Monday, 16th December 2024

Kane Williamson: ಜೈಸ್ವಾಲ್‌ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ತಂಡದ ಅನುಭವಿ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌(Kane Williamson) ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಮ್‌ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಶತಕ ಬಾರಿಸುವ ಮೂಲಕ ಪ್ರಸಕ್ತ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಋತುವಿನಲ್ಲಿ ಅತ್ಯಧಿಕ ಶತಕ ಬಾರಿಸಿ ವಿಶ್ವದ 2ನೇ ಬ್ಯಾಟರ್‌ ಎನಿಸಿಕೊಂಡರು. ಜೈಸ್ವಾಲ್‌ 31 ಇನಿಂಗ್ಸ್‌ ಆಡಿ 4 ಶತಕ ಬಾರಿಸಿದ್ದರು. ಕೇನ್‌ ವಿಲಿಯಮ್ಸನ್‌ 22 ಇನಿಂಗ್ಸ್‌ ಆಡಿ 5 ಶತಕ ಬಾರಿಸಿದ್ದಾರೆ. ಶ್ರೀಲಂಕಾದ ಕಾಮಿಂದು ಮೆಂಡಿಸ್ ಕೂಡ 5 ಶತಕ ಬಾರಿಸಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ದಾಖಲೆ ಇಂಗ್ಲೆಂಡ್‌ನ ಜೋ ರೂಟ್‌ ಹೆಸರಿನಲ್ಲಿದೆ. ರೂಟ್‌ 39 ಇನಿಂಗ್ಸ್‌ ಆಡಿ 7 ಶತಕ ಬಾರಿಸಿದ್ದಾರೆ.

ಇದುವರೆಗಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿಯೂ ಅತ್ಯಧಿಕ ಶತಕ ಬಾರಿಸಿದ ದಾಖಲೆ ಕೂಡ ಜೋ ರೂಟ್‌ ಹೆಸರಿನಲ್ಲಿದೆ. ಅವರು ಒಟ್ಟು 18 ಶತಕ ಬಾರಿಸಿದ್ದಾರೆ. ಈ ಯಾದಿಯಲ್ಲಿ ಕೇನ್‌ ವಿಲಿಯಮ್ಸನ್‌(11) ಮತ್ತು ಆಸ್ಟ್ರೇಲಿಯಾದ ಮಾರ್ನಷ್‌ ಲಬುಶೇನ್‌(11) ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಭಾರತದ ರೋಹಿತ್‌ ಶರ್ಮ 9 ಶತಕ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Rashid Khan: ಮೂರು ವರ್ಷದ ಬಳಿಕ ಟೆಸ್ಟ್‌ ತಂಡಕ್ಕೆ ಮರಳಿದ ರಶೀದ್ ಖಾನ್

ದ್ವಿತೀಯ ದಿನದಾಟದಲ್ಲಿ 50 ರನ್‌ ಗಳಿಸಿದ್ದ ವಿಲಿಯಮ್ಸನ್‌ ಮೂರನೇ ದಿನವಾದ ಸೋಮವಾರ 156 ರನ್‌ ಬಾರಿಸಿದರು. ಶತಕ ಪೂರ್ತಿಗೊಳಿಸುತ್ತಿದ್ದಂತೆ ಒಂದೇ ಮೈದಾನದಲ್ಲಿ ಸತತ ಐದು ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಲಿಯಮ್ಸನ್‌ ಬಾರಿಸಿದ 33ನೇ ಶತಕ ಇದಾಗಿದೆ.

ಹ್ಯಾಮಿಲ್ಟನ್‌ನ ಸೀಡನ್‌ ಪಾರ್ಕ್‌ ಮೈದಾನದಲ್ಲಿ ವಿಲಿಯಮ್ಸನ್‌ ಕಳೆದ ಐದು ಟೆಸ್ಟ್ ಪಂದ್ಯಗಳಲ್ಲಿ 200 (ಬಾಂಗ್ಲಾದೇಶ, 2019), 104 (ಇಂಗ್ಲೆಂಡ್, 2019), 251 (ವೆಸ್ಟ್ ಇಂಡೀಸ್ (2020),133* (ದಕ್ಷಿಣ ಆಫ್ರಿಕಾ, 2024), 156 (ಇಂಗ್ಲೆಂಡ್‌, 2024) ಶತಕ ಬಾರಿಸಿದ್ದರು. ಉಳಿದಂತೆ ಮಹೇಲಾ ಜಯವರ್ಧನೆ, ಡಾನ್ ಬ್ರಾಡ್ಮನ್, ಮೈಕೆಲ್ ಕ್ಲಾರ್ಕ್, ಡೆನಿಸ್ ಕ್ರಾಂಪ್ಟನ್, ಮಾರ್ಟಿನ್ ಕ್ರೋವ್, ಸುನಿಲ್ ಗವಾಸ್ಕರ್, ಜಾಕ್ವೆಸ್ ಕಾಲಿಸ್, ಮಿಸ್ಬಾ-ಉಲ್-ಹಕ್, ಗ್ಯಾರಿ ಸೋಬರ್ಸ್ ತಲಾ ನಾಲ್ಕು ಶತಕ ಬಾರಿಸಿ ಜಂಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುನಿಲ್ ಗವಾಸ್ಕರ್ ಅವರು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಈ ಮೈಲುಗಲ್ಲು ನೆಟ್ಟಿದ್ದರು.