Tuesday, 17th December 2024

Daren Sammy: ವೆಸ್ಟ್‌ ಇಂಡೀಸ್‌ ಮೂರು ಮಾದರಿಯ ತಂಡಕ್ಕೂ ಸ್ಯಾಮಿ ಕೋಚ್‌

ಬ್ರಿಡ್ಜ್‌ಟೌನ್‌: ವೆಸ್ಟ್‌ ಇಂಡೀಸ್‌ ಪುರುಷರ ಕ್ರಿಕೆಟ್‌ ತಂಡಕ್ಕೆ ಮುಖ್ಯ ಕೋಚ್‌(West Indies Head Coach) ಆಗಿ ವಿಂಡೀಸ್‌ ತಂಡದ ಮಾಜಿ ನಾಯಕ ಹಾಗೂ ಆಟಗಾರ ಡ್ಯಾರೆನ್ ಸ್ಯಾಮಿ(Daren Sammy) ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ನಿರ್ದೇಶಕ ಮೈಲ್ಸ್ ಬಾಸ್ಕೊಂಬೆ ಖಚಿತಪಡಿಸಿದ್ದಾರೆ.

ಡ್ಯಾರೆನ್ ಸ್ಯಾಮಿ ಅವರು 2023ರಿಂದ ಅವರು ಏಕದಿನ ಮತ್ತು ಟಿ20 ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಇದೀಗ ಟೆಸ್ಟ್‌ ತಂಡಕ್ಕೂ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಏಪ್ರಿಲ್‌ 1ರಿಂದ ಟೆಸ್ಟ್‌ ತಂಡದ ಕೋಚಿಂಗ್‌ ಆರಂಭಿಸಲಿದ್ದಾರೆ.

ವಿಂಡೀಸ್‌ ತಂಡದ ನಾಯಕನಾಗಿ 2 ಬಾರಿ ಟಿ20 ವಿಶ್ವಕಪ್‌ ಗೆದ್ದ ಹಿರಿಮೆ ಡ್ಯಾರೆನ್ ಸ್ಯಾಮಿ ಅವರದ್ದಾಗಿದೆ. 38 ಟೆಸ್ಟ್‌, 126 ಏಕದಿನ ಮತ್ತು 68 ಟಿ20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್‌ನಲ್ಲಿ 1323(1 ಶತಕ, 5 ಅರ್ಧಶತಕ), ಏಕದಿನದಲ್ಲಿ 1871(9 ಅರ್ಧಶತಕ), ಟಿ20ಯಲ್ಲಿ 587 ರನ್‌ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ ಶ್ರೇಷ್ಠ ಸಾಧನೆ ತೋರಿರುವ ಸ್ಯಾಮಿ ಟೆಸ್ಟ್‌ನಲ್ಲಿ 84, ಏಕದಿನದಲ್ಲಿ 81, ಟಿ20ಯಲ್ಲಿ 44 ವಿಕೆಟ್‌ ಕಡೆವಿದ್ದಾರೆ.

ಯುವ ಪ್ರತಿಭೆಗಳನ್ನು ಬೆಳೆಸಲು ಪ್ರಯತ್ನ: ನೀತಾ ಅಂಬಾನಿ

ಡಬ್ಲ್ಯುಪಿಎಲ್-2025ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ಮುಂಬೈ ಇಂಡಿಯನ್ಸ್ ಗೆ ಸೇರ್ಪಡೆಗೊಳಿಸಿದ ಬಳಿಕ ತಂಡದ ಬಲಾಬಲದ ಬಗ್ಗೆ ಫ್ರಾಂಚೈಸಿ ಮಾಲೀಕರಾದ ನೀತಾ ಎಂ. ಅಂಬಾನಿ ಅವರು ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಜತೆಗೆ ತಂಡದ ದೃಷ್ಟಿಕೋನವನ್ನು ವಿವರಿಸಿದ ಅವರು, ಯುವ ಆಟಗಾರ್ತಿಯರನ್ನು ಬೆಳೆಸುವ ತಂಡದ ಬಯಕೆಯನ್ನು ಹಂಚಿಕೊಂಡರು.

ಹರಾಜಿನ ನಂತರ ಮಾತನಾಡಿದ ನೀತಾ ಎಂ. ಅಂಬಾನಿ, “ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ ಮತ್ತು ಇಂದು ನಾವು ಒಟ್ಟುಗೂಡಿಸಿದ ತಂಡದಿಂದ ತೃಪ್ತರಾಗಿದ್ದೇವೆ. ಇದೇ ಸಮಯದಲ್ಲಿ ಹರಾಜು ಪ್ರಕ್ರಿಯೆಗಳು ಅತ್ಯಾಕರ್ಷಕ ಮತ್ತು ಭಾವನಾತ್ಮಕವಾಗಿರುತ್ತವೆ. ಇಂದು ಹರಾಜಿನಲ್ಲಿ ಭಾಗವಹಿಸಿದ ಎಲ್ಲಾ ಹುಡುಗಿಯರ ಬಗ್ಗೆ ಮತ್ತು ಈಗ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾಗಿರುವ ಜಿ. ಕಮಲಿನಿ, ನಾಡಿನ್ ಡಿ ಕ್ಲರ್ಕ್, ಸಂಸ್ಕೃತಿ ಗುಪ್ತಾ ಮತ್ತು ಅಕ್ಷಿತಾ ಮಹೇಶ್ವರಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದರು.

“ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಯುವ ಪ್ರತಿಭೆಗಳನ್ನು ಶೋಧಿಸಲು, ಪೋಷಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ನಾವು ಇದನ್ನು ನಮ್ಮ ಪುರುಷರ ತಂಡದೊಂದಿಗೂ ಮಾಡಿದ್ದೇವೆ ಮತ್ತು ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಈಗ ತಿಲಕ್ ವರ್ಮ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನೋಡುವಾಗ ಹೆಮ್ಮೆಯ ಭಾವನೆ ಬರುತ್ತದೆ. ನಾವು ನಮ್ಮ ಹುಡುಗಿಯರೊಂದಿಗೆ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ”ಎಂದರು.