ಜೈಪುರ: ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ರಾಜಸ್ಥಾನದಲ್ಲೂ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ (Rajasthan) ಜೋಧಪುರದಲ್ಲಿ 27 ವರ್ಷದ ವ್ಯಕ್ತಿಯೊಬ್ಬ ಪತ್ನಿ ಕಿರುಕುಳ ತಾಳಲಾರದೆ ತನ್ನ ಸಹೋದರ ಹಾಗೂ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಭನ್ವಾರಿ ದೇವಿ (55) ಮತ್ತು ಅವರ ಮಕ್ಕಳಾದ ನವರತನ್ (27) ಮತ್ತು ಪ್ರದೀಪ್ (24) ಎಂದು ಗುರುತಿಸಲಾಗಿದೆ. (Self Harming)
ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವರತನ್, ಪತ್ನಿ ನೀತು ಸಿಂಗ್ ಅವರು ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೀತು ಹಾಗೂ ಅವರ ಸಹೋದರ, ಚಿಕ್ಕಪ್ಪ ಕಿರುಕುಳ ನೀಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಪೊಲೀಸರು ತಮ್ಮ ಮನೆಯಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ . ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡವು ಮನೆಯಲ್ಲಿ ಬಾಯಿಯಿಂದ ನೊರೆ ಬರುತ್ತಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ನಂತರ, ಹಿರಿಯ ಮಗ ನವರತನ್ ಕಳುಹಿಸಿರುವ ಸಂದೇಶದ ಸ್ಕ್ರೀನ್ಶಾಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೀತು ಸಿಂಗ್ ಹಾಗೂ ಆಕೆಯ ಕುಟುಂಬಸ್ಥರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಜೋಧಪುರ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭ ಮಾಡಿದ್ದಾರೆ. ಮೃತ ಮಹಿಳೆಯ ಪತಿ ಪಂಜಾಬ್ನ ಬಟಿಂಡಾದಲ್ಲಿ ಸ್ನ್ಯಾಕ್ಸ್ ಫ್ಯಾಕ್ಟರಿ ಹೊಂದಿದ್ದು, ಆದರೆ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದರು. ದುರಂತದ ನಂತರ ಕುಟುಂಬವು ಗ್ರಾಮಕ್ಕೆ ಮರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಅತುಲ್ ಸುಭಾಷ್ ಪತ್ನಿ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಭಾಮೈದ ಅನುರಾಗ್ ಸಿಂಘಾನಿಯಾ ಅವರನ್ನು ಮಾರತ್ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯವು ಆ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅತುಲ್ ಸುಭಾಷ್ರ ಸಹೋದರ ಬಿಕಾಸ್ಕುಮಾರ್ ಅವರ ದೂರು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಮಾರತ್ಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಉತ್ತರಪ್ರದೇಶಕ್ಕೆ ಹೋಗಿದ್ದರು. ಅಷ್ಟರಲ್ಲಿಆರೋಪಿಗಳು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು. ನಂತರ ಮಾರತ್ಹಳ್ಳಿ ಪೊಲೀಸರು, ಸ್ಥಳೀಯ ಪೊಲೀಸರ ನೆರವು ಪಡೆದು ಡಿ.12ರಂದು ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳ ಮನೆಗೆ ನೋಟಿಸ್ ನೀಡಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸುದ್ದಿಯನ್ನೂ ಓದಿ : Bengaluru Techie: ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಕೇಸ್- ಅತುಲ್ ಪತ್ನಿನಿಖಿತಾ, ಆಕೆಯ ತಾಯಿ ಮತ್ತು ಸಹೋದರ ಅರೆಸ್ಟ್