Tuesday, 17th December 2024

Rajendra Bhat column: ನಮ್ಮ ಕನ್ನಡ ಶಾಲೆಯ ವಾರ್ಷಿಕೋತ್ಸವಗಳು ಯಾಕೆ ಹೀಗೆ?

school day

ಸ್ಫೂರ್ತಿಪಥ ಅಂಕಣ: ವಾರ್ಷಿಕೋತ್ಸವಗಳಿಗೊಂದು ಸಂಹಿತೆಯು ಬೇಡವಾ?

  • ರಾಜೇಂದ್ರ ಭಟ್ ಕೆ.

Rajendra Bhat column: ಕಳೆದ ಹತ್ತಾರು ವರ್ಷಗಳಿಂದ ನೂರಾರು ಕನ್ನಡ ಶಾಲೆಗಳ ವಾರ್ಷಿಕೋತ್ಸವದ (School days) ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿರುವ ನನಗೆ ಇತ್ತೀಚೆಗೆ ಹೆಚ್ಚು ನಿರಾಸೆ ಕಾಡುತ್ತಿದೆ. ಕನ್ನಡದ ಸತ್ವವನ್ನು ಜಗತ್ತಿಗೆ ತೋರಿಸುವ ವಾರ್ಷಿಕೋತ್ಸವವನ್ನು ಮಾಡುವ ಶಾಲೆಗಳೂ ಇವೆ. ಅವರಿಗೆ ನಮ್ಮ ಅಭಿನಂದನೆ ಇರಲಿ.

ವಾರ್ಷಿಕೋತ್ಸವ ಕಾರ್ಯಕ್ರಮಗಳ ಉದ್ದೇಶ ಏನು?

ಈ ಮಕ್ಕಳ ಉತ್ಸವಗಳ ಉದ್ದೇಶವು ಸಫಲ ಆಗ್ತಾ ಇದೆಯಾ? ಈ ಉಸಿರು ಕಟ್ಟುವ ಪ್ರೋಟೋಕಾಲ್ ಕಾರ್ಯಕ್ರಮಗಳಿಂದ ನಮ್ಮ ದೇವರಂತಹ ಮುಗ್ಧ ಮಕ್ಕಳ ನಿಜವಾದ ಪ್ರತಿಭೆಗಳು ಅರಳುತ್ತಿವೆಯಾ? ಯೋಚನೆ ಮಾಡಿ.

ಪ್ರತೀ ಮಗುವೂ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಕೆಲವು ಮಕ್ಕಳಂತೂ ಹಲವು ಪ್ರತಿಭೆಗಳ ಎರಕವೇ ಆಗಿರುತ್ತಾರೆ. ಅಂತಹ ಮಕ್ಕಳ ಶ್ರೇಷ್ಟ ಪ್ರತಿಭೆಗಳನ್ನು ಶಿಕ್ಷಕರು ಮೊದಲು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಕ್ಯಾನ್ವಾಸ್ ಮಾಡುವ ಉದ್ದೇಶ ಹೊಂದಿರುವ ಉತ್ಸವವೇ ಶಾಲಾ ವಾರ್ಷಿಕ ಉತ್ಸವ. ಅದರ ಜೊತೆಗೆ ಶಾಲೆಗಳ ಇಮೇಜ್ ಹೆಚ್ಚು ಮಾಡುವ ಉದ್ದೇಶವು ಖಂಡಿತವಾಗಿ ಇದೆ. ಕನ್ನಡ ಸಂಸ್ಕೃತಿಯ ಪರಿಚಯ ಮತ್ತು ಪ್ರಸಾರ ಕೂಡ ಆಗಬೇಕು. ಮಕ್ಕಳಿಗೆ ಮೌಲ್ಯಗಳು, ನೀತಿ ಶಿಕ್ಷಣ ದೊರೆಯಬೇಕು. ಆದರೆ ಇಂದಿನ ಕನ್ನಡ ಶಾಲಾ ವಾರ್ಷಿಕೋತ್ಸವಗಳು ಆ ಉದ್ದೇಶಗಳನ್ನು ಈಡೇರಿಸುತ್ತಿವೆ ಎಂದು ನಿಮಗೆ ಅನ್ನಿಸುತ್ತಿದೆಯಾ?

ಸರಕಾರಿ ಶಾಲೆಗಳಲ್ಲಿ ಪ್ರೋಟೋಕಾಲ್ ತೊಂದರೆ.

ಆಮಂತ್ರಣ ಪತ್ರಿಕೆಯನ್ನು ಮುಖ್ಯ ಶಿಕ್ಷಕರು ಮುದ್ರಿಸಲು ಹೊರಟಾಗಲೇ ಎದುರಾಗುವ ಮೊದಲ ಸಮಸ್ಯೆ ಎಂದರೆ ಪ್ರೋಟೋಕಾಲ್ ಸಮಸ್ಯೆ! ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂ. ಅಧ್ಯಕ್ಷರು, ಸದಸ್ಯರು ಎಲ್ಲರನ್ನೂ ಫಿಟ್ ಮಾಡಿ ಆಮಂತ್ರಣ ಪತ್ರಿಕೆಯು ಪ್ರಿಂಟ್ ಆಗಿ ಬರುವಷ್ಟರಲ್ಲಿ ಹೆಡ್ ಮಾಸ್ಟರ್ ಸುಸ್ತು ಹೊಡೆಯುತ್ತಾರೆ. ವಾರಾಂತ್ಯದ ದಿನಗಳು ಆದರೆ ಶಾಸಕರಿಗೆ ಹತ್ತಾರು ಕಡೆ ವಾರ್ಷಿಕೋತ್ಸವಗಳು. ಅವರು ಎಲ್ಲಿಗೆಂದು ಹೋಗುವುದು? ಹೋಗುವ ಆಸೆ ಇದ್ದರೂ ಸಮಯಕ್ಕೆ ಸರಿಯಾಗಿ ತಲುಪುವುದು ಹೇಗೆ?

ಕೆಲವು ಒಳ್ಳೆಯ ಶಾಸಕರು ನನ್ನನ್ನು ಕಾಯೋದು ಬೇಡ, ಮುಂದುವರೆಸಿ ಎಂದು ಹೇಳಿ ಉದಾರತೆ ತೋರುತ್ತಾರೆ. ಆದರೆ ಕೆಲವು ಶಾಸಕರು ತಾವು ಬಾರದೆ ಸಭೆ ಆರಂಭ ಮಾಡಬೇಡಿ ಎಂದು ಅಪ್ಪಣೆ ಕೊಡಿಸುತ್ತಾರೆ. ಅದರ ಜೊತೆ ಅವರ ಅಭಿಮಾನಿಗಳಿಗೆ ಶಾಸಕರು ಬಾರದೆ ಸಮಾಧಾನ ಆಗುವುದಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭ ಆಗುವುದಿಲ್ಲ. ಆರಂಭ ಆದ ನಂತರ ಅದು ಉದ್ದ ಆಗುತ್ತಾ ಹೋಗುತ್ತದೆ. ವೇದಿಕೆಯಲ್ಲಿ ಸ್ಥಾನ ಪಡೆದ ಎಲ್ಲ ಪಂಚಾಯತ್ ಸದಸ್ಯರೂ, ಜಿಲ್ಲಾ ಪಂ, ತಾಲೂಕು ಪಂ. ಸದಸ್ಯರು, ಗಣ್ಯ ಅತಿಥಿಗಳು ಮಾತಾಡಲು ಹಾತೊರೆಯುತ್ತಾರೆ. ದಾನಿಗಳಿಗೆ ಸನ್ಮಾನ, ಅವರ ಒಂದಿಷ್ಟು ಭಾಷಣಗಳು ಸಾಕಷ್ಟು ಸಮಯ ತಿನ್ನುತ್ತವೆ. ಶಾಲಾ ವರದಿ, ಸ್ವಸ್ತಿ ವಾಚನ, ಗುರುವಂದನೆ ಇತ್ಯಾದಿಗಳು ಖಂಡಿತವಾಗಿ ಇರುತ್ತವೆ.

ಕಾರ್ಯಕ್ರಮದ ಅವಧಿ ದೀರ್ಘ ಆಗುತ್ತದೆ ಎಂಬ ಕಾರಣಕ್ಕೆ ಮಕ್ಕಳ ಬಹುಮಾನ ವಿತರಣೆಯ ಕಾರ್ಯಕ್ರಮವು ಕಟ್ ಆಗುತ್ತದೆ. ಅದು ನಿಜವಾಗಿ ಮಕ್ಕಳಿಗೆ ರೋಮಾಂಚನವನ್ನು ಕೊಡುವ ಕಾರ್ಯಕ್ರಮ ಹೌದಲ್ಲ? ಅದಕ್ಕಿಂತ ಒಬ್ಬ ಒಳ್ಳೆಯ ಸಾಹಿತಿ, ಕಲಾವಿದ, ಸಮಾಜ ಸೇವಕ, ಸಾಧಕ ವ್ಯಕ್ತಿಗಳು ಇವರನ್ನು ಅತಿಥಿಯಾಗಿ ಕರೆದು ತಂದು ಒಳ್ಳೆಯ ಮಾತು ಹೇಳಿಸಿದರೆ ಚಂದ ಆಗ್ತದೆ ಅಲ್ವಾ?

ದೀರ್ಘ ಅವಧಿಯ ಸಭಾ ಕಾರ್ಯಕ್ರಮಗಳು

ಯಾವುದೇ ಪ್ರೇಕ್ಷಕರ ತಾಳ್ಮೆಯ ಧಾರಣಾ ಸಾಮರ್ಥ್ಯವು ಒಂದೂವರೆ ಘಂಟೆ ಅಷ್ಟೇ. ಆದರೆ ಸಭಾ ಕಾರ್ಯಕ್ರಮಗಳ ಅವಧಿ ಮೂರು ಘಂಟೆಗಳನ್ನು ಮೀರಿ ಮುಂದೆ ಹೋದಾಗ ವೇದಿಕೆಯಲ್ಲಿ ಕುಳಿತ ಅತಿಥಿಗಳಿಗೆ ಅಸಿಡಿಟಿಯು ಆರಂಭ ಆಗಿರುತ್ತದೆ. ಮೇಕಪ್ ರೂಮಿನಲ್ಲಿ ಮೇಕಪ್ ಮಾಡಿ ಕೂತ ಪುಟ್ಟ ಪುಟ್ಟ ಮಕ್ಕಳು ಎಂಬ ದೇವರು ನಿದ್ದೆಗೆ ಜಾರಿರುತ್ತಾರೆ. ಯಕ್ಷಗಾನದ ದೊಡ್ಡ ದೊಡ್ಡ ಕಿರೀಟ ತೊಟ್ಟುಕೊಂಡು ಪುಟ್ಟ ಮಕ್ಕಳು ವಾಂತಿ ಮಾಡಿ ಸುಸ್ತಾಗಿ ವೇದಿಕೆಗೆ ಬರುವಾಗ ಹೈರಾಣ ಆಗಿರುತ್ತಾರೆ. ಅಲ್ಲಿಗೆ ಶಾಲಾ ವಾರ್ಷಿಕೋತ್ಸವದ ಯಾವ ಉದ್ದೇಶವು ಸಫಲ ಆಗಬಹುದು? ತಮ್ಮ ತಮ್ಮ ಮಕ್ಕಳ ಪ್ರತಿಭೆ ನೋಡಲು ಬಂದಿರುವ ಹೆತ್ತವರು ಕುತ್ತಿಗೆ ಉದ್ದ ಮಾಡಿಕೊಂಡು ಎಷ್ಟು ಹೊತ್ತು ಕಾಯಬೇಕು?

ಹಳಿ ತಪ್ಪುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು

ವಾರ್ಷಿಕೋತ್ಸವದ ಪ್ರಧಾನ ಆಕರ್ಷಣೆ ಎಂದರೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು. ಜನರು ಬರುವುದೇ ಅವುಗಳನ್ನು ನೋಡಲು. ಹೆತ್ತವರಿಗೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುವುದೇ ಒಂದು ಹಬ್ಬ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಪರಿಷೆಯನ್ನು ಪರಿಚಯ ಮಾಡಲು ಒಂದು ಒಳ್ಳೆಯ ಅವಕಾಶ ಇದು. ಆದರೆ ಈಗ ನಿಜವಾಗಿ ಆಗುತ್ತಿರುವುದು ಏನು?

ಮಕ್ಕಳ ಪ್ರತಿಭೆ ಎಂದರೆ ಬರೇ ನೃತ್ಯ, ನೃತ್ಯ ಮತ್ತು ನೃತ್ಯ ಎಂದಾಗಿದೆ! ಅನನ್ಯ ಸಾಂಸ್ಕೃತಿಕ ವೇದಿಕೆಗಳಾದ ಕನ್ನಡ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡುವ ಶಾಲೆಗಳ ಸಂಖ್ಯೆ ಕಡಿಮೆ ಆಗಿದೆ. ಮೌಲ್ಯಗಳ ಅನಾವರಣ, ರಾಷ್ಟ್ರಪ್ರೇಮದ ಉದ್ದೀಪನ, ಪೌರಾಣಿಕ ಪಾತ್ರಗಳು, ಇತಿಹಾಸದ ಪರಿಚಯ, ಶ್ರೇಷ್ಟವಾದ ಕೌಟುಂಬಿಕ ಮೌಲ್ಯಗಳು, ಹೃದಯ ಶ್ರೀಮಂತಿಕೆ ಬೆಳೆಸುವ ಕನ್ನಡದ ನಾಟಕಗಳು ಇಂದು ಕನ್ನಡ ಶಾಲೆಗಳ ಉತ್ಸವದ ವೇದಿಕೆಗಳಲ್ಲಿ ಕಡಿಮೆ ಆಗಿದೆ. ಕೇವಲ ಸೊಂಟ ತಿರುಗಿಸುವ ಹಾಡುಗಳು, ಶಬ್ದ ಮಾಲಿನ್ಯದ ರೀಮಿಕ್ಸ್ ನಂಬರುಗಳು, ಎದೆಯ ಬಡಿತವನ್ನು ಹೆಚ್ಚಿಸುವ ಪಾಶ್ಚಾತ್ಯ ಹಾಡುಗಳು ಇವಿಷ್ಟು ಮಾತ್ರ ಮಕ್ಕಳ ಪ್ರತಿಭೆ ಎಂದು ತಿಳಿದುಕೊಳ್ಳುವ ಹಾಗೆ ಆಗಿದೆ. ಮಕ್ಕಳ ಜಗಮಗಿಸುವ ಡ್ರೆಸ್ ಎಷ್ಟೋ ಕಡೆ ಗಿಡ್ಡ ಆಗ್ತಾ ಇವೆ. ಪೋಷಕರು ಅದನ್ನೇ ಪರಮ ಪ್ರಸಾದ ಎಂದು ಸ್ವೀಕರಿಸುವ ದೃಶ್ಯ ನಾನು ನೋಡುತ್ತಾ ಇದ್ದೇನೆ.

ಕನ್ನಡದ ಜಾನಪದ ನೃತ್ಯಗಳಾದ ಕಂಗೀಲು, ಹಾಲಕ್ಕಿ, ಸುಗ್ಗಿ ನೃತ್ಯ, ಹೋಳಿ ನೃತ್ಯ, ವೀರಗಾಸೆ, ಕರಗ, ಕಂಸಾಳೆ, ರಾಗಿ ಹಾಡು, ಪಾಡ್ದನ, ಕೋಲಾಟ ಇತ್ಯಾದಿ ನಮಗೆ ಕನ್ನಡದ ಶಾಲೆಗಳ ವೇದಿಕೆಗಳಲ್ಲಿ ಕಡಿಮೆ ಆಗುತ್ತಿವೆ.

ಯಕ್ಷಗಾನವು ನಾಡಿನ ಹೆಮ್ಮೆಯ ಕಲೆ ಹೌದು.ಅದಕ್ಕೊಂದು ವೇದಿಕೆ ಬೇಕು ಎಂದು ನನಗೆ ಅನ್ನಿಸುತ್ತದೆ. ಅದರ ಜೊತೆಗೆ ಶಾಸ್ತ್ರೀಯ ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಕನ್ನಡದ ಶ್ರೇಷ್ಟವಾದ ಭಾವಗೀತೆಗಳು, ಮಣ್ಣಿನ ವಾಸನೆ ಇರುವ ಜಾನಪದ ಗೀತೆಗಳು ನಮ್ಮ ಕನ್ನಡ ಶಾಲೆಯ ಉತ್ಸವಗಳ ವೇದಿಕೆಯಲ್ಲಿ ಇತ್ತೀಚೆಗೆ ಕಡಿಮೆ ಆಗುತ್ತಿವೆ.

ಕನ್ನಡದ ಮಕ್ಕಳ ಏಕಪಾತ್ರಾಭಿನಯ, ಮೂಕಾಭಿನಯ, ಸ್ಕಿಟ್, ರೂಪಕಗಳು, ಸಮೂಹ ಗೀತೆಗಳು, ಪೈಂಟಿಂಗ್, ದಂಬೆಲ್ಸ್, ಕೋಲಾಟ, ಜಡೆ ಕೋಲಾಟ, ಕಂಸಾಳೆ ನೃತ್ಯ, ಕವಾಯತು, ಡೊಳ್ಳು ಕುಣಿತ, ಯೋಗ ಪ್ರದರ್ಶನ, ವಿವಿಧ ಆತ್ಮರಕ್ಷಣೆಯ ಕಲೆಗಳು, ಲಾವಣಿಗಳು……. ನಮ್ಮ ಶಾಲೆಗಳ ಮಕ್ಕಳ ಉತ್ಸವದ ವೇದಿಕೆಗಳಲ್ಲಿ ಇತ್ತೀಚೆಗೆ ಕಡಿಮೆ ಆಗುತ್ತಿವೆ.

ಹಾಗಿರುವ ಸಂದರ್ಭ ಮಕ್ಕಳಲ್ಲಿ ಕನ್ನಡ ಪ್ರೇಮ, ಸಂಸ್ಕೃತಿ ಪ್ರೇಮಗಳು ಹೆಚ್ಚುವುದು ಹೇಗೆ? ಮಕ್ಕಳೇ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿದರೆ ಒಳ್ಳೆಯದು.

ಇಡೀ ರಾತ್ರಿ ವಾರ್ಷಿಕೋತ್ಸವ ನಡೆಯುತ್ತಿದ್ದ ದಿನಗಳು ಇದ್ದವು. ಈಗ ಶಿಕ್ಷಣ ಇಲಾಖೆ ಅದಕ್ಕೆ ಅನುಮತಿ ನೀಡುತ್ತಿಲ್ಲ. ಅದು ಒಳ್ಳೆಯ ನಿರ್ಧಾರ. ಇಳಿಹಗಲು ನಾಲ್ಕು ಘಂಟೆಗೆ ಆರಂಭವಾಗಿ 10 ಘಂಟೆಯ ಒಳಗೆ ವಾರ್ಷಿಕೋತ್ಸವ ಮುಗಿದರೆ ಒಳ್ಳೆಯದು. ಏಕೆಂದರೆ ನೃತ್ಯ, ನಾಟಕ, ಯಕ್ಷಗಾನಗಳ ಫೀಲ್ ಬರಬೇಕಾದರೆ ಕತ್ತಲಾದಷ್ಟೂ ಒಳ್ಳೆಯದು.

ಭರತ ವಾಕ್ಯ

ಕನ್ನಡ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಕನ್ನಡ ಸಂಸ್ಕೃತಿ ಮತ್ತು ಮಕ್ಕಳ ಅದ್ಭುತ ಪ್ರತಿಭೆಗಳ ಎರಕವೇ ಆಗಿರಬೇಕು. ನಮ್ಮ ಕನ್ನಡ ಶಾಲೆಗಳು ನಾಡಿಗೆ ಮಾದರಿ ಆಗಬೇಕು. ಆಗ ಮಾತ್ರ ಕನ್ನಡ ಸಂಸ್ಕೃತಿ ಉಳಿಯಬಹುದು. ಏನಂತೀರಿ?

ಇದನ್ನೂ ಓದಿ: Rajendra Bhat Column: ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆ!