ಬ್ರಿಸ್ಬೇನ್: ಜನಾಂಗೀಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ, ನಿರೂಪಕಿ ಇಶಾ ಗುಹಾ(Isa Guha) ಅವರು ಸೋಮವಾರ ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಅವರ ಕ್ಷಮೆ ಕೋರಿದ್ದಾರೆ(Isa Guha Apologises). ಭಾನುವಾರದ ದ್ವಿತೀಯ ದಿನದಾಟದ ವೇಳೆ ಜಸ್‌ಪ್ರೀತ್ ಬುಮ್ರಾ ಆಸೀಸ್ ವಿಕೆಟ್ ಬೇಟೆಯಾಡುತ್ತಿರುವ ವೇಳೆ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ ಪ್ರೈಮೇಟ್ (ವಾನರ, ಸಸ್ತನಿ ಪ್ರಾಣಿ) ಎಂದು ಕರೆದರು. ಇದು ವಿವಾದಕದ್ಕೆ ಕಾರಣವಾಗಿತ್ತು. ಇದೀಗ ಇಶಾ ಗುಹಾ ಕ್ಷಮೆ ಯಾಚಿಸಿದ್ದಾರೆ.
ʼನಾನು ಜಸ್‌ಪ್ರೀತ್ ಬುಮ್ರಾ ಬಳಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಉದ್ದೇಶಪೂರ್ವಕವಾಗಿ, ಅಥವಾ ನಿಮ್ಮನ್ನು ನಿಂದಸಬೇಕು ಎಂದು ಆಡಿದ ಮಾತುಗಳಲ್ಲ. ಮಾತಿನ ಬರದಲ್ಲಿ ಅಚಾನಕ್ ಆಗಿ ಈ ಪದ ಹೇಳಿ ಹೋಯಿತುʼ ಎಂದು ಸೋಮವಾರ ಲೈವ್ ಕಾಮೆಂಟ್ರಿ ವೇಳೆ ಬಹಿರಂಗವಾಗಿಯೇ ಕ್ಷಮೆಯಾಚಿಸಿದರು.
“ನಾನು ಬುಮ್ರಾ ಅವರ ಸಾಧನೆಯ ಅಗಾಧತೆಯನ್ನು ಹೇಳಲು ಪ್ರಯತ್ನಿಸುತ್ತಿದ್ದೆ ಮತ್ತು ನಾನು ತಪ್ಪು ಪದವನ್ನು ಆಯ್ಕೆ ಮಾಡಿದ್ದೇನೆ ಮತ್ತು ಅದಕ್ಕಾಗಿ, ನಾನು ತೀವ್ರವಾಗಿ ಕ್ಷಮೆಯಾಚಿಸುತ್ತೇನೆ. ದಕ್ಷಿಣ ಏಷ್ಯಾದ ಪರಂಪರೆಯನ್ನು ಹೊಂದಿರುವ ವ್ಯಕ್ತಿಯಾಗಿ ನಾನು ಬೇರೆ ಯಾವುದೇ ಉದ್ದೇಶ ಅಥವಾ ದುರುದ್ದೇಶವಿಲ್ಲದೆ ಈ ಪದ ಬಳಕೆ ಮಾಡಿರಬಹುದು ಎಂದು ಜನರು ನನ್ನನ್ನು ಕ್ಷಮಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಗುಹಾ ಹೇಳಿದರು.
ಇಶಾ ಗುಹಾ ಅವರು ಮೂಲತಃ ಭಾರತದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್ ಪ್ರತಿನಿಧಿಸಿದ್ದ ಭಾರತೀಯ ಮೂಲದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ. ಇಶಾ ಪೋಷಕರು ಕೋಲ್ಕತ್ತಾದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಸ್ಥಳಾಂತರಗೊಂಡಿದ್ದರು. ಇಶಾ ಗುಹಾ ಮೇ 1985ರಲ್ಲಿ ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಜನಿಸಿದರು.
ಇಶಾ ಗುಹಾ ಬಲಗೈ ವೇಗಿ. 2001ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮಾರ್ಚ್ 2012 ರಲ್ಲಿ ನಿವೃತ್ತಿ ಘೋಷಿಸಿದರು. 83 ಏಕದಿನ ಪಂದ್ಯಗಳಲ್ಲಿ 101 ವಿಕೆಟ್ ಹಾಗೂ 22 ಟಿ20 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. 8 ಟೆಸ್ಟ್‌ಗಳಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಕ್ರಿಕೆಟ್ ನಿವೃತ್ತಿ ಬಳಿಕ ಇಶಾ ಗುಹಾ ಟಿವಿ ನಿರೂಪಕರಾಗಿ ಮತ್ತು ರೇಡಿಯೋ ಪ್ರಸಾರಕರಾಗಿ ಕೆಲಸ ಮಾಡುತ್ತಿದ್ದಾರೆ.