Tuesday, 17th December 2024

Viral Video: ಪ್ರ್ಯಾಂಕ್ ವಿಡಿಯೊ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ಯುವಕ! ವಿಡಿಯೊ ನೋಡಿ

ಮೊದ್ಲು ಅದೊಂದು ಟಿಕ್ ಟಾಕ್ (Tik Tok) ಇತ್ತು. ಅಲ್ಲಿ ಏನೇನೊ ಹುಚ್ಚಾಟಗಳನ್ನು ಮಾಡಿ, ಲೈಕ್, ಕಮೆಂಟ್ ಗಳನ್ನು ಗಿಟ್ಟಿಸ್ತಿದ್ರು. ಈಗ ರೀಲ್ಸ್ (Reels) ಬಂದಿದೆ, ಅದ್ರಲ್ಲಿ ಆಡಿದ್ದೇ ಆಟ, ಮಾಡಿದ್ದೇ ವಿಡಿಯೋ ಎಂಬಂತಾಗಿದೆ. ಇಂತಹ ಒಂದು ಅಧ್ವಾನಕ್ಕೆ ಉದಾಹರಣೆಯಾಗಿ ಯುವಕನೊಬ್ಬ ಯುವತಿಯ ಒಂದು ಚಪ್ಪಲನ್ನು ಎಗರಿಸಿ, ಆಕೆ ಬರೀ ಕಾಲಿನಲ್ಲಿ ಎಸ್ಕಲೇಟರ್ (escalator) ಮೇಲೆ ನಡೆದಾಡುವಂತೆ ಮಾಡಿದ್ದಾನೆ. ಮತ್ತು ಯುವಕನ ಈ ಹುಚ್ಚಾಟಕ್ಕೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಅವನಂದ್ಕೊಂಡಂತೆ ಈ ವಿಡಿಯೋ ಮಾತ್ರ ಇನ್ ಸ್ಟಾದಲ್ಲಿ (Instagram) ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ.

ಈ ಅಪಾಯಕಾರಿ ಪ್ರ್ಯಾಂಕ್ ವಿಡಿಯೋ (Prank Video) ಇದೀಗ, 50 ಸಾವಿರ ಫಾಲೋವರ್ಸ್ ಹೊಂದಿರುವ ‘ಜಿ.ಎಸ್.ಟಿ. ಪ್ರಾಂಕ್’ (GST Prank) ಎಂಬ ಸೋಷಿಯಲ್ ಮೀಡಿಯಾ (Social Media) ಪೇಜ್ ನಲ್ಲಿ ಅಪ್ಲೋಡ್ ಆಗಿದ್ದು, ಇದನ್ನು ನೋಡಿವರು ಯುವಕನ ಅತಿರೇಕದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೇ ಈ ರೀತಿಯಾಗಿ ಎಸ್ಕಲೇಟರ್ ನಲ್ಲಿ ಬರಿಗಾಲಿನಲ್ಲಿ ನಡೆದಾಡುವುದರಿಂದ ಎಲೆಕ್ಟ್ರಿಕ್ ಶಾಕ್ ತಗಲುವ ಸಂಭವವೂ ಇದೆ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಈ ಪ್ರ್ಯಾಂಕ್ ವಿಡಿಯೋದಲ್ಲಿರುವಂತೆ, ಯುವಕನೊಬ್ಬ ಎಸ್ಕಲೇಟರ್ ಪಕ್ಕದಲ್ಲಿ ನಿಂತಿದ್ದ ಯುವತಿಯೊಬ್ಬಳ ಒಂದು ಚಪ್ಪಲನ್ನು ಗಿಮಿಕ್ ಮಾಡಿ ಎಗರಿಸುತ್ತಾನೆ. ಮಾಲ್ ಒಂದರಲ್ಲಿ ನಡೆದಿರುವ ಈ ಪ್ರ್ಯಾಂಕ್ ನಲ್ಲಿ, ಫೋನಿನಲ್ಲಿ ಮಾತನಾಡುತ್ತಿದ್ದ ಯುವತಿಯ ಒಂದು ಕಾಲಿಗೆ ಕಚಗುಳಿ ಇಟ್ಟು ಆಕೆ ಕಾಲು ಎತ್ತುವಂತೆ ಮಾಡಿ, ಆವಾಗ ಆಕೆಯ ಒಂದು ಚಪ್ಪಲನ್ನು ಎಗರಿಸಿಕೊಂಡು ಎಸ್ಕಲೇಟರ್ ಏರಿ ಹೋಗುತ್ತಾನೆ.

ಇದನ್ನೂ ಓದಿ: ಅಜ್ಜಿ-ತಾತಂದಿರ ಮುಂದೆ 5 ವರ್ಷಗಳ ಹಿಂದೆ ನಿಧನಳಾದ ಅವಳಿ ಸಹೋದರಿಯಂತೆ ನಟಿಸಿದ ಟಿಕ್‌ಟಾಕ್ ಸ್ಟಾರ್; ಈ ಕಥೆ ಹೃದಯ ವಿದ್ರಾವಕ!

ಕಚಗುಳಿಯಾಯಿತೆಂದು ಕಾಲೆತ್ತಿದ ಯುವತಿ ಮತ್ತೆ ಕಾಲನ್ನು ನೆಲಕ್ಕಿಟ್ಟಾಗ ಆಕೆಯ ಒಂದು ಚಪ್ಪಲಿ ಇಲ್ಲದಿರುವುದು ಆಕೆಯ ಗಮನಕ್ಕೆ ಬರುತ್ತದೆ. ತಕ್ಷಣ ಆಕೆ ಎಸ್ಕಲೇಟರ್ ಕಡೆ ನೋಡಿದಾಗ, ಅಲ್ಲಿ ಆ ಯುವಕ ಆಕೆಯ ಚಪ್ಪಲನ್ನು ಎತ್ತಿಕೊಂಡು ಹೋಗುತ್ತಿರುತ್ತಾನೆ, ಮಾತ್ರವಲ್ಲದೇ ಆಕೆಯ ಕಡೆಗೆ ಚಪ್ಪಲನ್ನು ತೋರಿಸಿ ನಗುತ್ತಿರುತ್ತಾನೆ. ಇದನ್ನು ಕಂಡು ಆಕೆ ಒಂದು ಕಾಲಲ್ಲಿ ಮಾತ್ರ ಚಪ್ಪಲಿರುವ ಸ್ಥಿತಿಯಲ್ಲೇ ಆ ಎಸ್ಕಲೇಟರ್ ಏರಿ ಹೋಗಿ ಮೇಲ್ ತುದಿಯಲ್ಲಿ ಆ ಯುವಕನ ಜೊತೆ ವಾಗ್ವಾದ ನಡೆಸಿ ತನ್ನ ಚಪ್ಪಲನ್ನು ಹಿಂದೆ ಪಡೆದುಕೊಳ್ಳುತ್ತಾಳೆ. ಹೀಗೆ ಯುವತಿ ಬರಿಗಾಲಿನಲ್ಲಿ ಎಸ್ಕಲೇಟರ್ ಹತ್ತಿರುವುದನ್ನೇ ನೆಟ್ಟಿಗರು ಇದೀಗ ‘ಡೇಂಜರಸ್’ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

‘ಎಲ್ಲಿ ಹೊಡೆತ ಬಿತ್ತಾ..? ನಾವು ಕಾಯುತ್ತಿದ್ದೇವೆ..!’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಎಸ್ಕಲೇಟರ್ ನಲ್ಲಿ ಬರೀಗಾಲಿನಲ್ಲಿ ಓಡಾಡುವುದು ನಿಜವಾಗ್ಲೂ ಅಪಾಯಕಾರಿ. ಕೆಲವೊಮ್ಮೆ ಇದರಿಂದ ಶಾಕ್ ತಗಲುವ ಸಾಧ್ಯತೆಗಳವೆ’ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ.

ಒಟ್ಟಿನಲ್ಲಿ, ಏನೋ ಮಾಡಲು ಹೋಗಿ ಏನೋ ಆಯ್ತು ಅನ್ನೋ ಹಾಗೆ, ಅಧಿಕ ಪ್ರಸಂಗದ ತಮಾಷೆ ಮಾಡಲು ಹೋಗಿ ಯುವತಿಯೊಬ್ಬಳ ಜಿವವನ್ನೇ ಅಪಾಯಕ್ಕೆ ದೂಡಿದ ಆ ಯುವಕನ ಬಗ್ಗೆ ಹಾಗೂ ಆತನ ಈ ತಮಾಷೆಯ ಆಟದ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ.