Saturday, 23rd November 2024

ಅಡಕೆ, ವೀಳ್ಯದೆಲೆ, ಸುಣ್ಣದ ಕಥೆ

ಸುಧಕ್ಕನ ಕತೆಗಳು

ಸುಧಾಮೂರ್ತಿ

ಇಂದು ವಿಷ್ಣುಕಾಕಾನ ಮನೆಯಲ್ಲಿ ಎಲ್ಲರಿಗೂ ಔತಣ. ದಾಮೂ ಬಗೆಬಗೆಯ ತಿನಿಸು ಮಾಡಿದ್ದ. ಉತ್ತರ ಭಾರತದ ಕಚೋರಿ, ಸಮೋಸ, ಅಂಗಡಿಯಿಂದ ಬಂದಿದ್ದವು. ಅಜ್ಜ ಧಾರವಾಡದ ಪೇಡ ಹಾಗೂ ಗೋಕಾಕದ ಕರದಂಟು ತರಿಸಿದ್ದರು.

ಅಜ್ಜಿ ಇಂದ್ರ ಬೇಳೆ ಒಬ್ಬಟ್ಟು ಮಾಡಿದ್ದಳು. ಮಕ್ಕಳಿಗೆಲ್ಲ ಖುಷಿಯೋ ಖುಷಿ. ವಿಷ್ಣು ಕಾಕಾನ ಮನೆಯಲ್ಲಿ ಒಂದು ಹಳೆಯ ಕಾಲದ ಡಬ್ಬಿ ಹಿತ್ತಾಳೆಯದು ಇದ್ದಿತು. ಇಂಥ ಡಬ್ಬಿಯನ್ನು ಅವರು ನೋಡಿರಲೇ ಇಲ್ಲ. ಅದನ್ನು ತೆಗೆದಾಗ ಅದರಲ್ಲಿ ಅನೇಕ ಖಾನೆ ಗಳಿದ್ದವು. ಒಂದರಲ್ಲಿ ಅಡಕೆ, ಇನ್ನೊಂದರಲ್ಲಿ ಸುಣ್ಣ, ಮತ್ತೊಂದರಲ್ಲಿ ಎಲೆ ಹೀಗೆ ಇದ್ದವು.

ಮಕ್ಕಳೇ ಇದಕ್ಕೆೆ ಹಳೆಯ ಕಾಲದಲ್ಲಿ ‘ತಾಂಬೂಲ ಸಂದೂಕ’ ಅಥವಾ ‘ಪಾನ್‌ಡಬ್ಬಿ’ ಅಂತಿದ್ರು. ಎಲ್ಲರ ಮನೆಯಲ್ಲಿಯೂ ಇದು ಇದ್ದೇ ಇರುತ್ತಿತ್ತು. ಈಗ ಎಲ್ಲರೂ ಪಾನ್ ಮಾರ್ಕೇಟ್‌ನಿಂದ ತಂದುಕೊಳ್ಳುತ್ತಾರೆ ಎಂದರು. ಅನುಷ್ಕಾ, ಒಂದು ಎಲೆಯ ಮೇಲೆ ಹೆಚ್ಚು ಸುಣ್ಣ ಹಾಕಿದಳು. ಬೇಡ ಬೇಡ ಎಂದರೂ ಅದನ್ನು ಬಾಯಲ್ಲಿ ಹಾಕಿ ಕಚ್ಚಿದಳು. ಕೂಡಲೇ ಅಯ್ಯೋ ‘ಖಾರ ಖಾರ,
ನಾಲಿಗೆ ಸುಡ್ತಾ ಇದೆ’ ಎಂದು ಕೂಗಿದಳು.

ಅಜ್ಜಿ ಅವಳಿಗೆ ಕೂಡಲೇ ಬಾಯಿಂದ ಎಲೆ ಉಗಳಿಸಿ, ಕೊಬ್ಬರಿಯನ್ನು ತಿನ್ನಲು ಕೊಟ್ಟಳು. ‘ಮಕ್ಕಳೇ ಈ ಪಾನ್ ಕಥೆ ನಿಮಗೆ ಗೊತ್ತಾ? ಅದನ್ನು ಸರಿಯಾದ ರೀತಿಯಲ್ಲಿ ತಕ್ಕಷ್ಟೇ ಪ್ರಮಾಣ ಇರಬೇಕೆಂದು ಶಿವ ಪಾರ್ವತಿ ಹೇಳಿದ್ದಾರೆ’ ಎಂದಳು. ಅಜ್ಜಿ ಕಥೆ..ಕಥೆ.. ಎಂದರು ಮಕ್ಕಳು.

***
ಭಾನು ಮತ್ತು ವೀರು ಅಣ್ಣ ತಮ್ಮಂದಿರು. ಅವರ ತಾಯಿ ತಂದೆ ಇವರು ಚಿಕ್ಕವರಾಗಿರುವಾಗಲೇ ತೀರಿಹೋಗಿದ್ದರು. ಅಣ್ಣ – ತಮ್ಮ ತುಂಬಾ ತುಂಬ ಪ್ರೀತಿಯಿಂದ ಇದ್ದರು.

ಭಾನು ದೊಡ್ಡವನಾದ ಮೇಲೆ ಅವನ ಮದುವೆಯಾಯಿತು. ಆತನ ಹೆಂಡತಿ ಭಾರತಿ ತುಂಬಾ ಒಳ್ಳೆಯ ಹೆಂಗಸು. ವೀರುನನ್ನು ತನ್ನ ಸ್ವತಃ ತಮ್ಮನಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ವೀರು ಈಗ ಬೆಳೆದು ದೊಡ್ಡವನಾದನು. ಅವನಿಗೆ ಈಗ ಯೌವನದ
ಹುಮ್ಮಸ್ಸು. ಹೊಲವೋ ಚಿಕ್ಕದು. ಅದರಿಂದ ಮುಂದೆ ಜೀವನ ಕಷ್ಟವಾಗಬಹುದು. ಅದಕ್ಕೆ ಬೇರೆ ಕೆಲಸ ನೋಡಿದರೆ ಒಳ್ಳೆಯದು ಎಂದು ಯೋಚಿಸಿದ ತರುಣ.

ಆ ಪ್ರದೇಶದ ರಾಜ ತನ್ನ ಸೈನ್ಯದಲ್ಲಿ ಜನರನ್ನು ಸೇರಿಸಿಕೊಳ್ಳುತ್ತಿದ್ದಾನೆ ಎಂದು ಊರಿನಲ್ಲಿ ಡಂಗುರ ಸಾರಲಾಯಿತು. ವೀರು ಎಲ್ಲರಿಗಿಂತ ಮೊದಲು ಹೋದ. ಅವನಿಗೆ ಕೆಲಸವೂ ಆಯಿತು. ದಂಡಿನೊಂದಿಗೆ ವೀರು ಹೊರಟ. ಅಣ್ಣ, ಅತ್ತಿಗೆ ಕಣ್ಣಲ್ಲಿ ನೀರು ತುಂಬಿಕೊಂಡರು. ಭಾನು, ವೀರುನನ್ನು ತಬ್ಬಿಕೊಂಡು ‘ವೀರು ನಿನ್ನ ಕ್ಷೇಮ ಸಮಾಚಾರವನ್ನು ಮೇಲಿಂದ ಮೇಲೆ ಹೇಳಿಕಳುಹಿಸು’ ಎಂದನು.

ವೀರು ಹೋಗಿ ಅನೇಕ ದಿನಗಳಾದವು. ಭಾರೀ ಯುದ್ಧವೇ ನಡೆದಿತ್ತಂತೆ. ಅನೇಕರು ಸತ್ತುಹೋದರಂತೆ. ಕೆಲವರು ಅಂಗಾಂಗ ಗಳನ್ನು ಕಳೆದುಕೊಂಡರಂತೆ. ಹೀಗೆ ಯುದ್ಧದ ಸುದ್ದಿ ಬರಲಾರಂಭಿಸಿದವು. ಭಾನು ಮತ್ತು ಭಾರತಿ ತೀರ ಆತಂಕಕ್ಕೆ ಒಳಗಾದರು.
ಯುದ್ಧ ಮುಗಿಯಿತು. ದಂಡಿನವರು ಊರಿಗೆ ಬರತೊಡಗಿದರು. ಆದರೆ ವೀರುವಿನ ಸುದ್ದಿಯೇ ಇಲ್ಲ. ಬರುವವರನ್ನು ಭಾನು ನಿಲ್ಲಿಸಿ ‘ನನ್ನ ತಮ್ಮ ವೀರುವನ್ನು ನೋಡಿದ್ದೀರಾ?’ ಎಂದು ಕೇಳುತ್ತಿದ್ದ.

‘ಹಾಂ. ನೋಡಿದ್ದೆ. ಯುದ್ಧದಲ್ಲಿ ಗಾಯಗೊಂಡಿದ್ದ. ಮನೆಗೆ ಹೋಗ್ತೀನಿ ಅಂತಿದ್ದಾ’ ಎಂದರು ಕೆಲವರು. ‘ಹಾಂ ನೋಡಿದ್ದೆ. ಚೆನ್ನಾಗಿಯೇ ಇದ್ದ. ನೀವು ಮುಂದೆ ಹೋಗಿ ಆಮೇಲೆ ನಾನು ಬರ್ತೀನಿ’ ಎಂದರು ಹಲವರು. ‘ನಾವು ಅವನನ್ನು ನೋಡೇ ಇಲ್ಲವಲ್ಲ. ಎಲ್ಲಿದ್ದಾನೋ ಗೊತ್ತಿಲ್ಲ’ ಎಂದರು ಇನ್ನು ಕೆಲವರು.

ಒಟ್ಟಾರೆ ವೀರು ಬರಲೇ ಇಲ್ಲ. ವೀರುವಿನ ಚಿಂತೆಯಲ್ಲಿ ಭಾನು, ಭಾರತಿ ಸೊರಗಿಹೋದರು. ಒಂದು ದಿನ ಭಾನು‘ಭಾರತಿ ನಾನು ವೀರೂನ್ನ ಹುಡುಕಿಕೊಂಡು ಬರ್ತೀನಿ’ ಎಂದ. ‘ನಾನೂ ನಿಮ್ಮೊಂದಿಗೆ ಬರ್ತೀನಿ. ಅವನು ನನ್ನ ಸ್ವಂತ ತಮ್ಮನ ಹಾಗೆ’ ಎಂದಳು ಭಾರತಿ. ಗಂಡ ಹೆಂಡಿರು ಒಟ್ಟಾಗಿ ಊರಿನಿಂದ ಊರಿಗೆ ವೀರೂನನ್ನು ಹುಡುಕುತ್ತಾ ನಡೆದರು. ಎಲ್ಲಿಯೂ ಆತನ ಸುದ್ದಿಯೇ ಇಲ್ಲ. ಹೀಗೆ ಹಲವಾರು ದಿನಗಳು ಕಳೆದವು.

ಒಂದು ದಿನ ಒಂದು ಹಳ್ಳಿಯ ಹತ್ತಿರ ಬಂದರು. ಅಲ್ಲಿ ತೊರೆಯೊಂದು ಹರಿಯುತ್ತಿತ್ತು. ದಣಿದ ಭಾರತಿ ನೀರು ಕುಡಿದು ಕುಳಿತಳು. ಹತ್ತಿರವೇ ಇದ್ದ ಗುಡಿಸಲಿನ ಜನ ಬಂದರು. ಭಾರತಿ ಆಯಾಸದಿಂದ ಕುಸಿದವಳು ಏಳಲೇ ಇಲ್ಲ. ಭಾನು ಒಂದೇ ಸಮನೆ ದುಃಖಿಸಿದ. ಉಳಿದವರೆಲ್ಲ ಅವನನ್ನು ಸಂತೈಸಿದರು. ಆದರೂ ಭಾನು ಅಲ್ಲಿಯೇ ಪ್ರಾಣಬಿಟ್ಟ.

ಹಳ್ಳಿಯ ಜನ ಮಮ್ಮಲನೇ ಮರುಗಿದರು. ಕೆಲವು ದಿನ ಕಳೆಯಿತು. ಒಂದು ದಿನ ನೋಡಲಾಗಿ ಅಲ್ಲಿ ಒಂದು ಕೋಲಿನಂತೆ ಮರ ಬೆಳೆದಿತ್ತು. ಅಂಥ ಮರವನ್ನು ಯಾರೂ ನೋಡಿಯೇ ಇರಲಿಲ್ಲ. ಅದಕ್ಕೆ ಎಲೆ ಹೆಸರಿನ ಬಳ್ಳಿ ಒಂದು ಬೆಳೆದು ತಬ್ಬಿಕೊಂಡಿತ್ತು.
ಅಂಥ ಹಸಿರಾದ ಎಲೆ ಬಳ್ಳಿ  ಸುತ್ತಮುತ್ತಲು ಎಲ್ಲಿಯೂ ಇರಲೇ ಇಲ್ಲ. ಜನ ಅಚ್ಚರಿಪಟ್ಟರು.

ಕಾಲ ಕಳೆಯಿತು. ಒಂದು ದಿನ ಸೈನಿಕನೊಬ್ಬನು ಅಲ್ಲಿಗೆ ಬಸವಳಿದು ಬಂದ. ತುಂಬಾ ದಣಿದುಹೋಗಿದ್ದ. ‘ತಮ್ಮ ನೀನು ಈ ಊರಿನವನಲ್ಲ. ಯಾವೂರು? ಎಂದು ಗುಡಿಸಲಿನಲ್ಲಿದ್ದವರು ಕೇಳಿದರು. ‘ನನ್ನ ಹೆಸರು ವೀರು. ನಾನು ದಂಡಿನಲ್ಲಿದ್ದೇನೆ.
ಮೊನ್ನೆ ಯುದ್ಧವಾಯಿತಲ್ಲ. ಅಲ್ಲಿ ನಾನು ಭಾಗವಹಿಸಿದ್ದೆೆ. ಶೌರ್ಯದಿಂದ ಗೆದ್ದಿದ್ದಕ್ಕಾಗಿ ಅರಸರು ನನಗೆ ಬಹುಮಾನ ಕೊಟ್ಟರು. ಬರುವಾಗ ದಾರಿ ತಪ್ಪಿಹೋಯಿತು. ಎಲ್ಲರೂ ಮನೆಗೆ ಬಂದ ಮೇಲೆ ನಾನು ಹೊರಟೆ. ಮನೆಮುಟ್ಟುವಷ್ಟರಲ್ಲಿ ನಮ್ಮಣ್ಣ,
ಅತ್ತಿಗೆ ನನ್ನನ್ನು ಹುಡುಕಲು ಊರುಬಿಟ್ಟು ಹೋದರೆಂದು ತಿಳಿಯಿತು. ಪಾಪ ಅವರೆಷ್ಟು ಒಳ್ಳೆಯವರು.

ಎಲ್ಲಿ ಹೋದರೋ ಏನೋ, ನಾನು ಅವರನ್ನು ಹುಡುಕಿ ಹುಡುಕಿ ಸಾಕಾಯಿತು. ನೀವು ಯಾರಾದರೂ ಬಂದು ಇಂಥಾ ದಂಪತಿಯನ್ನು ನೋಡಿದ್ದೀರಾ? ಎಂದನು. ಹಳ್ಳಿಯ ಜನರೆಲ್ಲ ಸೇರಿತು. ಈ ತೊರೆಯ ಬಳಿಗೆ ಬಂದು ಕುಸಿದುಹೋದ ದಂಪತಿಗಳ ಸುದ್ದಿ ಹೇಳಿದರು. ಅವರ ಸುದ್ದಿಯನ್ನು ತಿಳಿದು ಅವರು ಭಾನು ಮತ್ತು ಭಾರತಿ ಎಂದು ತಿಳಿದು ವೀರು ಗಳಗಳನೇ ಅತ್ತ. ದುಃ
ಖದಿಂದ ಅಲ್ಲಿಯೇ ಕುಸಿದ. ಹಳ್ಳಿಯ ಜನ ನಿಬ್ಬೆರಗಾದರು.

ಕಾಲಾಂತರದಲ್ಲಿ ವೀರು ಇದ್ದ ಜಾಗದಲ್ಲಿ ಬಿಳಿಯ ಪುಟ್ಟ ಮೃದುವಾದ ಕಲ್ಲಿನಂಥದ್ದು ಬೆಳೆಯಿತು. ಅದನ್ನು ಬೆರಳಿನಿಂದ ಮುಟ್ಟಿದರೆ ಕೈಬೆರಳು ಬೆಳ್ಳಗಾಗುತ್ತಿತ್ತು. ಜನರು ಇದೇನು ಅಚ್ಚರಿ ಅಂದುಕೊಳ್ಳುತ್ತಿದ್ದರು. ಆಕಾಶದಲ್ಲಿದ್ದ ಶಿವ – ಪಾರ್ವತಿಯರು ಇದನ್ನು ನೋಡಿ, ‘ಪಾರ್ವತಿ, ಎಂಥ ಪ್ರೀತಿ ಅಣ್ಣ ತಮ್ಮಂದಿರದ್ದು ನೋಡು’ ಎಂದ.

‘ಎಂಥ ಪ್ರೀತಿ ಗಂಡ ಹೆಂಡತಿಯರದು’ ಎಂದಳು ಪಾರ್ವತಿ. ‘ನಾವೇನಾದರೂ ಅವರ ಈ ಮೂವರ ಪ್ರೀತಿಗೆ ಒಂದು ಸ್ಮಾರಕ ಮಾಡಬೇಕು’ ‘ಖಂಡಿತ, ಮಾಡಬೇಕು’. ‘ಹಾಗಿದ್ದರೆ ಪಾರ್ವತಿ, ಈ ಗಿಡದ ಕಾಯಿ, ಈ ಬಳ್ಳಿಯ ಎಲೆ, ಆ ಬಿಳಿಯ ಬೆಟ್ಟದ ತುಂಡು ಮೂವರು ಒಂದಕ್ಕೊಂದು ಪೂರಕವಾಗಿ ಮಾಡೋಣ. ಮೂವರನ್ನು ಒಟ್ಟಾಗಿ ಸೇವಿಸಿದರೆ ಆರೋಗ್ಯ, ಪಚನಕ್ಕೆ ಉತ್ತಮ. ಆದರೆ ಅತಿಯಾಗಿ ಅಲ್ಲ. ಅಲ್ಲದೇ ಮದುವೆ, ಜನನ, ನಿಶ್ಚಿತಾರ್ಥ, ಮುಂತಾದ ಸಮಾರಂಭದಲ್ಲಿ ಈ ಮೂವರು ಇರಲೇಬೇಕು. ಅದಕ್ಕೆ ತಾಂಬೂಲ ಎಂದು ಕರೆಯೋಣ ಎಂದ ಶಿವ.

‘ಹೌದು ಇಂದಿನಿಂದ ಭಾನು ಅಡಕೆ ಮರದಂತೆ, ಭಾರತಿ ವೀಳ್ಯದ ಎಲೆಯೆಂದು, ವೀರು ಸುಣ್ಣವೆಂದು ಈ ಭೂಲೋಕದಲ್ಲಿ ಪ್ರಸಿದ್ಧರಾಗಲಿ’ ಎಂದು ಹರಸಿದಳು ಪಾರ್ವತಿ. ಶಿವನ ಅರ್ಧಾಂಗಿ.