂತಪೂರ್ವ ಪ್ರಯತ್ನ’ ಎಂದು ಮೋಹನ್ ಯಾದವ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಇದು, ರಾಜ್ಯದ ಎಲ್ಲಾ ಸಂಗೀತ ಕಲಾವಿದರ ನೈತಿಕತೆಯನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ನಮ್ಮ ಭವ್ಯ ಸಂಗೀತ ಪರಂಪರೆಯ ರಥವನ್ನು ಮುಂದಕ್ಕೆ ಎಳೆದುಕೊಂಡು ಹೋಗಲು ಅವರೆಲ್ಲರಿಗೂ ಹೊಸ ಶಕ್ತಿ ಇದರಿಂದ ಲಭಿಸಿದಂತಾಗಿದೆ ಎಂದೂ ಮುಖ್ಯಮಂತ್ರಿ ಯಾದವ್ ಅವರು ಇದೇ ಸಂದರ್ಭದಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಐದು ದಿನಗಳ ತಾನ್ ಸೇನ್ ಸಂಗೀತೋತ್ಸವವು, ಜಪಾನ್ ನ ಯೂಜಿ ನಕಗಾವ ಮತ್ತು ಶಿಗೆರು ಮೊರಿಯಾಮ ಅವರ ಸಾರಂಗಿ ಹಾಗೂ ತಬಲಾ ಜುಗಲ್ಬಂದಿಯೊಂದಿಗೆ ಪ್ರಾರಂಭಗೊಂಡಿತು. ವಿಶ್ವ ಸಂಗೀತ ಸಮ್ಮೇಳನದಡಿಯಲ್ಲಿ ನಡೆದ ಈ ಜುಗಲ್ಬಂದಿ ಸಂಗೀತ ರಸಿಕರನ್ನು ನಾದ ಸುಧೆಯಲ್ಲಿ ತೇಲಾಡುವಂತೆ ಮಾಡಿತು.

ಇದನ್ನೂ ಓದಿ: Rajendra Bhat Column: ವ್ಹಾ ಉಸ್ತಾದ್! ಝಾಕೀರ್ ಹುಸೇನ್ ನಿಮಗೆ ಸಾಟಿಯೇ ಇಲ್ಲ

ಸಾರಂಗಿ ವಾದಕ ಯೂಜಿ ನಕಗಾವ ಅವರು ಮಾತನಾಡಿ, ನನ್ನ ಗುರುಗಳು ಮುಂಬಯಿಯ ಧ್ರುವ ಘೋಷ್ ಎಂದು ಹೇಳಿದರೆ, ಶಿಗೆರು ಮೊರಿಯಾಮ ಅವರು ಪಂಡಿತ್ ಲಚ್ಚು ಮಹಾರಾಜ್ ಅವರ ಶಿಷ್ಯರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸಂತೂರು ವಾದಕ ಮುಂಬಯಿಯ ರಾಹುಲ್ ಶರ್ಮಾ, ಶಾಸ್ತ್ರಿಯ ಸಂಗೀತಗಾರ್ತಿ ನವದೆಹಲಿಯ ಮಿತ ಪಂಡಿತ್ ಮತ್ತು ಶಾಸ್ತ್ರೀಯ ಸಂಗೀತಗಾರ್ತಿ ಬೆಂಗಳೂರಿನ ಭಾರತಿ ಪ್ರತಾಪ್ ಕಾರ್ಯಕ್ರಮ ನೀಡಿದರು. ಈ ಅಪೂರ್ವ ಸಂಗೀತ ಕೂಟದಲ್ಲಿ ಮಲ್ಹಾರ, ಮಿಯಾನ್ ಕಿ ತೋಡಿ ಮತ್ತು ದರ್ಬಾರಿ ಖನಾಡ ರಾಗಗಳನ್ನು ಕೊಳಲು ವಾದಕ ಪಂಡಿತ್ ರೋನು ಮಜುಂಮ್ದಾರ್ ಮಾರ್ಗದರ್ಶನಲ್ಲಿ ಪ್ರಸ್ತುತಪಡಿಸಿದರು.