Monday, 16th December 2024

Sambhal Temple: 45 ವರ್ಷಗಳ ಬಳಿಕ ತೆರೆದ ಸಂಭಾಲ್‌ ದೇವಾಲಯ-ದೇವರ ವಿಗ್ರಹಗಳು ಪತ್ತೆ; ಉತ್ಖನನ ಕಾರ್ಯ ಇನ್ನಷ್ಟು ಚುರುಕು

Sambhal Temple

ಲಖನೌ: ಉತ್ತರ ಪ್ರದೇಶದ ( Uttar Pradesh) ಸಂಭಾಲ್‌ನಲ್ಲಿ ಶನಿವಾರ ಸುಮಾರು 45 ವರ್ಷಗಳ ಬಳಿಕ ಪುನಃ ಪುರಾತನ ಹಿಂದೂ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಸೋಮವಾರ ದೇವಾಲಯದ (Sambhal Temple) ಬಳಿ ಅಧಿಕಾರಿಗಳಿಗೆ ಮೂರು ವಿಗ್ರಹಗಳು ದೊರಕಿವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಶ್ರೀಶ್ ಚಂದ್ರ ದೊರೆಕಿರುವ ವಿಗ್ರಹಗಳು ಹಾನಿಗೊಂಡಿವೆ. ಅದರಲ್ಲಿ ಒಂದು ಗಣೇಶನ ವಿಗ್ರಹವಿದ್ದು, ಇನ್ನೊಂದು ಕಾರ್ತಿಕೇಯನ ವಿಗ್ರಹವಾಗಿದೆ. ಹೆಚ್ಚಿನ ವಿವರಗಳನ್ನು ಹುಡುಕಲಾಗುತ್ತಿದೆ. ಬಾವಿಯಲ್ಲಿ ಕಸ ಮತ್ತು ಮಣ್ಣು ಇತ್ತು. ಅದನ್ನು ಅಗೆದಾಗ ವಿಗ್ರಹಗಳು ಪತ್ತೆಯಾಗಿವೆ ಉತ್ಖನನವನ್ನು ಸುಗಮವಾಗಿ ನಡೆಸಲು ಆ ಪ್ರದೇಶವನ್ನು ಭದ್ರಪಡಿಸಲಾಗಿದೆ ಎಂದು ಅವರು ಹೇಳಿದರು.

ನವೆಂಬರ್ 24 ರಂದು ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯ ಸರ್ವೇ ವೇಳೆ ಹಿಂಸಾಚಾರ ಭುಗಿಲೆದ್ದ ನಂತರ ಉದ್ವಿಗ್ನವಾಗಿದ್ದ ಸಂಭಾಲ್‌ನಲ್ಲಿ ಈ ದೇವಾಲಯ ಪತ್ತೆಯಾಗಿತ್ತು.
 ಹೊಸದಾಗಿ ಪತ್ತೆಯಾದ ದೇವಾಲಯದ ಗೋಡೆಗಳ ಮೇಲೆ ಸೋಮವಾರ ಭಕ್ತರು ‘ಓಂ ನಮಃ ಶಿವಾಯ’ ಮತ್ತು ‘ಹರಹರ ಮಹಾದೇವ’ ಘೋಷಣೆಗಳನ್ನು ಬರೆದಿದ್ದಾರೆ.

ದೇವಾಲಯದ ಪುನರಾರಂಭದ ನಂತರ, ಅದರ ಆವರಣವನ್ನು ಮತ್ತಷ್ಟು ಸ್ವಚ್ಛಗೊಳಿಸಲಾಗಿದೆ. ವಿದ್ಯುತ್‌ ಸಂಪರ್ಕಗಳನ್ನು ಒದಗಿಸಿ ಭದ್ರತೆಗಾಗಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಭಾನುವಾರ, ಸಂಭಾಲ್‌ನ ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್ ಮತ್ತು ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಅವರು ಹೊಸದಾಗಿ ತೆರೆದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಂಭಾಲ್‌ ಪ್ರದೇಶದಲ್ಲಿ ವಿದ್ಯುತ್‌ ಕಳ್ಳತನ ನಡೆಯುತ್ತಿದ್ದು, ಕಳ್ಳತನದ ವಿರುದ್ಧ ಅಭಿಯಾನದ ನೇತೃತ್ವ ವಹಿಸಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ವಂದನಾ ಮಿಶ್ರಾ ಅವರು ಈ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದಾಗ ದೇವಸ್ಥಾನವನ್ನು ನೋಡಿ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ನಂತರ ಸ್ಥಳೀಯ ಹಿಂದೂಗಳ ಸಹಕಾರದಿಂದ ದೇವಾಲಯದ ಬಾಗಿಲನ್ನು ತೆರೆದಿದ್ದಾರೆ.

ಈ ಸುದ್ದಿಯನ್ನೂ ಓದಿ : Sambhal Violence: ಸಂಭಾಲ್‌ ಹಿಂಸಾಚಾರ; ದಂಗೆಕೋರರ ಫೋಟೊ ಬೀದಿ ಬೀದಿಗಳಲ್ಲಿ ಪ್ರಕಟ-ಗಲಭೆಕೋರರಿಂದಲೇ ನಷ್ಟ ವಸೂಲಿ!