Monday, 16th December 2024

Nehru’s Letters: ನೆಹರು ಪತ್ರಗಳನ್ನು ಹಿಂದಿರುಗಿಸುವಂತೆ ರಾಹುಲ್‌ ಗಾಂಧಿಗೆ ಕೇಂದ್ರ ಸರ್ಕಾರ ಸೂಚನೆ

Nehru's Letters

ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (Nehru’s Letters) ಅವರಿಗೆ ಸೇರಿದ ಐತಿಹಾಸಿಕ ಪತ್ರಗಳ ಸಂಗ್ರಹವನ್ನು ಹಿಂದಿರುಗಿಸುವಂತೆ ಪ್ರಧಾನ ಮಂತ್ರಿ ಮ್ಯೂಸಿಯಂ ಮತ್ತು ಲೈಬ್ರರಿ (PMML) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಮನವಿ ಮಾಡಿದೆ. ಈ ಪತ್ರಗಳನ್ನು 2008ರಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರ (Sonia Gandhi) ಕೋರಿಕೆಯ ಮೇರೆಗೆ ಸಾರ್ವಜನಿಕ ಪ್ರದರ್ಶನದಿಂದ ತೆಗೆದುಹಾಕಲಾಯಿತ್ತು. ನಂತರ ಅದನ್ನು ಅವರ ವಶಕ್ಕೆ ನೀಡಲಾಗಿತ್ತು.

1971ರಲ್ಲಿ ಜವಾಹರಲಾಲ್ ನೆಹರು ಸ್ಮಾರಕ ನಿಧಿಯಿಂದ, ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ (NMML) ಈ ಪತ್ರಗಳು ವರ್ಗಾವಣೆ ಗೊಂಡಿದ್ದವು. ವರ್ಗಾಯಿಸಲ್ಪಟ್ಟ ಈ ಸಂಗ್ರಹವು 51 ಪೆಟ್ಟಿಗೆಗಳನ್ನು ಒಳಗೊಂಡಿದೆ.

ಪತ್ರಗಳು 20 ನೇ ಶತಮಾನದ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನಿ ನೆಹರು ವಿನಿಮಯ ಮಾಡಿಕೊಂಡ ವೈಯಕ್ತಿಕ ಹಾಗೂ ವ್ಯವಹಾರ ಪತ್ರಗಳನ್ನು ಒಳಗೊಂಡಿದೆ. ಅವುಗಳಲ್ಲಿ ಆಲ್ಬರ್ಟ್ ಐನ್ಸ್ಟೈನ್, ಜಯಪ್ರಕಾಶ್ ನಾರಾಯಣ್, ಎಡ್ವಿನಾ ಮೌಂಟ್ಬ್ಯಾಟನ್, ಪದ್ಮಜಾ ನಾಯ್ಡು, ವಿಜಯ ಲಕ್ಷ್ಮಿ ಪಂಡಿತ್, ಅರುಣಾ ಅಸಫ್ ಅಲಿ ಮತ್ತು ಬಾಬು ಜಗಜೀವನ್ ರಾಮ್ ಅವರಿಗೆ ಬರೆದ ಪತ್ರಗಳಿವೆ. ಈ ಪತ್ರಗಳನ್ನು ಹಿಂದಿರುಗಿಸುವಂತೆ ಕೋರಿರುವ ಪಿಎಂಎಂಎಲ್ , ಈ ದಾಖಲೆಗಳು ನೆಹರು ಕುಟುಂಬಕ್ಕೆ ವೈಯಕ್ತಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದಾಗ್ಯೂ, ಈ ಐತಿಹಾಸಿಕ ವಸ್ತುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವುದರಿಂದ ವಿದ್ವಾಂಸರು ಮತ್ತು ಸಂಶೋಧಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ ಎಂದು ವಿನಂತಿಸಿದೆ.

2024 ರ ಸೆಪ್ಟೆಂಬರ್‌ನಲ್ಲಿ ಪಿಎಂಎಂಎಲ್ ಪತ್ರವೊಂದನ್ನು ಬರೆದಿತ್ತು. ನೆಹರು ಅವರ ಸಂಗ್ರಹಗಳ ಭಾಗವಾಗಿದ್ದ ಸರಿಸುಮಾರು ಎಂಟು ವಿಭಿನ್ನ ವಿಭಾಗಗಳ 51 ವ್ಯಂಗ್ಯಚಿತ್ರಗಳನ್ನು ಸಂಸ್ಥೆಗೆ ಹಿಂತಿರುಗಿಸಬೇಕು ಇಲ್ಲವೇ ಅದನ್ನು ಡಿಜಿಟಲೀಕರಣ ಮಾಡಲು ವಿನಂತಿಸಿಕೊಳ್ಳಲಾಗಿತ್ತು. ಚಿತ್ರಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಒದಗಿಸಲಾಗಿಸಿದರೆ ಅವುಗಳನ್ನು ಅಧ್ಯಯನ ಮಾಡಲು ಮತ್ತು ವಿವಿಧ ವಿದ್ವಾಂಸರಿಂದ ಸಂಶೋಧನೆಗೆ ಅನುಕೂಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಿಎಂಎಂಎಲ್ ಸೊಸೈಟಿಯ 29 ಸದಸ್ಯರಲ್ಲಿ ಒಬ್ಬರಾದ ಇತಿಹಾಸಕಾರ ಮತ್ತು ಲೇಖಕ ರಿಜ್ವಾನ್ ಕದ್ರಿ ಹೇಳಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ, ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಗುರುತಿಸಲು ಎನ್‌ಎಮ್‌ಎಲ್‌ಅನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಯಿತು.

ಈ ಸುದ್ದಿಯನ್ನೂ ಓದಿ : Rahul Gandhi : ಲೋಕಸಭೆಯಲ್ಲಿ ಸಾವರ್ಕರ್‌ ವಿಷಯ ಉಲ್ಲೇಖಿಸಿ ರಾಹುಲ್‌ ಗಾಂಧಿ ವಾಗ್ದಾಳಿ!