Tuesday, 17th December 2024

IND vs AUS: ರೋಹಿತ್‌ ಶರ್ಮಾರ ಬ್ಯಾಟಿಂಗ್‌ ವೈಫಲ್ಯಕ್ಕೆ ಪ್ರಮುಖ ಕಾರಣ ತಿಳಿಸಿದ ಚೇತೇಶ್ವರ್‌ ಪೂಜಾರ!

IND vs AUS: ʻRohit Sharma not opening, major reason behind his poor formʼ,says Cheteshwar Pujara

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್‌ (IND vs AU) ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ವೈಫಲ್ಯ ಮುಂದುವರಿದಿದೆ. ಆ ಮೂಲಕ ಹಿಟ್‌ಮ್ಯಾನ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ರೋಹಿತ್‌ ಶರ್ಮಾ ಅವರು ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಲು ಪ್ರಮುಖ ಕಾರಣವೇನೆಂದು ಭಾರತದ ಮಾಜಿ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಬಹಿರಂಗಪಡಿಸಿದ್ದಾರೆ.

ಎರಡನೇ ಮಗುವಿನ ಕಾರಣ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್‌ ಶರ್ಮಾ, ಎರಡನೇ ಟೆಸ್ಟ್‌ ಪಂದ್ಯಕ್ಕೆ ತಂಡಕ್ಕೆ ಮರಳಿದ್ದರು. ಆದರೆ, ಈ ಪಂದ್ಯದಲ್ಲಿ ಅವರು ಎರಡೂ ಇನಿಂಗ್ಸ್‌ಗಳಿಂದ ಕೇವಲ 9 ರನ್‌ಗಳನ್ನು ಗಳಿಸಿದ್ದರು. ಇದೀಗ ನಡೆಯುತ್ತಿರುವ ಬ್ರಿಸ್ಬೇನ್‌ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿಯೂ ವೈಫಲ್ಯ ಅನುಭವಿಸಿದ್ದಾರೆ. ಅವರು ಆಡಿದ 27 ಎಸೆತಗಳಲ್ಲಿ ಕೇವಲ 10 ರನ್‌ಗಳಿಗೆ ಸೀಮಿತರಾಗಿದ್ದರು. ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಅಲೆಕ್ಸ್‌ ಕೇರಿಗೆ ಕ್ಯಾಚ್‌ ಕೊಟ್ಟಿದ್ದರು.

24ನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್‌ ಆಫ್‌ ಸ್ಟಂಪ್‌ ಹೊರಗಡೆ ಚೆಂಡನ್ನು ಎಸೆದಿದ್ದರು. ಈ ವೇಳೆ ರೋಹಿತ್‌ ಶರ್ಮಾ ಡ್ರೈವ್‌ ಮಾಡಲು ಪ್ರಯತ್ನಿಸಿದರು. ಆದರೆ, ಈ ಎಸೆತ ಡ್ರೈವ್‌ಗೆ ಪೂರಕವಾಗಿರಲಿಲ್ಲ ಹಾಗೂ ಟೀಮ್‌ ಇಂಡಿಯಾ ನಾಯಕ ಮೊದಲೇ ಡ್ರೈವ್‌ಗೆ ಸಿದ್ದರಾಗಿದ್ದರು. ಇದರ ಪರಿಣಾಮವಾಗಿ ಚೆಂಡು ಬ್ಯಾಟ್‌ಗೆ ತಾಗಿ ವಿಕೆಟ್‌ ಕೀಪರ್‌ ಅಲೆಕ್ಸ್‌ ಕೇರಿ ಅವರ ಕೈಗೆ ಸೇರಿತ್ತು.

ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಚೇತೇಶ್ವರ್‌ ಪೂಜಾರ, “ಡ್ರೈವ್‌ ಮಾಡುವ ಎಸೆತ ಇದಾಗಿರಲಿಲ್ಲ. ಪ್ಯಾಟ್‌ ಕಮಿನ್ಸ್‌ ಎಸೆತ ಫುಲ್ಲರ್‌ ಲೆನ್ತ್‌ ಆಗಿತ್ತ ಹಾಗೂ ಡ್ರೈವ್‌ ಮಾಡಲು ತುಂಬಾ ಕಷ್ಟವಿತ್ತು. ಡ್ರೈವ್‌ ಬದಲು ಫ್ರಂಟ್‌ ಫುಟ್‌ ಪಂತ್‌ ಮಾಡಬೇಕಿತ್ತು. ಅಲ್ಲದೆ ನೀವು ಕಠಿಣವಾಗಿ ಹೊಡೆಯಲು ಪ್ರಯತ್ನಿಸುವ ಮೂಲಕ ಡಿಫೆನ್ಸ್‌ ಕೂಡ ಮಾಡಬಹುದಿತ್ತು. ಅವರಿಂದ ರನ್‌ಗಳ ಮೂಡಿಬರುತ್ತಿಲ್ಲ ಹಾಗೂ ಅವರ ಮೇಲೆ ಒತ್ತಡವಿದೆ,” ಎಂದು ಹೇಳಿದ್ದಾರೆ.

ರೋಹಿತ್‌ ಶರ್ಮಾ ಸತತ ವೈಫಲ್ಯಕ್ಕೆ ಕಾರಣವೇನು?

ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಬ್ಯಾಟಿಂಗ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಕೆಎಲ್‌ ರಾಹುಲ್‌ಗೆ ಓಪನಿಂಗ್‌ ಕೊಟ್ಟು ಆರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿಆಡುತ್ತಿರುವುದರಿಂದ ರೋಹಿತ್‌ ಶರ್ಮಾ ವೈಫಲ್ಯ ಅನುಭವಿಸುತ್ತಿದ್ದಾರೆಂಬುದು ಪೂಜಾರ ಅವರ ಅಭಿಪ್ರಾಯ.

“ರೋಹಿತ್‌ ಶರ್ಮಾ ಅವರು ಓಪನರ್‌ ಆಗಿ ಆಡುತ್ತಿದ್ದರು, ಆದರೆ ಈಗ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರು ತಂಡಕ್ಕೋಸ್ಕರ್‌ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ನೀವು ಓಪನರ್‌ ಆಗಿ ಸಾಕಷ್ಟು ವರ್ಷಗಳ ಕಾಲ ಆಡಿದ್ದಾರೆ ಹಾಗೂ ಇದೀಗ ಕ್ರೀಸ್‌ಗೆ ಹೋಗಲು ಜಾಸ್ತಿ ಕಾಯುತ್ತಿದ್ದಾಗ ನಿಮ್ಮ ಬಗ್ಗೆ ಅನುಮಾನಗಳು ಮೂಡುತ್ತವೆ. ಇದರರ್ಥ ನೀವು ಸಾಕಷ್ಟು ಪಂದ್ಯಗಳಲ್ಲಿ ಇನಿಂಗ್ಸ್‌ ಆರಂಭಿಸಿ ತಕ್ಷಣ ಆರನೇ ಕ್ರಮಾಂಕದಲ್ಲಿ ಆಡಿದರೆ ರನ್‌ ಗಳಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ರೋಹಿತ್‌ ಶರ್ಮಾ ರನ್‌ ಗಳಿಸಲು ಪರದಾಡುತ್ತಿದ್ದಾರೆ,” ಎಂದು ಟೆಸ್ಟ್‌ ಸ್ಪೆಷಲಿಸ್‌ ಬ್ಯಾಟ್ಸ್‌ಮನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ: 252-9

ಕಳೆದ 12 ಟೆಸ್ಟ್‌ ಇನಿಂಗ್ಸ್‌ಗಳ ಪೈಕಿ ರೋಹಿತ್‌ ಶರ್ಮಾ ಆರನೇ ಭಾರಿ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ ಕೆಎಲ್‌ ರಾಹುಲ್‌ ಹಾಗೂ ರವೀಂದ್ರ ಜಡೇಜಾ ಅವರು 67 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭಾರತ ತಂಡದ ಚೇತರಿಕೆಗೆ ನೆರವು ನೀಡಿದರು. ಸ್ಟೀವನ್‌ ಸ್ಮಿತ್‌ ಅವರು ಸ್ಲಿಪ್‌ನಲ್ಲಿ ಕೆಎಲ್‌ ರಾಹುಲ್‌ ಅವರ ಸುಲಭದ ಕ್ಯಾಚ್‌ ಅನ್ನು ಬಿಟ್ಟಿದ್ದರು. ಇದನ್ನು ಸಂಪೂರ್ಣ ಸದುಪಯೋಗಪಡಿಸಿಕೊಂಡ ಕನ್ನಡಿಗ 84 ರನ್‌ಗಳನ್ನು ಗಳಿಸಿದ್ದರು. ನಂತರದ ರವೀಂದ್ರ ಜಡೇಜಾ ಕೂಡ ಅರ್ಧಶತಕವನ್ನು ಸಿಡಿಸಿದ್ದರು. ಅಂತಿಮವಾಗಿ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗಳ ನಷ್ಟಕ್ಕೆ 252 ರನ್‌ಗಳನ್ನು ಗಳಿಸಿದೆ ಹಾಗೂ ಇನ್ನೂ 193 ರನ್‌ಗಳ ಹಿನ್ನಡೆಯಲ್ಲಿದೆ.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಶರ್ಮಾಗಿಂತ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ಬೆಸ್ಟ್‌ ಎಂದ ಸೈಮನ್‌ ಕ್ಯಾಟಿಚ್‌!