ಬೆಂಗಳೂರು: ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ (Assault Case) ಯತ್ನಿಸಿದ ರೌಡಿಶೀಟರ್ (Rowdy Sheeter) ಲೋಕಿ ಎಂಬಾತನ ಕಾಲಿಗೆ ಬೆಂಗಳೂರು ಪೊಲೀಸರು (Bengaluru police) ಗುಂಡು ಹಾರಿಸಿ (Police Firing) ಸೆರೆಹಿಡಿದಿದ್ದಾರೆ.
ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಲೋಕೇಶ್ ಅಲಿಯಾಸ್ ಲೋಕಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ.
ರೌಡಿಶೀಟರ್ ಮನೋಜ್ ಮೇಲೆ ಲೋಕಿ ಗ್ಯಾಂಗ್ ದಾಳಿ ಮಾಡಿತ್ತು. ಘಟನೆ ಬಳಿಕ ಲೋಕಿ ಮತ್ತು ಆತನ ಗ್ಯಾಂಗ್ ತಲೆಮೆರೆಸಿಕೊಂಡಿತ್ತು. ಇಂದು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಲೋಕಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡಿರುವ ರೌಡಿ ಶೀಟರ್ ಲೋಕಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊಬೈಲ್ ಅಂಗಡಿಯ ಶಟರ್ ಮುರಿದು, ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ
ಭಾನುವಾರ ತಡರಾತ್ರಿ ಬೆಂಗಳೂರಿನ ಶಿವಾಜಿನಗರದಲ್ಲಿ ಮೊಬೈಲ್ ಅಂಗಡಿ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ. ಶಿವಾಜಿನಗರದ ಬಳಿ ಇರುವ ವಿಶ್ವಾಸ್ ಕಮ್ಯುನಿಕೇಷನ್ ಎಂಬ ಮೊಬೈಲ್ ಅಂಗಡಿಯ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.
ರಾತ್ರೋರಾತ್ರಿ ಮೊಬೈಲ್ ಅಂಗಡಿ ಲೂಟಿ ಮಾಡಿರುವ ಖದೀಮರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಮುಖ ಕಾಣಬಾರದೆಂದು ಮುಖಕ್ಕೆ ಮಾಸ್ಕ ಧರಿಸಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.