Monday, 16th December 2024

Chrystia Freeland: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಆಘಾತ; ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ

Chrystia Freeland

ಒಟ್ಟಾವಾ: ಕೆನಡಾದಲ್ಲಿ ಸೋಮವಾರ (ಡಿ. 16) ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಉಪ ಪ್ರಧಾನಿ (Canada’s deputy prime minister) ಕ್ರಿಸ್ಟಿಯಾ ಫ್ರೀಲ್ಯಾಂಡ್ (Chrystia Freeland) ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಉಪಪ್ರಧಾನಿ ಹುದ್ದೆಯ ಜತೆಗೆ ಹಣಕಾಸು ಖಾತೆಯನ್ನೂ ಅವರು ಹೊಂದಿದ್ದರು.

ಸಚಿವ ಸಂಪುಟದಲ್ಲಿ ಪ್ರಧಾನಿ ಟ್ರುಡೊ ಅವರ ನಿಕಟ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದ ಫ್ರೀಲ್ಯಾಂಡ್ ಅವರು ಸಂಸತ್ತಿನಲ್ಲಿ ದೇಶದ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡುವ ಕೆಲವೇ ಗಂಟೆಗಳ ಮೊದಲು ತಮ್ಮ ರಾಜೀನಾಮೆಯನ್ನು ಘೋಷಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜೀನಾಮೆ ಬಗ್ಗೆ ಬರೆದಿರುವ ಅವರು, “ಕಳೆದ ಹಲವು ವಾರಗಳಿಂದ, ನೀವು ಮತ್ತು ನಾನು ದೇಶಕ್ಕೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದೇವೆʼʼ ಎಂದು ಪ್ರಧಾನಿ ಟ್ರುಡೊ ಅವರನ್ನು ಉಲ್ಲೇಖಿಸಿ ತಿಳಿಸಿದ್ದಾರೆ. “ನಮ್ಮ ದೇಶ ಇಂದು ಗಂಭೀರ ಸವಾಲನ್ನು ಎದುರಿಸುತ್ತಿದೆ. ಅಮೆರಿಕದಲ್ಲಿ ಅದಿಕಾರಕ್ಕೆ ಬಂದಿರುವ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರವು ಶೇ. 25ರಷ್ಟು ಸುಂಕದ ಬೆದರಿಕೆ ಸೇರಿದಂತೆ ಆಕ್ರಮಣಕಾರಿ ಆರ್ಥಿಕ ರಾಷ್ಟ್ರೀಯತೆಯ ನೀತಿಯನ್ನು ಅನುಸರಿಸುತ್ತಿದೆ. ನಾವು ಆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಹೇಳಿದರು.

ತಮ್ಮ ರಾಜೀನಾಮೆ ಪತ್ರದಲ್ಲಿ ಫ್ರೀಲ್ಯಾಂಡ್ ಅವರು ದುಬಾರಿ ರಾಜಕೀಯ ಗಿಮಿಕ್‌ಗಳನ್ನು ಆಶ್ರಯಿಸದಂತೆ ಟ್ರುಡೊ ಅವರಿಗೆ ಎಚ್ಚರಿಕೆ ನೀಡಿದರು. “ನಾನು ಇನ್ನು ಮುಂದೆ ನಿಮ್ಮ ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸುವುದನ್ನು ನೀವು ಬಯಸುವುದಿಲ್ಲ ಎಂದು ನೀವು ನನಗೆ ಹೇಳಿದ್ದೀರಿ ಮತ್ತು ಕ್ಯಾಬಿನೆಟ್‌ನಲ್ಲಿ ಮತ್ತೊಂದು ಸ್ಥಾನವನ್ನು ನೀಡಿದ್ದೀರಿ” ಎಂದು ಅವರು ಕೆಲವು ದಿನಗಳ ಹಿಂದೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

56ರ ಹರೆಯದ ಫ್ರೀಲ್ಯಾಂಡ್ ಈ ಹಿಂದೆ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ಅಮೆರಿಕಾ ಮತ್ತು ಮೆಕ್ಸಿಕೊದೊಂದಿಗೆ ಮುಕ್ತ ವ್ಯಾಪಾರ ಮಾತುಕತೆಗಳನ್ನು ನಡೆಸಿದ್ದರು.

ಈ ಸುದ್ದಿಯನ್ನೂ ಓದಿ: Justin Trudeau : ರಾಜತಾಂತ್ರಿಕತೆಯ ಬಿಕ್ಕಟ್ಟಿನ ಮಧ್ಯೆಯೇ ದೀಪಾವಳಿ ಆಚರಿಸಿದ ಜಸ್ಟಿನ್ ಟ್ರುಡೊ, ಹಿಂದೂ ದೇವಾಲಯಗಳಿಗೂ ಭೇಟಿ