ಬೆಂಗಳೂರು: ಬೆಂಗಳೂರು- ಮಂಗಳೂರು (Bengaluru- Mangaluru Highway) ನಡುವಿನ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India) ಮತ್ತೊಂದು ಶಾಕ್ ನೀಡಿದೆ. ಡಿಸೆಂಬರ್ 16ರಿಂದ ಬೆಂಗಳೂರು ಹಾಗೂ ಕರಾವಳಿ ನಡುವೆ ಸಂಚಾರ ಮಾಡುವವರಿಗೆ ಹೊಸ ಟೋಲ್ ಶುಲ್ಕದ (Toll Collection) ಬರೆ ಹಾಕಲಾರಂಭಿಸಲಾಗಿದೆ.
ಎನ್ಹೆಚ್ಎಐ ಇದೀಗ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚೌಳಗೆರೆ ಎನ್ನುವ ಪ್ರದೇಶದಲ್ಲಿ ಇಂದಿನಿಂದ (ಡಿಸೆಂಬರ್ 16 ಸೋಮವಾರ) ಟೋಲ್ ಸಂಗ್ರಹ ಆರಂಭಿಸಿದೆ. ಆದರೆ, ಈ ಹೊಸ ಟೋಲ್ ಮಾರ್ಗದಲ್ಲಿ ಕಾಮಗಾರಿಯೇ ಪೂರ್ಣವಾಗಿಲ್ಲ. ಹೀಗಿರುವಾಗಲೇ ಕಾಮಗಾರಿ ಆರಂಭಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಭಾರೀ ವಿರೋಧದ ನಡುವೆಯೂ ಟೋಲ್ ಸಂಗ್ರಹ ಮುಂದುವರಿದಿದೆ.
ಟೋಲ್ ಸಂಗ್ರಹಕ್ಕೆ ಸ್ಥಳೀಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಸಕಲೇಶಪುರದ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ರಸ್ತೆಯನ್ನೇ ದುರಸ್ತಿ ಮಾಡಿಲ್ಲ. ಈ ರೀತಿ ಕಳಪೆ ರಸ್ತೆ ಇರುವಾಗ ಯಾವ ರೀತಿ ಶುಲ್ಕ ಸಂಗ್ರಹ ಮಾಡುತ್ತೀರಿ ಎಂದು ದೂರಿದ್ದಾರೆ. ಇದರ ನಡುವೆಯೂ ಸೋಮವಾರದಿಂದ ಶುಲ್ಕ ಸಂಗ್ರಹ ಪ್ರಾರಂಭವಾಗಿದೆ. ಜನರ ಪ್ರತಿಭಟನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕ್ಯಾರೇ ಎಂದಿಲ್ಲ.
ವಿರೋಧವೇಕೆ?
ಹಾಸನ ಜಿಲ್ಲೆಯ ಶಾಂತಿಗ್ರಾಮ ಭಾಗದಲ್ಲಿ ಒಂದು ಟೋಲ್ ಈಗಾಗಲೇ ಇದೆ. ಇದರಿಂದ ಅಂದಾಜು 30 ಕಿ. ಮೀ. ದೂರದಲ್ಲೇ ಮತ್ತೊಂದು ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗಿದೆ. ಇದನ್ನು ಸೋಮವಾರ ಉದ್ಘಾಟಿಸಲಾಗಿದೆ. ನಿಯಮಾವಳಿ ಪ್ರಕಾರ ಪ್ರತಿ 50ರಿಂದ 60 ಕಿಮೀ ಅಂತರದಲ್ಲಿ ಸುಂಕ ವಸೂಲಿ ಕೇಂದ್ರ ಇರಬೇಕು. ಶಾಂತಿಗ್ರಾಮ ಸುಂಕ ವಸೂಲಿ ಕೇಂದ್ರಕ್ಕೂ ಆಲೂರು ತಾಲ್ಲೂಕಿನ ಚೌಲಗೆರೆ ಬಳಿಯ ಟೋಲ್ಗೂ ಕೇವಲ 30 ಕಿಮೀ ದೂರ ಇದೆ. ನಿಯಮ ಮೀರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.
ಕಾರಿಗೆ 50 ರೂ. ವಾಪಸ್ ಬಂದರೆ 75 ರೂ. ಮಿನಿ ಲಾರಿ, ಬಸ್ಗೆ ಒಂದು ಕಡೆಗೆ 80 ರೂ. ಎರಡು ಕಡೆಗೆ 120 ರೂ. ಬಸ್ಗಳಿಗೆ ಒಂದು ಕಡೆಗೆ 165 ರೂ. ಎರಡು ಕಡೆಗೆ 245 ರೂ. ಟ್ರಕ್, ಟ್ಯಾಂಕರ್ಗಳಿಗೆ ಒಂದು ಕಡೆಗೆ 180 ರೂ. ಎರಡು ಕಡೆಗೆ 270 ರೂ. ಕಂಟೇನರ್ಗಳಿಗೆ ಒಂದು ಕಡೆಗೆ 260 ರೂ. ಎರಡು ಕಡೆಗೆ 385 ರೂ. ನಿಗದಿ ಮಾಡಲಾಗಿದ್ದು ವಾಹನ ಸವಾರರಿಗೆ ಹೊರೆಯಾಗಲಿದೆ ಎಂದು ಪ್ರತಿಭಟನಾಕಾರರು ಸಿಟ್ಟು ಹೊರಹಾಕಿದ್ದಾರೆ.
ಇದನ್ನೂ ಓದಿ: ನೆಲಮಂಗಲ ಟೋಲ್ಗೇಟ್ ಬಳಿ ಸಂಚಾರ ದಟ್ಟಣೆ