Tuesday, 17th December 2024

Mass Shooting: ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿನಿ; ಕನಿಷ್ಠ ಐವರ ಸಾವು

Mass Shooting

ವಾಷಿಂಗ್ಟನ್‌: ಅಮೆರಿಕದಲ್ಲಿ ಮತ್ತೊಂದು ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 5 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ದಾಳಿ ನಡೆಸಿದ 17 ವರ್ಷದ ವಿದ್ಯಾರ್ಥಿನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮ್ಯಾಡಿಸನ್‌ನ ಅಬುಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ (Mass Shooting).

ʼʼವಿಸ್ಕಾನ್ಸಿನ್‌ ರಾಜಧಾನಿ ಮ್ಯಮ್ಯಾಡಿಸನ್‌ನ ಅಬಂಡಂಟ್‌ ಲೈಫ್‌ ಕ್ರಿಶ್ಚಿಯನ್‌ ಶಾಲೆಯಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಈ ಘಟನೆಯಲ್ಲಿ ಅವಳೂ ಸೇರಿ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆʼʼ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

ಚಾನೆಲ್ 3000 ಪ್ರಕಾರ ಡಿ. 16ರ ಬೆಳಗ್ಗೆ 11 ಗಂಟೆಗೆ ಈ ಗುಂಡಿನ ದಾಳಿ ನಡೆದಿದೆ. ಶಿಶುವಿಹಾರದಿಂದ ಪ್ರೌಢಶಾಲೆಯವರೆಗಿನ ತರಗತಿ ಇರುವ ಈ ಶಾಲೆಯಲ್ಲಿ ಸುಮಾರು 390 ವಿದ್ಯಾರ್ಥಿಗಳಿದ್ದಾರೆ.

ಸಾಮೂಹಿಕ ಗುಂಡಿನ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿ ವಿಸ್ಕಾನ್ಸಿನ್ ಸೆನೆಟರ್ ರಾನ್ ಜಾನ್ಸನ್ ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. “ಅಬುಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ಸಂಭವಿಸಿದ ದುರಂತದ ಸುದ್ದಿ ಕೇಳಿ ದುಃಖವಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆʼ ಎಂದಿದ್ದಾರೆ.

ಅಮೆರಿಕದಲ್ಲಿ ಸೆಪ್ಟೆಂಬರ್‌ 2ನೇ ವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಬಲಿಯಾಗಿದ್ದರು. ಬರ್ಮಿಂಗ್ಹ್ಯಾಮ್‌ನ ಫೈವ್ ಪಾಯಿಂಟ್ಸ್ ಸೌತ್ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅದಕ್ಕೂ ಮೊದಲು ಅಮೆರಿಕದ ಶಾಲೆಯೊಂದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು. ಜಾರ್ಜಿಯಾದ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಾಮಾಹಿಕ ಗುಂಡಿನ ದಾಳಿಗೆ ಈ ವರ್ಷ 500 ಮಂದಿ ಬಲಿ

ಈ ವರ್ಷ ಅಮೆರಿಕದಲ್ಲಿ ಸುಮಾರು 490 ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, 500 ಮಂದಿ ಬಲಿಯಾಗಿದ್ದಾರೆ. 2,125 ಮಂದಿ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: America Shootout: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ; ನಾಲ್ವರು ಸ್ಥಳದಲ್ಲೇ ಬಲಿ