ಧನಂಜಯ್
ಚಿಕ್ಕನಾಯಕನಹಳ್ಳಿ : ೧೫೦ ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗೋಡೆಕೆರೆ ಗೇಟ್ ಹಾಗು ಜೆ.ಸಿ.ಪುರದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಅನಧಿಕೃತ ಸಂಪರ್ಕ ಹೊಂದಿದ್ದು ಅಕ್ರಮ ವಿದ್ಯುತ್ ಬಳಕೆ ಮಾಡಿರುವ ಕಳವಳಕಾರಿ ಸಂಗತಿ ಬಹಿರಂಗವಾಗಿದೆ.
ಒಂದು ಕಡೆ ವಿದ್ಯುತ್ ಅಭಾವ, ಇನ್ನೊಂದು ಕಡೆ ದರ ಏರಿಕೆಯ ಬಿಸಿ ಇದು ವಿದ್ಯುತ್ ಬಳಕೆದಾರರನ್ನು ಕಾಡು ತ್ತಿರುವ ಸಮಸ್ಯೆ ಇದರ ಜೊತೆಗೆ ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನ ಪೈಕಿ ಪ್ರಸರಣ ಹಾಗು ವಿತರಣೆ ಯಲ್ಲಿ ಆಗುತ್ತಿರುವ ನಷ್ಟವೂ ಹೆಚ್ಚು. ಏಕೆಂದರೆ ಈ ನಷ್ಟವನ್ನು ಬಳಕೆದಾರರ ಮೇಲೆ ಹೊರಿಸಲಾಗುತ್ತದೆ. ಅಥವಾ ಸರ್ಕಾರ ನೀಡುವ ಸಬ್ಸಿಡಿಯಿಂದ ಅಲ್ಪ ಮಟ್ಟಿಗೆ ತುಂಬಿಕೊಳ್ಳಬಹುದು.
ಸಬ್ಸಿಡಿ ಮೊತ್ತ ಕೂಡ ಸರಕಾರದ ಬೊಕ್ಕಸದಿಂದಲೇ ಬರುವುದರಿಂದ ಅದು ಪರೋಕ್ಷವಾಗಿ ತೆರಿಗೆದಾರರ ಮೇಲೆ ಹೊರೆ ಎಂದೇ ಹೇಳಬಹುದು. ಗೋಡೆಕೆರೆ ಗೇಟ್‌ನಲ್ಲಿ ೬ ಎಲ್‌ಇಡಿ, ೧ ಹೈ ಮಾಸ್ಕ್ ವಿದ್ಯುತ್ ಕಂಬ ಮತ್ತು ಜೆ.ಸಿ.ಪುರ ದಲ್ಲಿ ೨೭ ಎಲ್‌ಇಡಿ, ೨ ಹೈ ಮಾಸ್ಕ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.
ಮಾಹಿತಿಯೊಂದರ ಪ್ರಕಾರ ಎಲ್‌ಇಡಿ ಬಲ್ಬ್ ಇರುವ ಕಂಬವು ೧೮೦ ಯುನಿಟ್, ಹೈ ಮಾಸ್ಕ್ ಸೋಡಿಯಂ ದೀಪಗಳು ೩೦೦ ಯೂನಿಟ್ ಪ್ರತಿ ತಿಂಗಳು ಉರಿಸುತ್ತವೆ. ೨೦೨೨ ರಿಂದ ಇದುವರೆಗೂ ಅಂದಾಜು ೨ ಲಕ್ಷಕ್ಕೂ ಅಧಿಕ ಯೂನಿಟ್ ಅಕ್ರಮವಾಗಿ ವಿದ್ಯುತ್ ಉರಿಸಲಾಗಿದೆ. ಇದರ ಮೌಲ್ಯವೇ ೪೦ ಲಕ್ಷ ರೂಪಾಯಿ ಇದು ಸಂಪೂರ್ಣ ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷವಾಗಿದ್ದು ಇದು ಒಳ್ಳೆಯ ಲಕ್ಷಣವಂತೂ ಖಂಡಿತ ಅಲ್ಲ.
ಬೆಸ್ಕಾಂ ನಿಂದ ತಪ್ಪೊಪ್ಪಿಗೆ !
ಇಲ್ಲಿ ವಿದ್ಯುತ್ತಿನ ಅಕ್ರಮ ಬಳಕೆ ನೋಡಿದ್ದೇನೆ. ಕಂಬಗಳಿಗೆ ವಿದ್ಯುತ್ ಸಂಪರ್ಕ ಈಗಾಗಲೇ ಕಡಿತಗೊಳಿಸಿದೆ. ಆ ಭಾಗದ ಸೆಕ್ಷನ್ ಆಫೀಸರ್ ಇರ್ಫಾನ್ ಪ್ರಶ್ನಿಸಿದ್ದು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಚಾತುರ್ಯದಿಂದ ಆಗಿದೆ ಎಂದು ತಿಳಿಸಿದ್ದಾರೆ. ಅಕ್ರಮ ವಿದ್ಯುತ್ ಬಳಕೆ ವಿರುದ್ದ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ ಎಂದು ಬೆಸ್ಕಾಂ ಎಇಇ ಗವಿರಂಗಯ್ಯ ನುಡಿದರು.