Monday, 16th December 2024

Relationship Tips: ಕೂಡು ಕುಟುಂಬದಲ್ಲಿ ಸಂಗಾತಿ ಜತೆ ಪ್ರೈವಸಿ ಸಿಗುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ!

lifestyle

ನವದೆಹಲಿ: ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಹೊಸ ಬದುಕಿನ ಪಯಣಕ್ಕೆ ಮುನ್ನುಡಿ ಇದ್ದಂತೆ. ಹೆಣ್ಣಿನ ಬದುಕಲ್ಲಿ ತವರು ಮನೆ ಎಂಬ ಬಾಂಧವ್ಯ ಎಚ್ಚೆತ್ತುಕೊಳ್ಳುವುದೇ ಈ ಸಂದರ್ಭದಲ್ಲಿ. ಗಂಡಿಗೆ ಹೊಸ ಜವಾಬ್ದಾರಿಯೊಂದಿಗೆ ಕುಟುಂಬ ನಿರ್ವಹಣೆಗೆ ವಿಶೇಷ ಕಾಳಜಿ, ತನ್ನನ್ನು ಅರಸಿ ಬಂದಾಕೆಯ ಬೇಕು ಬೇಡಗಳ ಎಲ್ಲದರ ಜೊತೆ ಜೀವನದ ಪಯಣ ಸಾಗಿಸುವುದೇ ದೊಡ್ಡ ಸವಾಲು. ಇತ್ತೀಚೆಗೆ ಈ ಸವಾಲು ಗೆದ್ದವರಿಗಿಂತಲೂ ಸೋತವರೇ ಹೆಚ್ಚು(Relationship Tips). ದಾಂಪತ್ಯ ಜೀವನಕ್ಕೆ ಕಾಲಿಡುತ್ತಲೇ ತಿಂಗಳು ಕಳೆಯುವುದರಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುವ ಪರಿಪಾಠ ಉಂಟಾಗಿರುವುದು ವಿಷಾದನೀಯ. ಆದರೆ ಸುಖ ಸಂಸಾರದಲ್ಲಿ ಇರಬಯಸುವವರು ದಾಂಪತ್ಯ ಜೀವನದಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೆ ಆದ್ಯತೆ ನೀಡುವ ಜತೆಗೆ ಕೆಲವೊಂದಿಷ್ಟು ಜೀವನ ಮೌಲ್ಯವನ್ನು ಪಾಲಿಸುವುದು ಅಗತ್ಯವಾಗಿದೆ.

happy indian couple, romance

ಮದುವೆಯಾದ ಹೊಸತರಲ್ಲಿ ಇರುವ ಆಕರ್ಷಣೆ ಬರಬರುತ್ತಾ ಕ್ಷೀಣಿಸುತಿದೆ, ತುಂಬು ಕುಟುಂಬದಲ್ಲಿ ಪ್ರೈವಸಿ (ಖಾಸಗಿತನ) ಕಡಿಮೆ. ಹಾಗಾಗಿ ಸರಸ ಸಂದರ್ಭಗಳಿಗೆ ಅವಕಾಶವೇ ಸಿಗುತ್ತಿಲ್ಲ, ನನ್ನನ್ನು ನನ್ನ ಸಂಗಾತಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವವರು ನಿಮ್ಮಿಂದ ಇದಕ್ಕೆ ಪರಿಹಾರ ಸಿಗಬಹುದೇ ಎಂಬ ಯೋಚನೆ ಮಾಡಬೇಕು. ನಿಮ್ಮೆಲ್ಲ ಆಸೆ ಆಕಾಂಕ್ಷೆ ಕಾಮನೆಗಳನ್ನು ಬಚ್ಚಿಡುವ ಬದಲು ಕುಟುಂಬದಲ್ಲಿ ಆಧ್ಯತೆ ನೀಡಲು ತುಸು ಬುದ್ಧಿವಂತಿಕೆ ಖರ್ಚು ಮಾಡಿದರೆ ಕೂಡು ಕುಟುಂಬದಲ್ಲಿಯೂ ಸುಖಿ ಸಂಸಾರ ನಿಮ್ಮದಾಗಲಿದೆ.

ಏನು ಮಾಡಬಹುದು?

  • ನಿಮ್ಮ ಸಂಗಾತಿಯ ಮನೋ ಕಾಮನೆಗಳನ್ನು ಮೊದಲು ಅರ್ಥೈಸಿಕೊಳ್ಳಿ.
  • ಸಂಗಾತಿಗೆ ಸಮಯ ಮೀಸಲಿಟ್ಟು ನೈಟ್ ರೈಡ್, ಮೂನ್ ವಾಕ್ (ಬೆಳದಿಂಗಳ ಬೆಳಕಲ್ಲಿ ವಾಕಿಂಗ್ ಹೋಗುವುದು), ಸಿನೆಮಾ ನೋಡುವುದು ಇಂತಹ ಅನೇಕ ಸಣ್ಣ ಪುಟ್ಟ ಕನಸುಗಳಿಗೆ ಬೆಂಬಲಿಗರಾಗಿ.
  • ಕೌಟುಂಬಿಕ ಜೀವನದಲ್ಲಿ ದಾಂಪತ್ಯ ಗೌಪ್ಯತೆ ಕಾಪಾಡುವುದು ಬಹಳ ಮುಖ್ಯ. ಒಮ್ಮೊಮ್ಮೆ ಹೇಳಬಾರದ ವಿಚಾರ ಗುಟ್ಟು ರಟ್ಟಾಗಿ ಮುಜುಗರಗೊಳ್ಳುವ ಮೊದಲು ಯೋಚಿಸಿ
  • ಮಕ್ಕಳಾಗಿದೆ ಎಂಬ ಕಾರಣಕ್ಕೆ ಪ್ರಣಯಕ್ಕೆ ಒಲ್ಲೆ ಎನ್ನುವ ಅಗತ್ಯ ಇಲ್ಲ. ಕುಟುಂಬ ಜವಾಬ್ದಾರಿಗಳ ಜೊತೆಗೆ ನಿಮ್ಮ ವೈಯಕ್ತಿಕ ಬದುಕು ರೂಪಿಸಲು ವಿಶೇಷ ಕಾಳಜಿ ವಹಿಸುವುದು ಅಗತ್ಯ.
  • ದೈಹಿಕ ಅನ್ಯೋನ್ಯತೆ ಜೊತೆಗೆ ಭಾವನಾತ್ಮಕವಾಗಿ ಅನ್ಯೋನ್ಯ ವಾಗಿರುವುದು ಬಹಳ ಮುಖ್ಯ ಈ ನಿಟ್ಟಿನಲ್ಲಿ ನಿಮ್ಮ ಸಂಗಾತಿಯನ್ನು ನೀವು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿದ್ದೀರಿ ಎಂಬುದನ್ನು ಅವಲೋಕಿಸಬೇಕು.
  • ಸಂಸಾರವೆಂಬ ಬಂಡಿಯ ಪಯಣದಲ್ಲಿ ದೈನಿಕ ಬದುಕಿನಲ್ಲಿ ಪ್ರಣಯಕ್ಕೆ ಕೊನೆ ಸೀಟ್ ಮೀಸಲಾಗಿಸುವ ಬದಲು ಸರಿಯಾಗಿ ಸಂಸಾರದ ಜವಬ್ದಾರಿ ನಿರ್ವಹಿಸುವ ಜೊತೆಗೆ ಪ್ರಣಯ (ರೊಮ್ಯಾಂಟಿಕ್) ಅಂಶಗಳಿಗೂ ಆದ್ಯತೆ ನೀಡುವಂತಾಗಲಿ.

ಅಪ್ಪುಗೆಯ ಸ್ಪರ್ಷ ಬೇಕಿದೆ?

ಎಷ್ಟೊ ಸಂದರ್ಭದಲ್ಲಿ ಮನೆ, ಮಕ್ಕಳು ಎಂಬ ವಿಚಾರಕ್ಕೆ ವಿರಸ ಬರುವುದಿದೆ. ಅತ್ತೆ ಮಾವನ ಆರೈಕೆ , ಮಕ್ಕಳ ಪಾಲನೆ ಇದರಲ್ಲೇ ಜೀವನವಾಯ್ತು ಎಂಬ ದಂಪತಿಗಳು ಪರಸ್ಪರ ಜೊತೆ ಕೂತು ಮಾತನಾಡದೇ ವರ್ಷವೇ ಸಂದಿರಬಹುದು. ಗಂಡನು ಹೊರಪ್ರಪಂಚದ ಬಗ್ಗೆ ಹೆಂಡತಿ ಬಳಿ ಏನು ಮಾತಾಡುದಿದೆ ಎಂಬ ಅಸಡ್ಡೆ, ಹೆಂಡತಿಗೆ ಅಡುಗೆ ಮನೆ ವಿಚಾರ ಇವರ ಬಳಿ ಹೇಳುವುದೇನಿದೆ ಎಂಬ ಧೋರಣೆಗಳೇ ಇಬ್ಬರ ನಡುವೆ ಬಾಂಧವ್ಯ ಬೆಸುಗೆಗೆ ತೊಂದರೆ ತಂದೊಡ್ಡುತ್ತಿದೆ. ಸತಿ ಪತಿಗಳು ಕೂತು ಮಾತಾಡುವ ಜೊತೆಗೆ ಜೀವನದಲ್ಲಿ ಎಲ್ಲ ಏಳು ಬೀಳಿನಲ್ಲಿ ಸದಾ ಜೊತೆಯಾಗಿರುತ್ತೇವೆ ಎಂಬ ಅಪ್ಪುಗೆಯ ಸ್ಪರ್ಷ ವಿನಿಮಯ ಆಗಲು ಅವಕಾಶ ನೀಡಬೇಕಿದೆ.

ನಿರೀಕ್ಷೆ ವ್ಯಕ್ತಪಡಿಸಿ

ಗಂಡ ಹೆಂಡತಿ ತಮ್ಮ ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸುವಂತಿರಬೇಕು. ಇಂತಹ ನಿರೀಕ್ಷೆಗಳ ಇಡೇರಿಕೆಯ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ಪ್ರಣಯವನ್ನು ಜೀವಂತವಾಗಿಸಿ. ಗಿಫ್ಟ್ ನೀಡುವುದು, ಕ್ಯಾಂಡಲ್ ಲೈಟ್ ಡಿನ್ನರ್ ಇನ್ನಿತರ ಸಿಹಿಯ ಕ್ಷಣಗಳನ್ನು ಕಳೆಯಲು ಬೇಕಾದ ತಯಾರಿ ಮಾಡಿಕೊಳ್ಳಬೇಕು. ದಂಪತಿಗಳು ಪರಸ್ಪರ ಕುಟುಂಬವನ್ನು ಗೌರವಯುತವಾಗಿ ಕಾಣುವುದು ಬಹಳ ಮುಖ್ಯ. ಮನೆಯಲ್ಲಿಯೂ ನಿಮ್ಮ ಸಂಗಾತಿಗಾಗಿ ಜಾಗ ಮೀಸಲಿಟ್ಟು ಅಂದರೆ ಲಿವಿಂಗ್ ರೂಂ, ಟೆರೇಸ್ ಗಾರ್ಡನ್ ಇತರ ಸ್ಥಳಗಳಲ್ಲಿ ಭೇಟಿಯಾಗಿ. ಎಲ್ಲರೂ ಮಲಗಿದ್ದ ಬಳಿಕ ಮುಕ್ತವಾಗಿ ಮಾತನಾಡಿ, ಹರಟೆ ಮಾಡಿ ಪರಸ್ಪರ ನಗಿಸುತ್ತಾ ಜೀವನ ಸಾಗಿಸಬೇಕು.

ಸಂಗಾತಿಗೂ ಸಮಯಬೇಕು

ಮನೆಯಲ್ಲಿ ಸ್ಥಳಾವಕಾಶ ಸಮಸ್ಯೆ ಇದ್ದಂತಹ ಸಂದರ್ಭದಲ್ಲಿ ಹೊರಗೆ ಪಿಕ್ ನಿಕ್ ಇತರ ಏರ್ಪಾಡು ಮಾಡಬಹುದು. ಅದರೊಂದಿಗೆ ಸಂಗಾತಿಗಾಗಿ ಪ್ರತ್ಯೇಕ ಸಮಯ ಎಲ್ಲ ಸಂದರ್ಭದಲ್ಲಿ ಮೀಸಲಿಡುವುದು ಸುಖಿ ಸಂಸಾರದ ಬಹಳ ದೊಡ್ಡ ಬುನಾದಿ ಆಗಲಿದೆ.

ಮುಜುಗರ ಬೇಡ

ಕುಟುಂಬದಲ್ಲಿ ವಾಸಿಸುವಾಗ ಮುಜುಗರವಾಗುವುದು ಸಹಜ. ಆದರೆ ಎಲ್ಲಾ ಸಂದರ್ಭದಲ್ಲಿ ಪ್ರೀತಿ ಬಚ್ಚಿಡುವ ಅಗತ್ಯ ಇರಲಾರದು. ಕೈಗಳನ್ನು ಹಿಡಿಯುವುದು, ಅವರ ತೋಳಲ್ಲಿ ಮಲಗಿ ಸಿನೆಮಾ ನೋಡುವುದು, ಅಪ್ಪಿಕೊಂಡು ವಿಶ್ ಮಾಡುವುದು ಇಂತವುಗಳಲ್ಲಿ ಮುಜುಗರ ಪಡದಿರಿ. ಕೂಡು ಕುಟುಂಬದಲ್ಲಿ ಪ್ರಣಯ ಎಂದಿಗೂ ಅಪರಿಚಿತವಲ್ಲ. ಅದನ್ನು ಹೇಗೆ ನಿಮ್ಮ ಸಂಸಾರದಲ್ಲಿ ಅಳವಡಿಸಿಕೊಳ್ಳಬೇಕು. ಕುಟುಂಬ ನಿರ್ವಹಣೆ ಜೊತೆಗೆ ಸಂಗಾತಿಯ ಪ್ರಣಯಕ್ಕೆ ಯಾವ ತರ ಆಧ್ಯತೆ ನೀಡಬಹುದು ಎಂಬ ಬಗ್ಗೆ ನಿಮಗೆ ತಿಳಿದಿದ್ದರೆ ಅನೇಕ ವರ್ಷದ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದೀರಿ ಎಂದರ್ಥ.

ಈ ಸುದ್ದಿಯನ್ನೂ ಓದಿ: Health Tips: ವಯಸ್ಕರು ಜೊಲ್ಲು ಸುರಿಸುವುದೇಕೆ?