Monday, 16th December 2024

Supreme Court: ಮಸೀದಿಯೊಳಗೆ ʼಜೈ ಶ್ರೀರಾಮ್‌ʼ ಘೋಷಣೆ ಕೂಗುವುದು ಅಪರಾಧವೇ? ಸುಪ್ರೀಂ ಕೋರ್ಟ್‌ ಪ್ರಶ್ನೆ

ನವದೆಹಲಿ: ಮಸೀದಿಯೊಳಗೆ(Mazid) ಜೈ ಶ್ರೀರಾಮ್‌(Jai Shree Ram) ಘೋಷಣೆ ಕೂಗಿದರೆ ಕ್ರಿಮಿನಲ್‌ ಅಫೆನ್ಸ್‌ (Criminal Offence) ಹೇಗಾಗುತ್ತದೆ ಎಂದು ಸುಪ್ರೀಂ ಕೋರ್ಟ್‌(Supreme Court) ಸೋಮವಾರ (ಡಿ.16) ಪ್ರಶ್ನಿಸಿದೆ.

ಮಸೀದಿಗೆ ನುಗ್ಗಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಇಬ್ಬರ ವಿರುದ್ಧದ ಎಫ್‌ಐಆರ್ (FIR) ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್(Karnataka High Court) ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿಸಿತು.

ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸೋಮವಾರ ಅರ್ಜಿ ಸಂಬಂಧ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಧೀಶರು ʼʼಅವರು ನಿರ್ದಿಷ್ಟವಾದ ಧಾರ್ಮಿಕ ಘೋಷಣೆ ಅಥವಾ ಹೆಸರನ್ನು ಕೂಗುತ್ತಿದ್ದರು. ಅದು ಹೇಗೆ ಅಪರಾಧ? ಮಸೀದಿ ಆವರಣಕ್ಕೆ ನುಗ್ಗಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದು ಹೇಗೆ? ಆರೋಪಿಗಳ ಗುರುತು ಖಚಿತಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ನಾವುದೆ ಪುರಾವೆಗಳನ್ನು ಪರಿಶೀಲಿಸಲಾಗಿದೆಯೇ?ʼʼ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ಪೀಠ ದೂರುದಾರರ ಪರ ವಕೀಲರನ್ನು ಗಂಭೀರವಾಗಿ ಪ್ರಶ್ನಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ್ ಕಾಮತ್ ವಾದ ಮಂಡಿಸಿ, ʼʼಎಫ್‌ಐಆರ್ ದಾಖಲಾದ 20 ದಿನಗಳ ನಂತರ ತನಿಖೆಯನ್ನು ಅವಧಿಗೂ ಮುನ್ನ ಸ್ಥಗಿತಗೊಳಿಸಲಾಗಿದೆ. ಮಸೀದಿಯಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುವುದು ಕೋಮು ಸೌಹಾರ್ದತೆಯನ್ನು ಪ್ರಚೋದಿಸುತ್ತದೆʼʼ ಎಂದು ಹೇಳಿದರು.

ಏನಿದು ಪ್ರಕರಣ?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, 2023ರ ಸೆಪ್ಟೆಂಬರ್ 24ರಂದು ಇಬ್ಬರು ಅಪರಿಚಿತ ವ್ಯಕ್ತಿಗಳು ಮಸೀದಿ ಆವರಣಕ್ಕೆ ನುಗ್ಗಿ “ಜೈ ಶ್ರೀ ರಾಮ್” ಎಂದು ಕೂಗಿದ್ದು,ಸ್ಥಳೀಯ ಮುಸ್ಲಿಮರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಮಸೀದಿ ಆಡಳಿತವು ,ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿರುವ ಈ ವ್ಯಕ್ತಿಗಳು ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನಿವಾಸಿ ಕೀರ್ತನ್ ಕುಮಾರ್ ಮತ್ತು ಎನ್.ಎಂ. ಸಚಿನ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 447, 295 ಎ 505 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣ ಸಂಬಂಧ ಪುತ್ತೂರಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಮಸೀದಿಯು ಸಾರ್ವಜನಿಕ ಸ್ಥಳವಾಗಿರುವುದರಿಂದ ಅದರ ಆವರಣಕ್ಕೆ ಪ್ರವೇಶವನ್ನು ಕ್ರಿಮಿನಲ್ ಅತಿಕ್ರಮಣ ಎಂದು ಅರ್ಥೈಸಲಾಗುವುದಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಮತ್ತೊಂದೆಡೆ, ಮಸೀದಿಯ ಆವರಣದಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುವಂತಿಲ್ಲ ಮತ್ತು ಬೆದರಿಕೆ ಹಾಕುವಂತಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೂ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರ ಹಾಗೂ ಪೊಲೀಸರ ಅಭಿಪ್ರಾಯ ಕೋರಿದೆ. ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.

ಈ ಸುದ್ದಿಯನ್ನೂ ಓದಿ:Viral News: ವಸ್ತು ಖರೀದಿಸಿ ಹಣದ ಬದಲು ಕಿಸ್‌ ಆಫರ್‌ ಮಾಡಿದ ಮಹಿಳೆ: ಅಬ್ಬಬ್ಬಾ! ಲಾಟರಿ ಎಂದ ನೆಟ್ಟಿಗರು; ವಿಡಿಯೊ ಫುಲ್ ವೈರಲ್