ಮುಂಬೈ: ವಿಶ್ವದ ಅತಿದೊಡ್ಡ ಸ್ಲಂಗಳಲ್ಲಿ ಒಂದಾಗಿರುವ ಧಾರಾವಿಯಲ್ಲಿ ಹುಟ್ಟಿ, ಬೆಳೆದ ಲೆಗ್ ಸ್ಪಿನ್ನರ್ ಸಿಮ್ರಾನ್ ಶೇಖ್(Simran Shaikh) ಭಾನುವಾರ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ(WPL auction) 1.9 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್(Gujarat Giants) ಪಾಲಾಗುವ ಮೂಲಕ ದುಬಾರಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು.
ಬಾಲ್ಯದಲ್ಲಿ ಸ್ಲಂನಲ್ಲಿ ಹುಡುಗರ ಜತೆಗೆ ಕ್ರಿಕೆಟ್ ಆಡಿ ಬೆಳದ ಸಿಮ್ರಾನ್‌ಗೆ ಆರಂಭದಲ್ಲಿ ಕ್ರಿಕೆಟ್ ಆಟಕ್ಕೆ ಮನೆಯಲ್ಲಿ ಬೆಂಬಲವಿರಲಿಲ್ಲ. ಇದಕ್ಕೆ ಕಾರಣ ಕುಟುಂಬದ ಆರ್ಥಿಕ ಸಮಸ್ಯೆ. ಸಿಮ್ರಾನ್ ತಂದೆ ಎಲೆಕ್ಟ್ರಿಷಿಯನ್ ಆಗಿದ್ದರು. ಹೀಗಾಗಿ ಮಗಳ ಕ್ರಿಕೆಟ್ ಮತ್ತು ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಸಿಮ್ರಾನ್ ಅವರ ಕ್ರಿಕೆಟ್ ಜರ್ನಿಗೆ ಮಹತ್ವದ ತಿರುವು ಸಿಕ್ಕಿದ್ದು ಸ್ಥಳೀಯ ಯುನೈಟೆಡ್ ಕ್ರಿಕೆಟರ್ಸ್ ಕ್ಲಬ್ ಸೇರ್ಪಡೆಗೊಂಡ ಬಳಿಕ. ಸಿಮ್ರಾನ್ ಕೌಶಲ್ಯ ಗಮನಿಸಿದ ಕೋಚ್‌ಗಳು ಅವರನ್ನು ಕ್ರಿಕೆಟ್‌ನಲ್ಲಿ ಬೆಳೆಯುವಂತೆ ಮಾಡಿದರು.
ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್ ಹರಾಜಿನಲ್ಲಿ 10 ಲಕ್ಷಕ್ಕೆ ಯುಪಿ ತಂಡ ಸೇರಿದ್ದ ಸಿಮ್ರಾನ್ ಆಡಿದ ಒಂಬತ್ತು ಪಂದ್ಯಗಳಲ್ಲಿಯೂ ವೈಫಲ್ಯ ಕಂಡಿದ್ದರು. ಕೇವಲ 29 ರನ್ ಗಳಿಸಿದ್ದರು. ಹೀಗಾಗಿ 2024ರ ಹರಾಜಿನಲ್ಲಿ ಅವರನ್ನು ಯಾರೂ ಖರೀದಿ ಮಾಡಿರಲಿಲ್ಲ. ಈ ಬಾರಿ ದುಬಾರಿ ಮೊತ್ತವನ್ನು ಜೇಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರಾಜಿನ ಬಳಿಕ ಮಾತನಾಡಿದ 22 ವರ್ಷದ ಸಿಮ್ರಾನ್, “ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಹರಾಜಿನ ಮುನ್ನ ದಿನ ನಾನು ಕೇವಲ ಒಂದು ತಂಡಕ್ಕೆ ಆಯ್ಕೆಯಾಗಲು ಆಶಿಸುತ್ತಿದ್ದೆ. ಬೇಸಿಕ್ ಕ್ರಿಕೆಟ್ ಕಿಟ್ ಖರೀದಿಸಲು ಹರಸಾಹಸ ಪಡುವ ಸಂದರ್ಭಗಳೂ ಇದ್ದವು. ತನಗೆ ಸಿಕ್ಕ ಮೊತ್ತದಲ್ಲಿ ಒಂದೊಳ್ಳೆ ಮನೆ ಖರೀದಿಸಿ ತಂದೆ ಮತ್ತು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವೆ” ಎಂದು ಹೇಳಿದರು.
ಇದನ್ನೂ ಓದಿ WPL 2025: ಮಿನಿ ಹರಾಜಿನ ಬಳಿಕ ಎಲ್ಲ ತಂಡದ ಬಲಾಬಲ ಹೀಗಿದೆ
“ಮುಸ್ಲಿಂ ಕುಟುಂಬದಿಂದ ಬಂದವರು ಮತ್ತು ಹಿಂದುಳಿದವರಾಗಿದ್ದು, ಕ್ರಿಕೆಟ್ ಆಡುವುದು ಸುಲಭದ ಆಯ್ಕೆಯಾಗಿರಲಿಲ್ಲ. ಜನರು ನನ್ನ ತಂದೆಗೆ, ‘ಜಾಹಿದ್, ಕ್ಯಾ ಕರ್ ರಹಾ ಹೈ ತು (ನೀವು ಏನು ಮಾಡುತ್ತಿದ್ದೀರಿ?) ಎಂದು ಹೇಳಿದ್ದು ನನಗೆ ಈಗಲೂ ನೆನಪಿದೆ. ಅವಳು ಘರ್ ಕಾ ಕಾಮ್ (ಮನೆಯ ಕೆಲಸ) ಕಲಿಯುವ ಸಮಯ ಇದು. ಕ್ರೀಡೆ ಅವಳನ್ನು ಎಲ್ಲಿಯೂ ತಲುಪಿಸುವುದಿಲ್ಲ. ನನ್ನ ತಂದೆ ಬಳಿ ಹಣವಿಲ್ಲದಿದ್ದರೂ ನನಗೆ ಎಂದೂ ಕ್ರಿಕೆಟ್ ಆಟವಾಡುವುದನ್ನು ನಿಲ್ಲಿಸಲು ಹೇಳಲಿಲ್ಲ. ಅಂದು ನನ್ನ ಕುಟುಂಬದ ಬಗ್ಗೆ ಕೀಳು ಮಾತನಾಡಿದ ಜನರು ಇಂದು ನಮ್ಮ ಕುಟುಂಬವನ್ನು ಅಭಿನಂದಿಸಲು ಬಂದಿದ್ದಾರೆ” ಎಂದು ಸಿಮ್ರಾನ್ ಶೇಖ್ ಹೇಳಿದರು. ಸಿಮ್ರಾನ್ ಅವರು ಇತ್ತೀಚೆಗೆ ಮುಕ್ತಾಯಗೊಂಡ ಹಿರಿಯ ಮಹಿಳಾ ಟಿ20 ಟ್ರೋಫಿಯಲ್ಲಿ 11 ಪಂದ್ಯಗಳಲ್ಲಿ 176 ರನ್ ಗಳಿಸಿದ್ದರು.
ಗುಜರಾತ್ ಜೈಂಟ್ಸ್: ಬೆತ್ ಮೂನಿ, ಆಶ್ಲೀಗ್ ಗಾರ್ಡ್ನರ್, ಲಾರಾ ವೊಲ್ವಾರ್ಡ್, ದಯಾಲನ್ ಹೇಮಲತಾ, ತನುಜಾ ಕನ್ವರ್, ಶಬ್ನಮ್ ಶಕಿಲ್, ಫೋಬೆ ಲಿಚ್‌ಫೀಲ್ಡ್, ಪ್ರಿಯಾ ಮಿಶ್ರಾ, ತ್ರಿಶಾ ಪೂಜಿತಾ, ಮನ್ನತ್ ಕಶ್ಯಪ್, ಮೇಘನಾ ಸಿಂಗ್, ಸಿಮ್ರಾನ್ ಶೇಖ್, ಡಿಯಾಂಡ್ರಾ ಡಾಟಿನ್, ಪ್ರಕಾಶಿಕಾ ನಾಯಕ್, ಡೇನಿಯಲ್ ಗಿಬ್ಸನ್.