ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ (Actor Darshan) ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ದರ್ಶನ್ ಸೇರಿ ಏಳು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ತನಿಖಾಧಿಗಳು ನಿರ್ಧರಿಸಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪೂರ್ವಾನುಮತಿ ದೊರೆತ ಬಳಿಕ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದರು.
ಕೋವಿಡ್ ನಿರ್ವಹಣೆ ವೇಳೆ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆ ಪೊಲೀಸರು ನಡೆಸುತ್ತಿದ್ದಾರೆ. ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿಲ್ಲ ಎಂದು ತಿಳಿಸಿದರು.
ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾದರೆ ಚಾರ್ಜ್ ಶೀಟ್ ಅನ್ನು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಬೇಕಿತ್ತು. ಆ ಪ್ರಕ್ರಿಯೆ ಈಗ ಮುಗಿದಿದೆ. ಹೀಗಾಗಿ ಇದೀಗ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Parak movie: ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ: ಬರ್ತಡೇಗೆ ಪರಾಕ್ ಸಿನಿಮಾ ಘೋಷಣೆ
ತೀವ್ರ ಬೆನ್ನು ನೋವಿನ ಹಿನ್ನೆಲೆಯಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅವರು (Actor Darshan) ಸೋಮವಾರ ಮಧ್ಯಾಹ್ನ ಕೋರ್ಟ್‌ಗೆ ತೆರಳಿ ಜಾಮೀನು ಷರತ್ತು ಪೂರೈಸಿ ಮತ್ತೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ವಾಪಸ್ ಆಗಿದ್ದರು.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್‌ಗೆ ಜಾಮೀನು ನೀಡಿ ಹೈಕೋರ್ಟ್ ಡಿಸೆಂಬರ್ 13ರಂದು ಆದೇಶಿಸಿತ್ತು. ಒಂದು ಲಕ್ಷ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತು ಪೂರೈಸಲು ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್ ಅವರ ಮುಂದೆ ದರ್ಶನ್ ಹಾಜರಾಗಿದ್ದರು.
ಈ ವೇಳೆ ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಆದೇಶಿಸಿತ್ತು.