Tuesday, 17th December 2024

Priyanka Gandhi: ನಮ್ಮ ಸಂಸದರಿಗೆ ಅಷ್ಟು ಧೈರ್ಯ ಇಲ್ಲ; ಪ್ಯಾಲೆಸ್ತೀನ್ ಬ್ಯಾಗ್‌ ಹಿಡಿದ ಪ್ರಿಯಾಂಕಾ ಹೊಗಳಿದ ಪಾಕ್‌ ಮಾಜಿ ಸಚಿವ

Priyanka Gandhi

ಇಸ್ಲಾಮಾಬಾದ್‌: ಕಾಂಗ್ರೆಸ್‌ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಸದ್ಯ ತಮ್ಮ ಬ್ಯಾಗ್‌ಗಳ ಮೂಲಕ ಸುದ್ದಿಯಲ್ಲಿಯಲ್ಲಿದ್ದಾರೆ. ಇತ್ತೀಚೆಗೆ ಸಂಸತ್‌ ಭವನಕ್ಕೆ ಮೋದಿ ಹಾಗೂ ಅದಾನಿ ಚಿತ್ರವಿರುವ ಬ್ಯಾಗ್‌ ತೆಗೆದುಕೊಂಡು ಹೋಗಿದ್ದ ಅವರು ಸೋಮವಾರ ಚಳಿಗಾಲದ ಸಂಸತ್‌ ಅಧಿವೇಶನಕ್ಕೆ ಪ್ಯಾಲೆಸ್ತೀನ್ (Palestine Bag) ಎಂಬ ಬರಹ ಇರುವ ಬ್ಯಾಗ್‌ನೊಂದಿಗೆ ತೆರಳಿದ್ದು, ಎಲ್ಲಡೆ ಚರ್ಚೆಯಾಗುತ್ತಿದೆ. ಇದೀಗ ಪಾಕಿಸ್ತಾನದ (Pakistan) ರಾಜಕಾರಣಿ ಫವಾದ್ ಚೌಧರಿ (Fawad Chaudhry) ಕಾಂಗ್ರೆಸ್‌ ನಾಯಕಿಯನ್ನು ಹೊಗಳಿದ್ದಾರೆ.

ಪ್ರಿಯಾಂಕಾ ಗಾಂಧಿ ಪರ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕ ಫವಾದ್ ಚೌಧರಿ ಅವರು ಇಂತಹ ಧೈರ್ಯವನ್ನು ನಮ್ಮ ರಾಜಕಾರಣಿಗಳು ಯಾರೂ ಪ್ರದರ್ಶಿಸಲಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಪಾಕಿಸ್ತಾನಿ ರಾಜಕಾರಣಿಗಳನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ “ಜವಾಹರಲಾಲ್ ನೆಹರು ಅವರಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗಳು ಹಂದಿಮರಿಗಳ ನಡುವೆ ಎತ್ತರವಾಗಿ ನಿಂತಿದ್ದಾಳೆʼʼ ಎಂದು ಹೇಳಿದ್ದಾರೆ. ʼʼಇದುವರೆಗೆ ಯಾವುದೇ ಪಾಕಿಸ್ತಾನಿ ಸಂಸತ್ತಿನ ಸದಸ್ಯರು ಅಂತಹ ಧೈರ್ಯವನ್ನು ಪ್ರದರ್ಶಿಸಿಲ್ಲʼʼ ಎಂದು ಇಮ್ರಾನ್ ಖಾನ್ ಸರ್ಕಾರದ ಮಾಜಿ ಸಚಿವ ಕಿಡಿ ಕಾರಿದ್ದಾರೆ.

ಬಾಂಗ್ಲಾದೇಶದ ಬ್ಯಾಗ್‌ ಹಿಡಿದು ಬಂದ ಪ್ರಿಯಾಂಕಾ

ಸೋಮವಾರವಷ್ಟೇ ಪ್ಯಾಲೆಸ್ತೀನ್ ಬ್ಯಾಗ್‌ ಹಿಡಿದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದ ಪ್ರಿಯಾಂಕಾ ಗಾಂಧಿ ಮಂಗಳವಾರ ನಡೆದ ಸಂಸತ್‌ ಅಧಿವೇಶನಕ್ಕೆ  ಬಾಂಗ್ಲಾದೇಶದ ಅಲ್ಪಸಂಖ್ಯಾತರ ದುಃಸ್ಥಿತಿಯ ಬಗ್ಗೆ ಘೋಷಣೆ ಇರುವ ಹೊಸ ಬ್ಯಾಗ್‌ನೊಂದಿಗೆ ತೆರಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ನಡೆದ ಅಲ್ಪಸಂಖ್ಯಾತರ ಮೇಲಿನ ದಾಳಿಯ ಘಟನೆಗಳನ್ನು ಉಲ್ಲೇಖಿಸಿ “ಬಾಂಗ್ಲಾದೇಶಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೊಂದಿಗೆ ನಿಂತುಕೊಳ್ಳಿ” ಎಂದು ಆಕೆಯ ಬ್ಯಾಗ್‌ನಲ್ಲಿ ಉಲ್ಲೇಖಿಸಲಾಗಿದೆ. 

ಸೋಮವಾರ ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿಷಯವನ್ನು ಪ್ರಸ್ತಾಪಿಸಲು ಸರ್ಕಾರಕ್ಕೆ ಕರೆ ನೀಡಿದರು. ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಢಾಕಾದೊಂದಿಗೆ ರಾಜತಾಂತ್ರಿಕವಾಗಿ ತೊಡಗಿಸಿಕೊಳ್ಳಲು ಅವರು ಕೇಂದ್ರವನ್ನು ಒತ್ತಾಯಿಸಿದರು.

ʼʼಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ವಿಷಯವನ್ನು ಸರ್ಕಾರವು ಪ್ರಸ್ತಾಪಿಸಬೇಕು. ನಾವು ಬಾಂಗ್ಲಾದೇಶ ಸರ್ಕಾರದೊಂದಿಗೆ ಚರ್ಚಿಸಬೇಕು ಮತ್ತು ನೋವಿನಲ್ಲಿರುವವರಿಗೆ ಬೆಂಬಲ ನೀಡಬೇಕು” ಎಂದು ಅವರು ಹೇಳಿದರು.

ಪ್ಯಾಲಸ್ತೀನ್‌ ಬ್ಯಾಗ್‌ ವಿವಾದದ ಬಗ್ಗೆ ಮಾತನಾಡಿದ ಪ್ರಿಯಾಂಕಾ ನಾನು ಈಗ ಯಾವ ಬಟ್ಟೆಯನ್ನು ಧರಿಸುತ್ತೇನೆ ಎಂದು ಯಾರು ನಿರ್ಧರಿಸುತ್ತಾರೆ? ಇದು ವಿಶಿಷ್ಟವಾದ ಪಿತೃಪ್ರಭುತ್ವವಾಗಿದೆ, ಮಹಿಳೆಯರು ಕೂಡ ಏನು ಧರಿಸುತ್ತಾರೆ ಎಂಬುದನ್ನು ನೀವು ನಿರ್ಧರಿಸುತ್ತೀರಿ. ನಾನು ಅದನ್ನು ಅನುಸರಿಸುವುದಿಲ್ಲ. ನನಗೆ ಬೇಕಾದುದನ್ನು ನಾನು ಧರಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : Mallikarjun Kharge: ಒಂದು ರಾಷ್ಟ್ರ, ಒಂದು ಚುನಾವಣೆ ಅಸಾಧ್ಯ; ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು