Wednesday, 18th December 2024

Kawasaki Disease: ಮಕ್ಕಳನ್ನು ಕಾಡುವ ಕವಾಸಕಿ ಸಿಂಡ್ರೋಮ್; ಏನಿದು ವಿಚಿತ್ರ ಕಾಯಿಲೆ?

kawasaki

ಮಕ್ಕಳನ್ನು ಕಾಡುವ ಅನೇಕ ಕಾಯಿಲೆಗಳ ಪೈಕಿ ಕವಾಸಕಿ ಸಿಂಡ್ರೋಮ್‌ (Kawasaki Disease) ಕೂಡ ಒಂದು. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಯು ರಕ್ತನಾಳದ ಮೇಲೆ ಪರಿಣಾಮ ಬೀರುವುದರ ಜತೆಗೆ ಅಭಿಧಮನಿ ಮತ್ತು ಅಪಧಮನಿಗೆ ಹಾನಿಯನ್ನುಂಟು ಮಾಡುವ ಸಂಭವ ಹೆಚ್ಚಿರುತ್ತದೆ. ಹಿಂದಿ ಬಿಗ್‌ ಬಾಸ್ (Big Boss) ಸೀಸನ್ 17ರ ವಿಜೇತ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ತಮ್ಮ ಮಗನಿಗೆ ಒಂದೂವರೆ ವರ್ಷ ಇದ್ದಾಗ ಅಪರೂಪದ ಮಾರಣಾಂತಿಕ ಕವಾಸಕಿ ಕಾಯಿಲೆ ಎದುರಾಗಿತ್ತು ಎಂಬ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದರು. ಅಲ್ಲದೇ ಈ ಅಪರೂಪದ ಕಾಯಿಲೆಯು ಗುಣ ಪಡಿಸಲು ಹಣಕ್ಕಾಗಿ ಪರದಾಡಿದ್ದಾಗಿಯೂ ಅವರು ತಿಳಿಸಿದ್ದರು. ಪ್ರಾಣಕ್ಕೆ ಕುತ್ತು ತರುವ ಈ ಕವಾಸಕಿ ಕಾಯಿಲೆ ಎಂದರೇನು, ಇದರ ಲಕ್ಷಣಗಳೇನು, ಇದರ ಪರಿಣಾಮಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಜಪಾನಿನ (Japan) ಮಕ್ಕಳ ತಜ್ಞ ಟೋಮಿಸಾಕಿ ಕವಾಸಕಿ (Dr Tomisaku Kawasaki) ಎಂಬುವವರು 1967ರಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಿದರು. ಹೀಗಾಗಿ ಈ ಕಾಯಿಲೆಗೆ ಇವರ ಹೆಸರನ್ನೇ ಇಡಲಾಗಿದೆ. 1ರಿಂದ 5 ವರ್ಷದ ಮಕ್ಕಳು ಈ ಕಾಯಿಲೆಗೆ ಒಳಗಾಗುವುದೇ ಹೆಚ್ಚು. 10 ವರ್ಷ ಮತ್ತು ಅದಕ್ಕಿಂತಲೂ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಈ ಸಿಂಡ್ರೋಮ್‌ ಕಾಣಿಸಿಸಿಕೊಳ್ಳುವುದು ಕಡಿಮೆ. ಕಾಯಿಲೆಯ ತೀವ್ರತೆ ಕಂಡು ಪೋಷಕರು ಭಯಪಡಬಹುದು. ಆದರೆ ಸೂಕ್ತ ಚಿಕಿತ್ಸೆ ನೀಡಿದರೆ ಮಕ್ಕಳು ಸುಲಭವಾಗಿಯೇ ಸಹಜ ಸ್ಥಿತಿಗೆ ಮರಳುತ್ತಾರೆ. ಇದರ ದೊಡ್ಡ ಸಮಸ್ಯೆಯೆಂದರೆ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಭಿವೃದ್ಧಿ ಹೊಂದುತ್ತದೆ. ಈ ಅಪಾಯದಿಂದ ಪಾರು ಮಾಡುವುದಕ್ಕಾಗಿ ವೈದ್ಯರು ಕೂಡ ಕೆಲವು ತಿಂಗಳುಗಳವರೆಗೆ ಮಕ್ಕಳನ್ನು ಕ್ಲಿನಿಕ್‌ಗೆ ಕರೆದುಕೊಂಡು ಬಂದು ಚಿಕಿತ್ಸೆ ತೆಗೆದುಕೊಳ್ಳಲು ಹೇಳುತ್ತಾರೆ.

ಕವಾಸಕಿ ಸೋಂಕಿನಿಂದ ಉರಿಯೂತ, ಕವಾಸಕಿ ಸಿಂಡ್ರೋಮ್ ಅಥವಾ ಮ್ಯೂಕೋಕ್ಯುಟೇನಿಯಸ್, ದುಗ್ಧರಸ ಗ್ರಂಥಿ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಈ ಕವಾಸಕಿ ಸೋಂಕಿನಿಂದ ಮಕ್ಕಳ ಹೃದಯದಲ್ಲಿ ಇರುವ ಪರಿಧಮನಿ ಫಿರಂಗಿಗಳು ಹಾನಿಯಾಗುತ್ತವೆ.

ಕವಾಸಕಿ ಸಿಂಡ್ರೋಮ್‌ಗೆ ಕಾರಣಗಳೇನು?
ಅತಿ ಅಪರೂಪದ ಕವಾಸಕಿ ಸಿಂಡ್ರೋಮ್‌ಗೆ ಕಾರಣಗಳೇನು ಎಂದು ವೈದ್ಯರು ಮತ್ತು ವೈದ್ಯಕೀಯ ತಜ್ಞರು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಆದರೆ ಈ ಬಗ್ಗೆ ಸೀಮಿತ ಮಾಹಿತಿ ಮಾತ್ರ ಲಭ್ಯವಾಗಿದೆ. ಅದಾಗ್ಯೂ ಇದರಿಂದ ಉಂಟಾಗುವ ಮರಣ ಪ್ರಮಾಣ ಶೇ.1ಕ್ಕಿಂತಲೂ ಕಡಿಮೆ ಇರುವುದರಿಂದ ಪೋಷಕರು ಆತಂಕಗೊಳ್ಳುವ ಅಗತ್ಯವಿಲ್ಲ.

ಇದನ್ನೂ ಓದಿ: Heartbreaking Incident: ಚಾರ್ಜ್ ಗಿರಿಸಿದ್ದ ಮೊಬೈಲ್ ಸ್ಪೋಟಗೊಂಡು ಯುವತಿ ದಾರುಣ ಸಾವು!

ಜಪಾನ್‌‌ನಲ್ಲಿ ಮೊದಲು ಕಾಣಿಸಿಕೊಂಡ ಕವಾಸಕಿ ಸೋಂಕು
ಕಳೆದ 44 ವರ್ಷಗಳ ಹಿಂದೆ ಅಂದರೆ 1976ರಲ್ಲಿ ಮೊದಲ ಬಾರಿಗೆ ಜಪಾನ್ ನಲ್ಲಿ ಕವಾಸಕಿ ಸೋಂಕಿನ ಬಗ್ಗೆ ಅಧ್ಯಯನದಲ್ಲಿ ತಿಳಿದು ಬಂದಿತು. ಆದರೆ ಮೊದಲ ಪ್ರಕರಣವು ಜಪಾನ್ ನಿಂದ ಹೊರ ಭಾಗದಲ್ಲಿ ಕಂಡು ಬಂದಿತು. ಕವಾಸಕಿ ಸೋಂಕು ಇರುವುದನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದ್ದಲ್ಲಿ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿ ದುಷ್ಪರಿಣಾಮ ಬೀರುವುದಿಲ್ಲ ಎಂದು ವೈದ್ಯರೇ ಸ್ಪಷ್ಟಪಡಿಸಿದ್ದಾರೆ.

ಕವಾಸಕಿ ಸೋಂಕಿನ ಲಕ್ಷಣಗಳು ಯಾವುವು?

  • ತುಟಿ ಒಣಗುವುದು ಹಾಗು ಬಿರಿಯುವುದು,
  • ದೇಹದ ಉಷ್ಣಾಂಶವು 5 ದಿನಗಳವರೆಗೂ 102 ಡಿಗ್ರಿಗಿಂತ ಹೆಚ್ಚಾಗಿರುವುದು
  • ಕಣ್ಣುಗಳು ಕೆಂಪಾಗುವುದು
  • ಕೈ ಮತ್ತು ಕಾಲು ಬೆರಳಿನ ಸಿಪ್ಪೆ ಸುಳಿಯುವುದು
  • ಕಿರಿಕಿರಿ ಎನಿಸುವುದು

ಅಪಾಯಗಳು:
ಈ ಸಿಂಡ್ರೋಮ್‌ ವೈರಲ್‌ ಸೋಂಕಿನಿಂದ ಉಂಟಾಗುತ್ತದೆ. ಕೆಲವು ಬಾರಿ ಇದನ್ನು ಪತ್ತೆ ಹಚ್ಚಲು ವೈದ್ಯರಿಗೇ ಕಷ್ಟವಾಗುತ್ತದೆ. ವೈದ್ಯರ ಪ್ರಕಾರ ಏಳು ದಿನಗಳೊಳಗೆ ಈ ಕಾಯಿಲೆಯನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಕೊರನರಿ ಆರ್ಟರೀಸ್‌ನಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚು. ಕೊರನರಿ ಆರ್ಟರೀಸ್‌ನಲ್ಲಿ ಬಿರುಕು ಹೃದಯ ಕಾಯಿಲೆಯ ದೊಡ್ಡ ಸಮಸ್ಯೆಯಾಗಿದ್ದು, ಇದರೊಂದಿಗೆ ಮಕ್ಕಳಲ್ಲಿ ಹಾರ್ಟ್‌ ಸ್ಟ್ರೋಕ್‌ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

‘ಏಳು ದಿನಗಳೊಳಗೆ ಈ ಕಾಯಿಲೆಯನ್ನು ಪತ್ತೆ ಹಚ್ಚಬೇಕು. ಆ ಬಳಿಕ ಪತ್ತೆ ಹಚ್ಚಿದರೂ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಕವಾಸಕಿ ಕಾಯಿಲೆಗೆ ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ ಮಕ್ಕಳು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು.

ಪತ್ತೆ ಹೇಗೆ?
ಮಕ್ಕಳಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ವೈದ್ಯರು ರೋಗಿಯ ರಕ್ತದಲ್ಲಿ ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್‌ ಎಷ್ಟು ಇದೆ ಎಂದು ಪರೀಕ್ಷಿಸುತ್ತಾರೆ. ಬಿಳಿ ರಕ್ತ ಕಣ ಮತ್ತು ಪ್ಲೇಟ್ಲೆಟ್‌ ಪ್ರಮಾಣ ಹೆಚ್ಚಾಗಿದ್ದರೆ ಇದು ಕವಾಸಕಿ ಸಿಂಡ್ರೋಮ್‌ನ ಲಕ್ಷಣ.

ಚಿಕಿತ್ಸೆ ಏನು?
ಕವಾಸಕಿ ಸಿಂಡ್ರೋಮ್‌ ಪತ್ತೆಯಾದ ಬಳಿಕ ಐವಿಐಜಿ ಡೋಸ್‌ನೊಂದಿಗೆ ಸಣ್ಣಮಟ್ಟದ ಡೋಸೇಜ್‌ನ ಆಸ್ಪಿರಿನ್‌ ಅನ್ನು 12 ಗಂಟೆ ಕಾಲ ನೀಡಲಾಗುವುದು. ‘ಈ ಚಿಕಿತ್ಸೆ ನೀಡಿದ ಬಳಿಕ ಮೊದಲ 24 ಗಂಟೆ ಅವಧಿಯೊಳಗೆ ಮಕ್ಕಳು ಚೇತರಿಸಿಕೊಳ್ಳುತ್ತಾರೆ. ಆದರೆ ರೋಗ ಲಕ್ಷಣಗಳು ಮುಂದುವರಿದರೆ ಇನ್ನೊಂದು ಡೋಸ್‌ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಈ ಚಿಕಿತ್ಸೆ ನೀಡಿದ ಬಳಿಕ 24ರಿಂದ 48 ಗಂಟೆಯೊಳಗೆ ಹೆಚ್ಚಿನ ಮಕ್ಕಳು ಚೇತರಿಸಿಕೊಳ್ಳುತ್ತಾರೆ’

ಫಾಲೋ ಅಪ್‌
ಚಿಕಿತ್ಸೆ ನೀಡದ ಬಳಿಕವೂ ಈ ಕಾಯಿಲೆಯು ಮಕ್ಕಳ ಕೊರನರಿ ಆರ್ಟರಿ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಚಿಕಿತ್ಸೆ ಪೂರ್ಣವಾದ ಬಳಿಕ ತಿಂಗಳಿಗೆ ಎರಡು ಬಾರಿಯಂತೆ ವೈದ್ಯರನ್ನು ಭೇಟಿ ಮಾಡಬೇಕು. ಆನಂತರ ವರ್ಷಕ್ಕೆ ಎರಡು ಬಾರಿ ವೈದ್ಯರನ್ನು ಕಾಣಬೇಕು. ಈ ಸಿಂಡ್ರೋಮ್‌ ಸಂಪೂರ್ಣವಾಗಿ ವಾಸಿಯಾಗುವುದರಿಂದ ಆದಷ್ಟು ಶೀಘ್ರ ಅಂದರೆ ಏಳು ದಿನಗಳೊಳಗೆ ರೋಗ ಪತ್ತೆ ಮಾಡಬೇಕು. ಜತೆಗೆ ಚಿಕಿತ್ಸೆ ತೆಗೆದುಕೊಂಡ ಬಳಿಕವೂ ಫಾಲೋ ಅಪ್‌ ಮಾಡುತ್ತಿರಬೇಕು