Monday, 16th December 2024

Ustad Zakir Hussain: ಸಂಗೀತ ನಿಲ್ಲಿಸಿದ ಜಾಕೀರ್ ಹುಸೇನ್; ತಬಲಾ ಮಾಂತ್ರಿಕನ ಜೀವನ ಪಯಣ ಹೇಗಿತ್ತು ಗೊತ್ತಾ..?

ನವದೆಹಲಿ: ತಬಲಾ ವಾದನದಿಂದ(Tabla Maestro) ವಿಶ್ವದೆಲ್ಲೆಡೆ ಮನ್ನಣೆಗಳಿಸಿದ ‘ಮಾಂತ್ರಿಕ’ ಜಾಕಿರ್ ಹುಸೇನ್(Ustad Zakir Hussain) ಅವರು ಹೃದಯ ಸಂಬಂಧಿ ಸಮಸ್ಯೆ ತುತ್ತಾಗಿ ಭಾನುವಾರ ರಾತ್ರಿ ಅಮೆರಿಕದಲ್ಲಿ ಇಹಲೋಕ(Death) ತ್ಯಜಿಸಿದ್ದಾರೆ. ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಂಗೀತ ಕ್ಷೇತ್ರಕ್ಕೆ ಜಾಕಿರ್ ಹುಸೇನ್ ಅಪಾರ ಕೊಡುಗೆ ನೀಡಿದ್ದು, ತಬಲದ ಮೇಲೆ ಪಾದರಸದಂತೆ ಹರಿದಾಡುತ್ತಿದ್ದ ಅವರ ಕೈಚಳಕ ಸಂಗೀತಪ್ರಿಯರಿಗೆ ಇನ್ನು ನೆನಪು ಮಾತ್ರ.

ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರನ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದು, ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಸೋಮವಾರ ದೃಢಪಡಿಸಿದೆ. ಈ ಮೊದಲು ಅವರ ಪಿಆರ್​​ಒ ಪಿಆರ್​ಒ ಮೃತಪಟ್ಟಿಲ್ಲ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಭಾನುವಾರ ತಿಳಿಸಿದ್ದರು. ಅಂತಿಮವಾಗಿ ಅವರ ಕುಟುಂಬ ವರ್ಗ ಹುಸೇನ್​ ನಿಧನರಾಗಿದ್ದಾರೆ ಎಂದು ದೃಢಪಡಿಸಿದೆ.

ಮುಂಬೈನಲ್ಲಿ ಜನನ:

ಜಾಕಿರ್ ಹುಸೇನ್ 1951ರ ಮಾರ್ಚ್ 9ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಜನಿಸಿದರು. ಅವರು ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರ. ತಮ್ಮ ತಂದೆಯ ಸಂಗೀತ ಪರಂಪರೆಯನ್ನು ಬಳುವಳಿಯಾಗಿ ಪಡೆದ ಹುಸೇನ್, ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾದರು. ಅವರ ರಕ್ತದಲ್ಲೇ ಸಂಗೀತದೆಡೆಗೆ ಬಲವಾದ ಆಕರ್ಷಕ ಇತ್ತು.

ಹೇಗಿತ್ತು ಬಾಲ್ಯ ಜೀವನ?
ಚಿಕ್ಕ ವಯಸ್ಸಿನಿಂದಲೂ, ಝಾಕೀರ್ ತಬಲಾ ಬಡಿತಗಳ ಸಂಕೀರ್ಣದ ಜಗತ್ತಿನಲ್ಲಿ ಮುಳುಗಿ, ತನ್ನ ತಂದೆಯ ಸಂಗೀತ ಬೋಧನೆಗಳನ್ನು ಹೀರಿಕೊಳ್ಳುತ್ತಾ ವಾದ್ಯದ ಬಗ್ಗೆ ಸಹಜ ತಿಳುವಳಿಕೆಯನ್ನು ಬೆಳೆಸಿಕೊಂಡರು. ಇಬ್ಬರು ಸಹೋದರೊಂದಿಗೆ ತಂದೆಯಿಂದ ವಾದ್ಯ ಕಲಿಯುತ್ತಲೇ ಜಾಕೀರ್ ಹುಸೇನ್ ದೊಡ್ಡವರಾದರು. ಮುಂದೆ ಉಸ್ತಾದ್ ಜಾಕೀರ್ ಹುಸೇನ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸಂಗೀತ ಕಚೇರಿಗಳಲ್ಲಿ ತಬಲಾ ನುಡಿಸಲು ಪ್ರಾರಂಭಿಸಿದರು. ತಮ್ಮ ಕೌಶಲ್ಯ ಮತ್ತು ನಾವೀನ್ಯತೆಯಿಂದ ಅಭೂತಪೂರ್ವ ಜಾಗತಿಕ ಮನ್ನಣೆಗೆ ಪಾತ್ರರಾದರು. 12ನೇ ವಯಸ್ಸಿಗೆ ಬರುವಷ್ಟರಲ್ಲಿ ವೇದಿಕೆ ಕಾರ್ಯಕ್ರಮ ನೀಡುತ್ತಾ ಭಾರತದಾದ್ಯಂತ ಪ್ರದರ್ಶನ ನೀಡಿದರು. ಮಾಹಿಮ್‌ನ ಸೇಂಟ್ ಮೈಕೆಲ್ಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು.

ನೃತ್ಯ ಕಲಾವಿದೆಯನ್ನು ವರಿಸಿದ್ದ ಉಸ್ತಾದ್:
ಖ್ಯಾತ ಕಥಕ್ ನೃತ್ಯ ಕಲಾವಿದೆ ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾದ ಜಾಕಿರ್ ಹುಸೇನ್ ಅವರಿಗೆ ಇಬ್ಬರು ಮಕ್ಕಳು. ಅನಿಸಾ ಮತ್ತು ಇಸಾಬೆಲ್ಲಾ ಇವರ ಹೆಣ್ಣುಮಕ್ಕಳ ಹೆಸರು. ತಬಲಾ ವಾದನ ಸಂಗೀತ ಸಂಯೋಜನೆ ಹೊರತಾಗಿ ಸಾಜ್ ಮತ್ತು ಮಂಕಿ ಮ್ಯಾನ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ವೃತ್ತಿ ಬದುಕು:
ಸಂಗೀತ ಕ್ಷೇತ್ರಕ್ಕೆ ಜಾಕೀರ್ ಹುಸೇನ್ ಅವರ ಪ್ರವೇಶವು, ಒಂದೆರಡು ದಿನದ ಪ್ರಯತ್ನವಲ್ಲ. ತಮ್ಮ ಮೊದಲ ಸಾಗರೋತ್ತರ ಸಂಗೀತ ಕಚೇರಿಗೆ ಕೇವಲ 5 ರೂಗಳನ್ನು ಗಳಿಸಿದ್ದ ಉಸ್ತಾದ್ ಜಾಕಿರ್ ಹುಸೇನ್, ಅಗ್ರ ಸಂಭಾವನೆ ಪಡೆವ ಸಂಗೀತ ವಿದ್ವಾಂಶನಾಗಿ ಬೆಳೆದರು. ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಅವರು, 12 ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ವೈಯಕ್ತಿಕ ಹಾಗೂ ವೃತ್ತಿಬದುಕನ್ನು ಒಮ್ಮೆ ಮೆಲುಕು ಹಾಕೋಣ.

ಸಾಧನೆಯ ಹಾದಿ:
ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಮಗನಾಗಿರುವ ಜಾಕಿರ್​ ಹುಸೇನ್ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು. ಭಾರತ ಸೇರಿದಂತೆ ವಿಶ್ವದಲ್ಲಿಯೇ ತಬಲಾ ವಾದನವನ್ನು ಪ್ರಖ್ಯಾತಿಗೆ ತಂದರು. ಹುಸೇನ್ ತಮ್ಮ ವೃತ್ತಿಜೀವನದಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಮೂರು ಪ್ರಶಸ್ತಿ ಗೆದ್ದಿದ್ದರು.

ಅಲ್ಲದೇ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. 1999ರಲ್ಲಿ ಬಿಡುಗಡೆಯಾದ ಮಲೆಯಾಳಂ ವಾನಪ್ರಸ್ಥಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟರಾಗಿಯೂ ಗಮನಸೆಳೆದಿದ್ದಾರೆ.

ಇಸ್ತಾಂಬುಲ್ ಫಿಲ್ಮ್ ಫೆಸ್ಟಿವಲ್, ಮುಂಬೈ ಫಿಲ್ಮ್ ಫೆಸ್ಟಿವಲ್, ನ್ಯಾಷನಲ್ ಫಿಲ್ಮ್ ಅವಾರ್ಡ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಜಾಕಿರ್ ಹುಸೈನ್‌ಗೆ ಸಂದಿದೆ. 2016ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದಲ್ಲಿ ಆಯೋಜಿಸಿದ ಆಲ್ ಸ್ಟಾರ್ ಗ್ಲೋಬಲ್ ಕಾನ್ಸರ್ಟ್ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ನೀಡಿದ ಹೆಗ್ಗಳಿಗೆ ಜಾಕಿರ್ ಹುಸೈನ್‌ಗಿದೆ. 2018ರಲ್ಲಿ ಜಾಕಿರ್ ಹುಸೈನ್ ಸಾಧನೆ, ತಬಲಾ ಆರಂಭಿಕ ದಿನ ಸೇರಿದಂತೆ ಹಲವು ಕುತೂಹಲಗಳ ಪುಸ್ತಕ ಜಾಕಿರ್ ಹುಸೈನ್, ಎ ಲೈಫ್ ಇನ್ ಮ್ಯೂಸಿಕ್ ಪುಸ್ತಕ ಬಿಡುಗಡೆಯಾಗಿದೆ.

1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಜಾಕಿರ್‌ ಹುಸೇನ್ ಅವರನ್ನು ಅರಸಿ ಬಂದಿವೆ. 1990ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಅವರನ್ನು ಭಾರತದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರಾಗಿ ಮಾಡಿತು. 1999ರಲ್ಲಿ ಆರ್ಟ್ಸ್ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ಕೂಡ ಸಿಕ್ಕಿತ್ತು.

ಜಾಕಿರ್‌ ಅವರು ತಮ್ಮ ಸಂಗೀತ ಕಚೇರಿಗೆ 5ರಿಂದ 10 ಲಕ್ಷ ರೂ. ಪಡೆಯುತ್ತಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಜಾಕಿರ್‌ ಅವರ ಸಂಗೀತ ಕಚೇರಿಗೆ ಭಾರಿ ಬೇಡಿಕೆ ಇತ್ತು. ಇವರ ನಿವ್ವಳ ಮೌಲ್ಯ 1 ಮಿಲಿಯನ್ ಯುಎಸ್‌ ಡಾಲರ್.‌ ಅಂದರೆ ಸರಿಸುಮಾರು 8,48,00,000 ರೂಪಾಯಿ.

ಈ ಸುದ್ದಿಯನ್ನು ಓದಿ; Bigg Boss Telugu: ತೆಲುಗು ಬಿಗ್ ಬಾಸ್ ವಿನ್ನರ್ ಆಗಿ ಕನ್ನಡಿಗ ನಿಖಿಲ್ ಆಯ್ಕೆ