Tuesday, 17th December 2024

Farmers Protest: ಕೇಂದ್ರದ ವಿರುದ್ಧ ರೈಲ್ ರೋಕೋ ಪ್ರತಿಭಟನೆಗೆ ರೈತ ನಾಯಕ ಪಂಧೇರ್ ಕರೆ

Farmers Protest

ಚಂಡೀಗಢ: ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಂಜಾಬ್‌-ಹರಿಯಾಣ (Punjab – Haryana) ಗಡಿಯಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಯೋಜನೆ ಮೂರು ಬಾರಿ ವಿಫಲವಾದ ನಂತರ ಕೇಂದ್ರದ (Central Government) ಮೇಲೆ ಒತ್ತಡವನ್ನು ಹೆಚ್ಚಿಸಲು ಹೊಸ ಕ್ರಮಗಳನ್ನು ಘೋಷಿಸಿದ್ದಾರೆ.

ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ (Sarwan Singh Pandher) ಅವರು ಪಂಜಾಬ್‌ನಲ್ಲಿ ರೈಲ್ ರೋಕೋ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಬುಧವಾರ (ಡಿ. 18) ಮಧ್ಯಾಹ್ನ 12ರಿಂದ ಮೂರು ಗಂಟೆಗಳ ಕಾಲ ‘ರೈಲ್ ರೋಕೋ’ (ರೈಲು ತಡೆ) ನಡೆಸುವುದಾಗಿ ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಂಜಾಬ್ ಜನತೆಗೆ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ʼʼಡಿ. 18ರಂದು ನಡೆಯುವ ‘ರೈಲ್ ರೋಕೋ’ ಆಂದೋಲನದಲ್ಲಿ ಭಾಗವಹಿಸಲು ನಾನು ಪಂಜಾಬ್‌ನ ಜನರಿಗೆ ಮನವಿ ಮಾಡಲು ಬಯಸುತ್ತೇನೆ. ರೈಲ್ವೆ ಹಳಿಗಳ ಬಳಿ ವಾಸಿಸುವ ಪಂಜಾಬ್‌ನ 13,000 ಹಳ್ಳಿಗಳ ಎಲ್ಲ ಜನರು ತಮ್ಮ ಹತ್ತಿರದ ರೈಲ್ವೆ ಕ್ರಾಸಿಂಗ್‌ಗಳು ಮತ್ತು ರೈಲು ನಿಲ್ದಾಣಗಳ ಬಳಿ ರೈಲುಗಳನ್ನು ಮಧ್ಯಾಹ್ನ 12 ಗಂಟೆಯಿಂದ 3 ವರೆಗೆ ನಿರ್ಬಂಧಿಸಬೇಕುʼʼ ಎಂದು ಹೇಳಿದ್ದಾರೆ.

ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಕೇಳಿದಾಗ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅವರಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ ಎಂದು ಪಂಧೇರ್ ಎಚ್ಚರಿಸಿದ್ದಾರೆ.

ಡಿಸೆಂಬರ್ 6, ಡಿಸೆಂಬರ್ 8 ಮತ್ತು ಮತ್ತೆ ಡಿಸೆಂಬರ್ 14ರಂದು ಪ್ರತಿಭಟನಾ ನಿರತ ರೈತರು ಕಾಲ್ನಡಿಗೆಯ ಮೂಲಕ ದೆಹಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಹರಿಯಾಣದ ಭದ್ರತಾ ಸಿಬ್ಬಂದಿ ಅವರಿಗೆ ಮುಂದುವರಿಯಲು ಅನುಮತಿ ಕೊಡಲಿಲ್ಲ. ದೆಹಲಿಗೆ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಇದರಿಂದ ಸುಮಾರು 17 ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ : Farmers Protest: ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ; ಹತ್ತಾರು ಮಂದಿಗೆ ಗಾಯ